ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಿಗೆ ಪುಡಿ ಹೊರಹಾಕುವ ಯಂತ್ರ ಆವಿಷ್ಕಾರ; ಗುರುನಾಥ ಪತ್ತಾರ ಸಾಧನೆ

ಹನುಮನಾಳ ಗ್ರಾಮದ ಸಾಮಿಲ್‌ ಕಾರ್ಮಿಕ ಗುರುನಾಥ ಪತ್ತಾರ ಸಾಧನೆ; ಜನರ ಮೆಚ್ಚುಗೆ
Last Updated 22 ಸೆಪ್ಟೆಂಬರ್ 2020, 2:40 IST
ಅಕ್ಷರ ಗಾತ್ರ

ಹನುಮಸಾಗರ: ಸಮೀಪದ ಹನುಮನಾಳ ಗ್ರಾಮದ ಗುರುನಾಥ ಪತ್ತಾರ ಅವರು ಸಾಮಿಲ್‌ನಲ್ಲಿ ಕಟ್ಟಿಗೆ ಪುಡಿಯನ್ನು ಹೊರ ಸಾಗಿಲಸಲು ಯಂತ್ರವೊಂದನ್ನು ಆವಿಷ್ಕರಿಸಿದ್ದಾರೆ.

ನಾಲ್ಕನೇ ತರಗತಿ ಓದಿರುವ ಗುರುನಾಥ ಪತ್ತಾರ ಅವರು ಸಾಮಿಲ್‌ನಲ್ಲಿ ಕೆಲಸ ಮಾಡುತ್ತಾರೆ. ಸೃಜನಶೀಲ ಚಟುವಟಿಕೆಯಿಂದಾಗಿ ಈಗ ಎಲ್ಲರ ಗಮನ ಸೆಳೆದಿದ್ದಾರೆ.

ಸಾಮಾನ್ಯವಾಗಿ ಸಾಮಿಲ್‍ಗಳಲ್ಲಿ ಕಟ್ಟಿಗೆ ಕೊರೆಯುವಿಕೆಯಿಂದ ಹೊರಬರುವ ಕಟ್ಟಿಗೆ ಪುಡಿ ಯಂತ್ರದ ಕೆಳಭಾಗದಲ್ಲಿ ಸಂಗ್ರಹವಾಗುತ್ತದೆ. ತಗ್ಗಿನಲ್ಲಿ ಇಳಿದು ದೂಳಿನ ನಡುವೆ ಪುಡಿಯನ್ನು ಹೊರ ಸಾಗಿಸುವುದು ತ್ರಾಸದಾಯಕ ಕೆಲಸ. ಎರಡು ದಿನಕ್ಕೆ ಸುಮಾರು 20 ಚೀಲದಷ್ಟು ಕಟ್ಟಿಗೆ ಪುಡಿ ಸಂಗ್ರಹವಾಗುತ್ತದೆ. ಒಂದು ಬಾರಿ ಹೊರ ಸಾಗಿಸಲು ₹500ಗೆ ಗುತ್ತಿಗೆ ನೀಡುತ್ತಾರೆ.

ಇದಕ್ಕೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಗುರುನಾಥ ಪತ್ತಾರ ಅವರು ಈ ಯಂತ್ರವನ್ನು ಕಂಡು ಹಿಡಿದಿದ್ದಾರೆ.

ಯಂತ್ರದ ಕಾರ್ಯ ಹೇಗೆ?: ಸಾಮಿಲ್‍ನ ಚಕ್ರಕ್ಕೆ ಮತ್ತೊಂದು ಚಕ್ರ ಜೋಡಿಸಿ ಅದಕ್ಕೆ ಪಟ್ಟ ಹಾಕಿದ್ದಾರೆ. ಕಟ್ಟಿಗೆ ಡಬ್ಬ ತಯಾರಿಸಿ ಅದರ ಒಳಗೆ ಹವಾ ನಿಯಂತ್ರಣಕ್ಕೆ ತಗಡಿನ ಕವಚ ಅಳವಡಿಸಿದ್ದಾರೆ.

ಡಬ್ಬದ ಒಳಭಾಗದಲ್ಲಿ ಮೂರು ರೆಕ್ಕೆಗಳುಳ್ಳ 21 ಇಂಚಿನ ಫ್ಯಾನ್ ಅಳವಡಿಸಿದ್ದಾರೆ. ಡಬ್ಬದಿಂದ ಕಟ್ಟಿಗೆ ಪುಡಿ ಬೀಳುವ ದೋಣಿಗೆ ಒಂದು ಪೈಪ್ ಹಾಗೂ ಪುಡಿ ಹೊರ ಸಾಗಿಸಲು ಪೈಪ್‍ಗಳನ್ನು ಅಳವಡಿಸಿದ್ದಾರೆ. ಸಾಮಿಲ್‍ನಲ್ಲಿ ಕಟ್ಟಿಗೆ ಕೊರೆಯುವ ಕೆಲಸ ಆರಂಭವಾದರೆ ಚಕ್ರ ತಿರುಗುತ್ತದೆ. ಚಕ್ರಕ್ಕೆ ಅಳವಡಿಸಿರುವ ಬೆಲ್ಟ್ ಸಹಾಯದಿಂದ ಡಬ್ಬದಲ್ಲಿರುವ ಫ್ಯಾನ್ ವೇಗವಾಗಿ ತಿರುಗುತ್ತದೆ.

ತಿರುಗುವಿಕೆಯಿಂದ ಡಬ್ಬದಲ್ಲಿ ಗಾಳಿಯ ಒತ್ತಡ ನಿರ್ಮಾಣವಾಗಿ ತಗ್ಗಿನಲ್ಲಿರುವ ಕಟ್ಟಿಗೆ ಪುಡಿಯನ್ನು ಸೆಳೆದುಕೊಳ್ಳುತ್ತದೆ. ಡಬ್ಬದಲ್ಲಿ ಫ್ಯಾನ್ ರೆಕ್ಕೆಗಳನ್ನು ಹಿಮ್ಮುಖವಾಗಿ ಅಳವಡಿಸಿರುವುದರಿಂದ ಪುಡಿ ಪೈಪ್‌ ಮೂಕ ಹೊರ ಹೋಗುತ್ತದೆ.

‘ಇದು ಆರಂಭಿಕ ಪ್ರಯೋಗ ಅಷ್ಟೆ. ಮುಂದಿನ ದಿನಗಳಲ್ಲಿ ಸುಧಾರಿತ ವಸ್ತುಗಳನ್ನು ಉಪಯೋಗಿಸಿಕೊಂಡು ಪರಿಣಾಮಕಾರಿಯಾಗಿ ಕೆಲಸ ಮಾಡುವ ಯಂತ್ರ ತಯಾರಿಸುವ ಉದ್ದೇಶವಿದೆ. ಇದನ್ನು ಸಾಮಿಲ್‍ನಲ್ಲಿ ಅಷ್ಟೆ ಅಲ್ಲ, ಮಂಡಾಳು, ಅವಲಕ್ಕಿ ತಯಾರಿಸುವ ಭಟ್ಟಿಯಲ್ಲಿ, ಅಕ್ಕಿ ಕಾರ್ಖಾನೆಯಲ್ಲೂ ಬಳಕೆ ಮಾಡಬಹುದು' ಎಂದು ಗುರುನಾಥ ಪತ್ತಾರ ಹೇಳುತ್ತಾರೆ.

ಕಾರ್ಮಿಕರಿಲ್ಲದೆ ಕೇವಲ ಯಂತ್ರದ ಮೂಲಕ ಈಗ ಕಟ್ಟಿಗೆ ಪುಡಿ ಹೊರ ಬರುತ್ತಿದೆ. ಇದರಿಂದ ಕೂಲಿ ಆಳಿನ ಸಮಸ್ಯೆ ನಿವಾರಣೆ ಆಗುತ್ತದೆ. ಅಲ್ಲದೆ, ದೂಳಿನ ಸಮಸ್ಯೆಯೂ ಇರುವುದಿಲ್ಲ. ಬಾವಿಯಿಂದ ಮೋಟಾರ್‌ ಮೂಲಕ ನೀರೆತ್ತಿದಂತೆ ಪುಡಿ ಹೊರ ಬರುತ್ತಿದೆ ಎಂದು ವಿವರಿಸಿದರು.

ಹೆಚ್ಚಿನ ಮಾಹಿತಿಗೆ 73535 49540, 87479 82011) ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT