ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಉತ್ತರಿ ಮಳೆ ಸಮೃದ್ಧ, ಹಿರೇಹಳ್ಳಕ್ಕೆ ಹರಿದು ಬಂದ ನೀರು

ಜಮೀನುಗಳಲ್ಲಿ ನಿಂತ ನೀರು: ಹಿಂಗಾರು ಬಿತ್ತೆನೆ ಆರಂಭ
Last Updated 26 ಸೆಪ್ಟೆಂಬರ್ 2019, 19:46 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಉತ್ತರಿ ಮಳೆ ಸಮೃದ್ಧವಾಗಿ ಸುರಿದಿದ್ದು, ಹಿಂಗಾರು ಬಿತ್ತನೆಗೆ ರೈತರು ಸಿದ್ಧತೆ ನಡೆಸಿದ್ದಾರೆ.

ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ಜಾವದವರೆಗೆ ಮಳೆ ಸುರಿದ ಪರಿಣಾಮ ಎಲ್ಲೆಡೆ ನೀರು ಹರಿದಾಡಿಚಳಿಯ ವಾತಾವರಣ ಉಂಟಾಯಿತು. ಕಳೆದ ಎರಡು ತಿಂಗಳಿನಿಂದ ಅಲ್ಪಸ್ವಲ್ಪ ಮಳೆಯಿಂದ ಬೆಳೆಗಳು ಜೀವ ಹಿಡಿದಿದ್ದವು. ಉತ್ತರಿ ಮಳೆ ಮೊದಲ ಚರಣ ಉತ್ತಮವಾಗಿ ಆರಂಭವಾಗಿದೆ. ಒಣ ಬೇಸಾಯದ ಜಮೀನುಗಳು ನೀರಿಗೆ ಬಾಯ್ದೆರೆದುಕೊಂಡು ನಿಂತಿದ್ದವು. ಬಿರುಸಾದ ಮಳೆಯಿಂದ ಇಳೆ ತಂಪಾಯಿತು.

ನಗರ ಪ್ರದೇಶದಲ್ಲಿ ಚರಂಡಿಗಳು ತುಂಬಿ ಹರಿದವು. ನಗರದ ಪಕ್ಕದಲ್ಲಿರುವ ಹಿರೇಹಳ್ಳವನ್ನು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ನೇತೃತ್ವದಲ್ಲಿ 26 ಕಿ.ಮೀ ಸ್ವಚ್ಛಗೊಳಿಸಿದ ನಂತರ ಮೊದಲ ಬಾರಿಗೆ ಹಳ್ಳದಲ್ಲಿ ನೀರು ಹರಿದು ಬರುತ್ತಿದ್ದು, ಸಂತಸಕ್ಕೆ ಕಾರಣವಾಗಿದೆ. ಶ್ರೀಗಳ ಸಾಮಾಜಿಕ ಸೇವಾ ಕಾರ್ಯವನ್ನು ಮೆಚ್ಚಿಕೊಂಡಿದ್ದ ಜನತೆ. ಹಳ್ಳದಲ್ಲಿ ಹರಿಯುತ್ತಿರುವ ನೀರನ್ನು ದದೇಗಲ್‌ ಸೇತುವೆ ಮೇಲಿಂದ ವೀಕ್ಷಿಸಿ ಪುಳಕಿತರಾಗುತ್ತಿದ್ದಾರೆ.

ಸತತ ಬರಗಾಲದಿಂದ ಕಂಗೆಟ್ಟಿದ್ದ ಜನಕ್ಕೆ ಕಳೆದ ಮೂರು ದಿನಗಳಿಂದ ಮಳೆಯ ಆಗಮನದಿಂದ ಸಂತಸಗೊಂಡಿದ್ದಾರೆ. ನೀರಿನ ಅಭಾವದಿಂದ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಸಂಚಕಾರ ಬಂದಿತ್ತು. ಬೇಸಿಗೆಯಲ್ಲಿ ಆಗುವ ತೊಂದರೆಯನ್ನು ಮಳೆಗಾಲದಲ್ಲಿಯೂ ಅನುಭವಿಸುತ್ತಿದ್ದರು. ಅಂತರ್ಜಲ ಕೊರತೆಯಿಂದ ಕೊಳವೆ ಬಾವಿಗಳು ಬತ್ತಿದ್ದವು. ಇಂದು ಕೂಡಾ ದಟ್ಟವಾದ ಕಪ್ಪು ಮೋಡಗಳು ಕವಿದಿದ್ದು, ರಾತ್ರಿ ಮಳೆಯಾಗುವ ಸೂಚನೆ ಇದೆ.

ಮಳೆಯಿಂದ ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ನೀರು ನುಗ್ಗಿತ್ತು. ವಿದ್ಯುತ್‌ ಕಡಿತಗೊಂಡಿದ್ದರಿಂದ ಸಂಪೂರ್ಣ ಕತ್ತಲು ಆವರಿಸಿತ್ತು. ಹೊಸಪೇಟೆ, ಹುಬ್ಬಳ್ಳಿ ಕಡೆಯಿಂದ ಬರುವ ಬಸ್‌ಗಳು ಬಸ್‌ ನಿಲ್ದಾಣದ ಹೊರಗೆ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಂಡು ತೆರಳಿದವು. ಗುರುವಾರ ಬೆಳಿಗ್ಗೆ ನೀರು ತೆರವುಗೊಂಡ ನಂತರ ಎಂದಿನಂತೆ ಸಂಚಾರ ಆರಂಭವಾಯಿತು.

ಸಮೀಪದ ರಾಜಕಾಲುವೆಯಲ್ಲಿ ಗಿಡ, ಕಸಕಂಟಿಗಳಿಂದ ತುಂಬಿಕೊಂಡಿದ್ದರಿಂದ ಬಸ್‌ ನಿಲ್ದಾಣಕ್ಕೆ ನೀರು ಹೊಕ್ಕಿತ್ತು. ಕಾಲುವೆ ಸ್ವಚ್ಛಗೊಳಿಸದ ಪರಿಣಾಮ ಕೆಲವು ಬಡಾವಣೆಗಳಲ್ಲಿ ನೀರು ನುಗ್ಗಿ ತೊಂದರೆಯಾಯಿತು.

ಯಲಬುರ್ಗಾ, ಕುಕನೂರ, ಕುಷ್ಟಗಿ, ಗಂಗಾವತಿ, ಕನಕಗಿರಿ, ಕಾರಟಗಿ ತಾಲ್ಲೂಕುಗಳಲ್ಲಿ ವ್ಯಾಪಕ ಮಳೆಯಾಗಿದೆ.

ಭತ್ತ ನಾಟಿಗೆ ಅನುಕೂಲ: ಗಂಗಾವತಿ, ಕಾರಟಗಿ, ಕೊಪ್ಪಳ ತಾಲ್ಲೂಕಿನ ಮುನಿರಾಬಾದ್, ಹಿಟ್ನಾಳ ಹೋಬಳಿಯಲ್ಲಿ ಉತ್ತರಿ ಮಳೆಯಿಂದ ಭತ್ತ ನಾಟಿಗೆ ಅನುಕೂಲವಾಗಿದೆ. ಮೇಲಿಂದ ಮೇಲೆ ಎಡದಂಡೆ ಕಾಲುವೆ ಒಡೆದು ರೈತರಿಗೆ ಸಮಸ್ಯೆಯಾಗಿತ್ತು. ಕೆಳಭಾಗದಲ್ಲಿ ನೀರು ಬಾರದೇ ರೈತರು ಪ್ರತಿಭಟನೆ ನಡೆಸಿದ್ದರು. ಈ ಎಲ್ಲ ಸಮಸ್ಯೆಗೆ 'ಉತ್ತರೆ' ಮಳೆ ಮುಕ್ತಿ ಹಾಡಿದ್ದು, ರೈತರು, ಜಲಾಶಯದ ಅಧಿಕಾರಿಗಳು ನಿರಾಳವಾಗಿದ್ದಾರೆ.

ಎರಡನೇ ಬೆಳೆಗೆ ನೀರು ಹಾಯಿಸುವ ಮೊದಲೇ ಬಂದ ಮಳೆಯಿಂದ ರೈತರ ಶ್ರಮವೂ ತಪ್ಪಿದೆ.

ಗೋವಿನಜೋಳ, ಸಜ್ಜೆಗೆ ಆತಂಕ: ಕಾಳುಕಟ್ಟುವ ಹಂತದಲ್ಲಿ ಇದ್ದ ಮೆಕ್ಕೆಜೋಳ, ಸಜ್ಜೆ, ಹೈಬ್ರೀಡ್‌ ಜೋಳದ ಬೆಳೆಗೆ ಮಳೆಯಿಂದ ತೊಂದರೆಯಾಗಿದೆ. ಗೋವಿನಜೋಳ ಸಂಪೂರ್ಣ ನೆಲಕಚ್ಚುವ ಭೀತಿ ಇದೆ. ಕೆಲವು ರೈತರು ಮಳೆಯಿಲ್ಲದೆ ತಂಪಾದ ವಾತಾವರಣದಿಂದ ಬೆಳೆದ ಸಜ್ಜೆ ರಾಶಿಯನ್ನು ಮಾಡಿದ್ದಾರೆ. ಆದರೆ ಬಹುತೇಕ ರೈತರು ವಿಳಂಬ ಮಾಡಿ ಬಿತ್ತಿರುವ ಸಜ್ಜೆಗೆ ಮಳೆಯಿಂದ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT