ಬುಧವಾರ, ಮಾರ್ಚ್ 29, 2023
32 °C

ಕನಕಗಿರಿ: ಪಾಳು ಬಿದ್ದ ಗುರುಭವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಗಿರಿ: ಶಿಕ್ಷಕರ ಅನುಕೂಲಕ್ಕಾಗಿ 2008– 09ರಲ್ಲಿ ಇಲ್ಲಿನ ಗೊಲಗೇರಪ್ಪ ಕಾಲೊನಿಯಲ್ಲಿ ನಿರ್ಮಿಸಿದ ಎಂಟು ಕೊಠಡಿಯುಳ್ಳ ಗುರುಭವನ ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ.

ನಿರ್ಮಿತಿ ಕೇಂದ್ರದವರು ಕಟ್ಟಡ ಕಾಮಗಾರಿ ಕೈಗೊಂಡಿದ್ದರು. ಕಳಪೆ ಗುಣಮಟ್ಟದ ಕಾಮಗಾರಿ ಕಾರಣ ಗುರುಭವನಕ್ಕೆ ಹಾಕಿರುವ ಕಿಟಕಿ, ಬಾಗಿಲು, ಮೇಲ್ಛಾವಣಿ ಹಾಳಾಗಿವೆ. ಕಿಟಕಿಗಳ ಗಾಜುಗಳನ್ನು ದುಷ್ಕರ್ಮಿಗಳು ಒಡೆದು ಹಾಕಿದ್ದಾರೆ. ಸದ್ಬಳಕೆಯಾಗದ ಕಾರಣ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ ಎನ್ನುತ್ತಾರೆ ಶಿಕ್ಷಕರು.

ಕಾಮಗಾರಿ ಕಳಪೆ ಗುಣಮಟ್ಟದಲ್ಲಿ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ಯಾರೆ ಎನ್ನಲಿಲ್ಲ. ನಿರ್ವಹಣೆ ಮಾಡಬೇಕಿದ್ದ ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮೌನ ವಹಿಸಿದ್ದಾರೆ. ಗುರುಭವನಕ್ಕೂ ನಮಗೂ ಸಂಬಂಧವಿಲ್ಲದಂತೆ ಅಧಿಕಾರಿಗಳು ವರ್ತಿಸಿದ ಪರಿಣಾಮ ಯಾವೊಬ್ಬ ಶಿಕ್ಷಕ ಅಲ್ಲಿ ವಾಸಿಸಲು ಹೋಗುತ್ತಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಶಿಕ್ಷಕರೊಬ್ಬರು ದೂರಿದರು.

ಮನೆಗಳಿಗೆ ಹಾಕಿರುವ ವಿದ್ಯುತ್ ಮೀಟರ್‌ಗಳನ್ನು ಕಿತ್ತು ಹಾಕಲಾಗಿದೆ. ಗುರುಭವನದ ಮುಂದಿನ ಗಿಡಗಳಿಗೆ ದನಕರುಗಳನ್ನು ಕಟ್ಟಿದ್ದರಿಂದ ಗಲೀಜಾಗಿದೆ. ಕಟ್ಟಡದ ಮೆಟ್ಟಿಲು ಬಳಿ ಕಟ್ಟಿಗೆ ಸಂಗ್ರಹಿಸಲಾಗಿದೆ. ಹಾಸಿಗೆಗಳನ್ನು ಗೋಡೆಗೆ ಹಾಕಲಾಗಿದೆ. ಹಾಸಿಗೆ, ಹೊದಿಕೆಗಳು, ತಲೆದಿಂಬು, ಜೂಜಾಟಕ್ಕೆ ಬಳಸಿ ಎಸೆದ ಇಸ್ಪೀಟ್ ಎಲೆಗಳು, ಬೀಡಿ, ಸಿಗರೇಟ್ ತುಂಡುಗಳು ಶುಕ್ರವಾರ ಸ್ಥಳಕ್ಕೆ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದಾಗ ಕಂಡು ಬಂದವು.

ಶಿಕ್ಷಕರಿಗೆ ಅದರಲ್ಲಿಯೂ ಮಹಿಳಾ ಶಿಕ್ಷಕರಿಗೆ ಅನುಕೂಲವಾಗುವಂತ ಸ್ಥಳದಲ್ಲಿ ಗುರುಭವನ ನಿರ್ಮಾಣ ಮಾಡಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ತಾಲ್ಲೂಕಿನ 280ಕ್ಕೂ ಹೆಚ್ಚು ಶಿಕ್ಷಕರಿಗೆ ಇದೊಂದೆ ಗುರುಭವನ ಇರುವುದು ಸಮಸ್ಯೆಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಶಂಶಾದಬೇಗ್ಂ ತಿಳಿಸಿದರು.

ಪಟ್ಟಣ ಸೇರಿದಂತೆ ತಾಲ್ಲೂಕಿನ ನವಲಿ, ಹುಲಿಹೈದರ, ಮುಸಲಾಪುರ, ಚಿಕ್ಕಡಂಕನಕಲ್ ಸೇರಿದಂತೆ ಹಲವು ಗ್ರಾಮೀಣ ಪ್ರದೇಶದಲ್ಲಿ ಗುರುಭವನದ ಅವಶ್ಯಕತೆ ಇದೆ. ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕೆಂದು ಅವರು ಮನವಿ ಮಾಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.