ಸಿರಿಧಾನ್ಯಗಳ ಬೆಳೆದು ಸಿರಿವಂತರಾಗಿ

7
ಕೃಷಿ ವಿಜ್ಞಾನಿ ಡಾ.ಎಂ.ಬಿ.ಪಾಟೀಲ ರೈತರಿಗೆ ಸಲಹೆ

ಸಿರಿಧಾನ್ಯಗಳ ಬೆಳೆದು ಸಿರಿವಂತರಾಗಿ

Published:
Updated:
Deccan Herald

ಕುಷ್ಟಗಿ: ‘ಬದುಕು ಕಟ್ಟಿಕೊಡುವ ಬೆಳೆಗಳನ್ನು ಬಿಟ್ಟು ರೈತರು ಕೇವಲ ಮಾರುಕಟ್ಟೆಗಳನ್ನು ಸೃಷ್ಟಿಸುವ ಬೆಳೆಗಳತ್ತ ವಾಲುತ್ತಿರುವುದು ಸರಿಯಲ್ಲ’ ಎಂದು ಕೃಷಿ ವಿಶ್ವವಿದ್ಯಾಲಯ ವಿಸ್ತರಣಾಧಿಕಾರಿ ಡಾ.ಎಂ.ಬಿ.ಪಾಟೀಲ ಹೇಳಿದರು.

ಇಲ್ಲಿನ ಕೃಷಿ ಇಲಾಖೆ ಕಚೇರಿಯಲ್ಲಿ ಸೋಮವಾರ ರೈತರಿಗೆ ಏರ್ಪಡಿಸಿದ್ದ 'ನ್ಯೂಟ್ರಿ ಸಿರಿಧಾನ್ಯ ಬೆಳೆಗಳ ತರಬೇತಿ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ನಮಗೆ ನೀರಿನ ಮಹತ್ವ ತಿಳಿದಿಲ್ಲ. ಯಾವ ಬೆಳೆಗೆ ಎಷ್ಟು ನೀರು ಬೇಕು ಎಂಬುದು ಗೊತ್ತಿಲ್ಲ. ಅಣೆಕಟ್ಟುಗಳ ಮೂಲಕ ಕೃತಕ ನೀರಾವರಿಯಲ್ಲಿ ಬೆಳೆಯುವ, ಅತಿಯಾದ ರಾಸಾಯನಿಕ ಬಳಕೆಯ ಭತ್ತದ ಅಕ್ಕಿಯಿಂದ ಮಹಿಳೆಯರ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆಯಿದೆ ಎಂಬುದು ತಜ್ಞರ ವರದಿಯಿಂದ ಧೃಡಪಟ್ಟಿದೆ. ಹಾಗಾಗಿ ರೈತರು ಹೆಚ್ಚಿನ ರೀತಿಯಲ್ಲಿ ವಿವಿಧ ಸಿರಿಧಾನ್ಯಗಳನ್ನು ಬೆಳೆಯುವತ್ತ ಆಸಕ್ತಿ ವಹಿಸಬೇಕು. ವೈಯಕ್ತಿಕ ಮತ್ತು ಸಾಮಾಜದ ಆರೋಗ್ಯ ಕಾಪಾಡುವಂಥ ಶಕ್ತಿ ಸಿರಿಧಾನ್ಯಗಳಲ್ಲಿದೆ’ ಎಂದು ಹೇಳಿದರು.

‘ಯಾವುದೊ ದೇಶದ ಬೇಡಿಕೆ ತಣಿಸುವ ಸಲುವಾಗಿ ನಮ್ಮ ನೆಲ, ಜಲ ವಾತಾವರಣಕ್ಕೆ ಹೊಂದಿಕೊಳ್ಳದ ಬೆಳೆಗಳನ್ನು ಬೆಳೆಯುವುದಕ್ಕಿಂತ ನಮ್ಮ ಪ್ರಾಕೃತಿಕ ಪರಿಸ್ಥಿತಿಗೆ ಹೊಂದಿಕೊಂಡು ಬೆಳೆಯುವ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕನಿಷ್ಠ ಪ್ರಮಾಣದಲ್ಲಾದರೂ ಬೆಳೆ ವೈವಿಧ್ಯತೆ ಅಳವಡಿಸಿಕೊಂಡರೆ ಉತ್ತಮ’ ಎಂದು ಸಲಹೆ ನೀಡಿದರು.

‘ಅತ್ಯಧಿಕ ಪ್ರಮಾಣದ ಆಂಟಿಬಯಾಟಿಕ್ಸ್ ಔಷಧ ಉಪಚಾರದಿಂದ ಬೆಳೆಯುವ ಫಾರಂ ಕೋಳಿಮಾಂಸ ಮತ್ತು ಮೊಟ್ಟೆಗಳನ್ನು ಸೇವಿಸುವುದರಿಂದ ದೇಹದಲ್ಲಿ ಅಪಾಯಕಾರಿ ಕಾಯಿಲೆಗಳು ನಮಗೆ ಅರಿವಿಲ್ಲದಂತೆ ದೇಹಕ್ಕೆ ಅಂಟಿಕೊಳ್ಳುತ್ತವೆ. ಅದರ ಬದಲಾಗಿ ಮನೆಯಲ್ಲಿಯೇ ನಾಟಿ ಕೋಳಿಗಳನ್ನು ಸಾಕಿದರೆ ಆರೋಗ್ಯಕ್ಕೆ ಪೂರಕವಾಗುತ್ತದೆ. ಅದೇ ರೀತಿ ಸಿರಿಧಾನ್ಯಗಳನ್ನು ಆಹಾರದಲ್ಲಿ ಬಳಸಿದರೆ ಉತ್ತಮ. ರೈತರು ಸಿರಿಧಾನ್ಯಗಳನ್ನು ಬೆಳೆದು ಮೊದಲು ತಮ್ಮ ಮಕ್ಕಳು, ಮನೆಯವರಿಗೆ ಸಾಕಾಗುವಷ್ಟು ಬಳಸಿ ಉಳಿದದ್ದನ್ನು ಮಾರಾಟ ಮಾಡಬೇಕು’ ಎಂದರು.

ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕಮತರ ಮಾತನಾಡಿ, ರೈತರು ಕೇವಲ ಮೆಕ್ಕೆಜೋಳ, ಸೂರ್ಯಕಾಂತಿ ಏಕ ಬೆಳೆಯನ್ನು ಪದೇ ಪದೇ ಬೆಳೆಯುವುದು ಒಳ್ಳೆಯದಲ್ಲ. ಆರ್ಥಿಕ ನೆಲೆ ಕಂಡುಕೊಳ್ಳಬೇಕಾದರೆ ಈ ಎರಡೂ ಬೆಳೆ ಬೆಳೆಯುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಲಭ್ಯವಾಗುವ ಮಳೆ ಮತ್ತು ನಿಸರ್ಗಕ್ಕೆ ಹೊಂದಿಕೊಂಡು ಕೃಷಿಯಲ್ಲಿ ತೊಡಗಬೇಕೆ ಹೊರತು ಕಾಟಾಚಾರದ ಕೃಷಿ ಮಾಡದಿರುವುದೇ ಒಳ್ಳೆಯದು ಎಂದು ಹೇಳಿದರು.

‘ಬರಬರುತ್ತ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು ಬರವನ್ನು ಸಹಿಸಿಕೊಂಡು ಬೆಳೆಯುವ ಬರಗು, ಹಾರಕ, ಸಾಮೆ, ಕೊರಲೆ, ನವಣೆಯಂತಹ ಸಿರಿಧಾನ್ಯಗಳನ್ನು ಬೆಳೆಯಬೇಕು. ಸಿರಿಧಾನ್ಯಗಳನ್ನು ಸಂಸ್ಕರಣೆ ಮಾಡುವ ಸುಧಾರಿತ ಯಂತ್ರಗಳೂ ಬಂದಿದ್ದು ಸಂಸ್ಕರಿಸಿದ ಸಿರಿಧಾನ್ಯ ಅಕ್ಕಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಇದೆ’ ಎಂದರು.

ರೈತರಾದ ಗುಂಡಪ್ಪ ಬೋದೂರು, ಶಿವನಗೌಡ ಪಾಟೀಲ, ತರಬೇತಿಯಲ್ಲಿ ಭಾಗವಹಿಸಿದ್ದ ರೈತರು ಸಿರಿಧಾನ್ಯಗಳ ಕುರಿತು ಅನುಭವ ಹಂಚಿಕೊಂಡರು.

ಕೃಷಿ ಅಧಿಕಾರಿ ಬಾಲಪ್ಪ ಜಲಗೇರಿ ಇದ್ದರು. ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಸೇರಿದ ಅನೇಕ ರೈತರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 ಫಾರಂ ಕೋಳಿಗಳ ದೇಹದಲ್ಲಿ ವಿಷಕಾರಿ ಅಂಶಗಳಿವೆ. ಮಾಂಸ, ಮೊಟ್ಟೆ ತಿನ್ನಲೇ ಬೇಕಿದ್ದರೆ ಮನೆಯಲ್ಲಿಯೇ ನಾಟಿ ಕೋಳಿ ಸಾಕಿ ಆರೋಗ್ಯವಂತರಾಗಿ.
- ಡಾ.ಎಂ.ಬಿ.ಪಾಟೀಲ, ಕೃಷಿ ವಿಜ್ಞಾನಿ.

 ಕೃಷಿಯಲ್ಲಿ ನೆಮ್ಮದಿ ಇದೆ. ಕಾಟಾಚಾರಕ್ಕೆ ವ್ಯವಸಾಯ ಮಾಡುವುದಕ್ಕಿಂತ ಬೇರೆ ಉದ್ಯೋಗದಲ್ಲಿ ತೊಡಗುವುದು ಒಳಿತು.
- ವೀರಣ್ಣ ಕಮತರ, ಸಹಾಯಕ ಕೃಷಿ ನಿರ್ದೇಶಕ.

 

 

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !