ಮಂಗಳವಾರ, ಜನವರಿ 18, 2022
24 °C

ಗಂಗಾವತಿ: ಸೇವಾ ಭದ್ರತೆಗೆ ಅತಿಥಿ ಉಪನ್ಯಾಸಕರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ಸೇವಾಭದ್ರತೆ, ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಬುಧವಾರ ನಗರದಲ್ಲಿ ಬೈಕ್ ರ್‍ಯಾಲಿ ನಡೆಸಿದರು.

ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎ.ಕೆ.ಮಹೇಶ್ ಕುಮಾರ್ ಮಾತನಾಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಿ, ಸೇವಾಭದ್ರತೆ ನೀಡುವ ಸಲುವಾಗಿ ರಾಜ್ಯ ಸಂಘಟನೆ ಕರೆ ನೀಡಿದ ಹಿನ್ನೆಲೆಯಲ್ಲಿ ಕಳೆದ 27 ದಿನಗಳಿಂದ ನಿರಂತರವಾಗಿ ಹೋರಾಟ ಮಾಡಲಾಗುತ್ತಿದೆ.

ಆದರೇ, ಸರ್ಕಾರ ಮಾತ್ರ ಈವರೆಗೆ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ಮೀನಾಮೇಷ ಎಣಿಸುತ್ತಿದೆ. ಈಗಾಗಲೇ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆಯುವ ಮೂಲಕ ಪತ್ರ ಚಳವಳಿಯನ್ನು ನಡೆಸಿದ್ದೇವೆ ಎಂದರು.

‘ನಮ್ಮದು ನ್ಯಾಯಯುತ ಬೇಡಿಕೆ, ಸುಮಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕೇವಲ ಕನಿಷ್ಠ ಮಾಸಿಕ ಗೌರವ ಭತ್ಯೆ ಪಡೆದು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ನಮಗೆ, ರಾಜ್ಯ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಕರ್ನಾಟಕ ನಾಗರೀಕ ಸೇವೆಯಲ್ಲಿ ಸೇವಾ ವಿಲೀನಗೊಳಿಸಿ, ಸೇವಾ ಭದ್ರತೆಯನ್ನು ಕಲ್ಪಿಸಬೇಕು‘ ಎಂದರು.

ಜೊತೆಗೆ ಈ ಹಿಂದೆ 10 ತಿಂಗಳ ಕಾಲ ಸೇವಾ ಅವಧಿ ನೀಡುತ್ತಿದ್ದು, ಸದ್ಯ 3 ತಿಂಗಳಿಗೆ ಸೀಮಿತಗೊಳಿಸಿದ್ದು, ಮೊದಲಿನಂತೆಯೇ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.

ಇದಕ್ಕೂ ಮುನ್ನ, ಎಸ್‌.ಕೆ.ಎನ್.ಜಿ ಕಾಲೇಜಿನಿಂದ ನಗರದ ಶ್ರೀ ಕೃಷ್ಣದೇವರಾಯ ವೃತ್ತದವರೆಗೆ ಬೈಕ್ ರ್‍ಯಾಲಿ ನಡೆಸಿದ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.

ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ಪ್ರಭಾರಿ ತಹಶೀಲ್ದಾರ ವಿ.ಎಚ್.ಹೊರಪೇಟೆ ಅವರ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದರು.

ಅತಿಥಿ ಉಪನ್ಯಾಸಕರಾದ ಪಾಂಡುರಂಗ ಅಗ್ನಿಹೋತ್ರಿ, ಸೋಮಶೇಖರ್, ತಾಯಪ್ಪ, ಖಾಜಾಸಾಬ್ ಗಡಾದ್, ವಿಜಯಮಹಾಂತೇಶ್, ರಾಘವೇಂದ್ರ ಚೌಡ್ಕಿ, ಲಕ್ಷ್ಮೀದೇವಿ, ರೇಣುಕಾ, ಕೃಷ್ಣಕುಮಾರ್, ಪಾಗುಂಡಪ್ಪ, ರಾಘವೇಂದ್ರ, ಶಿವುಕುಮಾರ್, ಹನುಮಂತಪ್ಪ, ನಟರಾಜ್ ನಾಯ್ಕ್, ಬಾಬು ರಾಥೋಡ್, ಸೇರಿದಂತೆ ಹಲವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.