'ಹೈಕ ಭಾಗದಲ್ಲಿಯೇ ಎರಡನೇ ರಾಜಧಾನಿಯಾಗಲಿ'

7
ಬಂದ್‌ಗೆ ಇಲ್ಲ ಬೆಂಬಲ: ಅಭಿವೃದ್ಧಿ, ಅಸಮಾನತೆ ನಿವಾರಣೆಗೆ ಪ್ರತಿಭಟನೆ

'ಹೈಕ ಭಾಗದಲ್ಲಿಯೇ ಎರಡನೇ ರಾಜಧಾನಿಯಾಗಲಿ'

Published:
Updated:
Deccan Herald

ಕೊಪ್ಪಳ: ‘ಉತ್ತರ ಕರ್ನಾಟಕ ಬಂದ್ ನಡೆದರೂ ನಾವು ಯಾವುದೇ ಕಾರಣಕ್ಕೆ ಬೆಂಬಲಿಸುವುದಿಲ್ಲ’. ಹೀಗೆ ತಮ್ಮ ನಿಲುವನ್ನು ಈ ಭಾಗದ ಹೋರಾಟಗಾರರು, ರೈತ ನಾಯಕರು, ಪ್ರಗತಿಪರ ಸಂಘಟನೆ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಆದರೆ ಬಂದ್ ರದ್ದು ಮಾಡಿರುವ ಕುರಿತು ಬುಧವಾರ ಮಾಹಿತಿಯಿದ್ದು, ‘ಈ ಭಾಗದ ಅಭಿವೃದ್ಧಿ, ಅಸಮಾನತೆ ಕುರಿತು ಚರ್ಚೆಯಾಗಬೇಕು. ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಸರ್ಕಾರ ಶ್ರಮಿಸಬೇಕು’ ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.

‘ಉತ್ತರ ಕರ್ನಾಟಕ ಎಂದರೆ ಮುಂಬೈ ಕರ್ನಾಟಕ ಎಂಬ ಭಾವನೆ ಈ ಭಾಗದ ಜನರಲ್ಲಿದ್ದು, ಹೋರಾಟದ ಹೆಸರಿನಲ್ಲಿ ತಮ್ಮ ಭಾಗಕ್ಕೆ ಎಲ್ಲ ಸೌಲಭ್ಯ ಬಳಸಿಕೊಳ್ಳುತ್ತಿದ್ದಾರೆ ಎಂಬ ಅಸಮಾಧಾನ ಎಲ್ಲೆಡೆ ಹೊಗೆಯಾಡುತ್ತಿದೆ. ಈ ಭಾಗದ ಅಭಿವೃದ್ಧಿಗೆ 371 (ಜೆ) ವಿಧಿಯನ್ನು ತಂದಿದ್ದು, ಅದನ್ನು ಸಮರ್ಪಕ ಅನುಷ್ಠಾನ ಮಾಡಿದರೆ ಸಾಕು’ ಎಂಬುವುದು ಬಹುತೇಕರ ಅಭಿಪ್ರಾಯ. 

'ಬೆಳಗಾವಿ ಎರಡನೇ ರಾಜಧಾನಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿರುವುದಕ್ಕೆ ನಮ್ಮ ವಿರೋಧ ಇದೆ. ಹೈ-ಕ ಭಾಗದದಲ್ಲೇ ಎರಡನೇ ರಾಜಧಾನಿಯಾಗಬೇಕು' ಎಂದು ಹೈದರಾಬಾದ್-ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ.ಎಸ್.ಗಾಣಿಗೇರ ಆಗ್ರಹಿಸುತ್ತಾರೆ.

'ಈ ಭಾಗದ ಅಭಿವೃದ್ಧಿಗೆ ದಕ್ಷಿಣ ಮತ್ತು ಮುಂಬೈ ಕರ್ನಾಟಕದ ಜನಪ್ರತಿನಿಧಿಗಳು ಅನ್ಯಾಯ ಮಾಡಿದ್ದು, ಹೋರಾಟದ ಹೆಸರಿನಲ್ಲಿ ತಮ್ಮ ಪ್ರದೇಶಕ್ಕೆ ಲಾಭ ಮಾಡಿಕೊಳ್ಳುತ್ತಿದ್ದಾರೆ' ಎಂದು ಪ್ರಗತಿಪರ ಸಂಘಟನೆಯ ಶೀಲವಂತರ ಆರೋಪಿಸುತ್ತಾರೆ.

‘ಅಖಂಡ ಕರ್ನಾಟಕಕ್ಕೆ ಬೆಂಬಲ: ಕರ್ನಾಟಕ ಏಕೀಕರಣಕ್ಕಾಗಿ ನಮ್ಮ ಭಾಗ ಎಲ್ಲರಿಗಿಂತ ಹೆಚ್ಚು ಶ್ರಮ ವಹಿಸಿದೆ. 50 ವರ್ಷಗಳ ಹಿಂದೆಯೇ ಅಳವಂಡಿಯ ಶಿವಮೂರ್ತಿಸ್ವಾಮಿಯವರ ನೇತೃತ್ವದಲ್ಲಿ 'ಅಕನಿರಾ' (ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ) ಪರಿಷತ್ ಸ್ಥಾಪಿಸಿ ತ್ಯಾಗ, ಬಲಿದಾನಗಳ ಮೂಲಕ ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದೆ. ಆದ್ದರಿಂದ ಹೊಸ ರಾಜ್ಯ ಬೇಡಿಕೆ, ಉತ್ತರ ಕರ್ನಾಟಕ ಬಂದ್ ಹೆಸರಿನಲ್ಲಿ ಪ್ರತ್ಯೇಕತೆ ಮೂಡಿಸುತ್ತಿರುವುದು ಖಂಡನೀಯ’ ಎಂದು ಪ್ರಗತಿಪರ ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ ಹೇಳುತ್ತಾರೆ.

ಹೈದರಾಬಾದ್‌–ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡಿರುವ 371 (ಜೆ)ವಿಧಿಯೇ ಸಾಕು. ಶಿಕ್ಷಣದಲ್ಲಿ ಶೇ 70, ಉದ್ಯೋಗದಲ್ಲಿ ಶೇ 70 ಮೀಸಲಾತಿ ನೀಡಿದ್ದಾರೆ. ಇನ್ನೇನು ಬೇಕು ಎಂದು ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ ಪ್ರಶ್ನಿಸುತ್ತಾರೆ.

‘ಎಲ್ಲ ಸೌಲಭ್ಯಗಳನ್ನು ಸರ್ಕಾರ ನೀಡಿದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ಭಾಗ ಅಭಿವೃದ್ಧಿಯಲ್ಲಿ ಹಿಂದುಳಿದೆ. ಹೈ-ಕ ಅಭಿವೃದ್ಧಿ ಮಂಡಳಿ ಇದೆ. ಸಾವಿರಾರು ಕೋಟಿ ಅನುದಾನ ಬಳಸಿಕೊಳ್ಳದೇ ಹಿಂದಕ್ಕೆ ಹೋಗುತ್ತಿದೆ. ಇದಕ್ಕೆ ಯಾರು ಹೊಣೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಪ್ರತ್ಯೇಕ ರಾಜ್ಯ, ಬಂದ್ ಎಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ತಮ್ಮ ಉತ್ತರಾದಾಯಿತ್ವವನ್ನು ಪ್ರದರ್ಶಿಸಿ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಶ್ರಮಿಸಬೇಕು’ ಎಂದು ಹೇಳುತ್ತಾರೆ.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !