ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮ ಮಾಲಾ ವಿಸರ್ಜನೆ ಸಿದ್ಧತೆ: ಪರಿಶೀಲನೆ

Last Updated 29 ನವೆಂಬರ್ 2022, 13:28 IST
ಅಕ್ಷರ ಗಾತ್ರ

ಗಂಗಾವತಿ: ಅಂಜನಾದ್ರಿ ಹನುಮ ಮಾಲಾ ವಿಸರ್ಜನೆ ಅಂಗವಾಗಿ ಮಂಗಳವಾರ ಶಾಸಕ ಪರಣ್ಣ ಮುನವಳ್ಳಿ ಅವರು, ಅಂಜನಾದ್ರಿ ಹಿಂಬದಿಯ ವೇದಪಾಠ ಸ್ಥಳಕ್ಕೆ ತೆರಳಿ ಸಿದ್ಧತೆಗಳನ್ನು ಪರಿಶೀಲಿಸಿದರು.

ನಂತರ ಮಾತನಾಡಿದ ಅವರು, ಹನುಮ ಮಾಲಾ ವಿಸರ್ಜನೆಗೆ ಬರುವ ಭಕ್ತರಿಗೆ ಆಹಾರ, ಕುಡಿಯುವ ನೀರು, ಸ್ನಾನಗೃಹ, ಪಾರ್ಕಿಂಗ್, ಬಸ್‌ ಸೌಕರ್ಯ ವ್ಯವಸ್ಥಿತವಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಂಚಾರ ದಟ್ಟಣೆ ಕಂಡು ಬಂದಲ್ಲಿ 3 ದಿನ ವ್ಯಾಪಾರಿಗಳಿಗೆ ಪರ್ಯಾಯ ಸ್ಥಳ ಒದಗಿಸಿಕೊಡಬೇಕು ಎಂದು ತಹಶೀಲ್ದಾರ್‌ ಅವರಿಗೆ ಸೂಚಿಸಿದರು.

ವೇದಪಾಠ ಶಾಲೆ ಮಾರ್ಗದ ರಸ್ತೆ ಬಂಡೆ ತೆಗ್ಗುಗಳಿಂದ ಕೂಡಿದ್ದು, ತೆಗ್ಗುಗಳನ್ನು ಮುಚ್ಚಿಸಿ, ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಅಂಜನಾದ್ರಿ ಹಿಂಬದಿ ಜಂಗಲ್ ಕಟ್ಟಿಂಗ್ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ತಹಶೀಲ್ದಾರ್‌ ಯು.ನಾಗರಾಜ ಮಾತನಾಡಿ, ವಿಸರ್ಜನೆ ದಿನ ಪಾಠಶಾಲೆ ಬಳಿ ಬೆಳಿಗ್ಗೆ ಭಕ್ತರಿಗೆ ಉಪ್ಪಿಟ್ಟು, ಮಧ್ಯಾಹ್ನ ಅನ್ನ, ಸಾಂಬಾರು, ಸಿಹಿ ವ್ಯವಸ್ಥೆ, ಪ್ರಸಾದಕ್ಕೆ ಕೌಂಟರ್, 100 ಜನ ಕ್ಯಾಟರಿಂಗ್ ಜೊತೆಗೆ ವಿಸರ್ಜನೆ ದಿನ ಪ್ರಸಾದ ವಿತರಣೆ ಮುಂಚೆಯೆ 10 ಕ್ವಿಂಟಲ್ ಅನ್ನ ತಯಾರಿಸಿ ಸಿದ್ಧಪಡಿಸಲಾಗುತ್ತದೆ ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಮಾತನಾಡಿ, ಹನುಮ ಮಾಲಾ ವಿಸರ್ಜನೆಗೆ 30 ನೀರಿನ ಟ್ಯಾಂಕರ್, 5 ಎಂಜಿನ್, ಎಲ್ಲ ಸ್ಥಳಗಳಲ್ಲಿ 400ಕ್ಕೂ ಹೆಚ್ಚು ನಳ, 5 ಲಕ್ಷ ಲೀಟರ್ ನೀರು, ಚಿಕ್ಕರಾಂಪುರ ಗ್ರಾಮದ ಬಳಿ ನೀರಿನ ಟ್ಯಾಂಕರ್ ತುಂಬಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಜೆಸ್ಕಾಂ ಇಲಾಖೆ ಅಧಿಕಾರಿ ಮಂಜುನಾಥ ಮಾತನಾಡಿ, ಜಂಗ್ಲಿ ಕ್ರಾಸ್‌ನಿಂದ ವೇದಪಾಠ ಶಾಲೆಗೆ ಶಾಶ್ವತ ಬೆಳಕಿನ ವ್ಯವಸ್ಥೆ, ಆನೆಗೊಂದಿ-ಹನುಮನಹಳ್ಳಿ ಗ್ರಾಮದ ಕೊನೆಯವರೆಗೆ ಬಲ್ಬ್ ಅಳವಡಿಸಲಾಗಿದೆ. ಜೊತೆಗೆ ಅವಶ್ಯವಿದ್ದ ಸ್ಥಳಗಳಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

ಗ್ರಾಮೀಣ ಪೊಲೀಸ್ ಠಾಣೆ ಪಿಐ ಮಂಜುನಾಥ ಮಾತನಾಡಿ, ಪಾರ್ಕಿಂಗ್ ಸ್ಥಳಗಳಲ್ಲಿ ತಾತ್ಕಾಲಿಕ ಸಿಸಿ ಟಿವಿ ಕ್ಯಾಮೆರಾ, ಸ್ನಾನಗಟ್ಟದ ಬಳಿ ಬೆಳಕಿನ ವ್ಯವಸ್ಥೆ, 3 ದಿನ ರಸ್ತೆ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ಸ್ಥಳ ನೀಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಎ.ಸಿ ಬಸವಣ್ಣೆಪ್ಪ ಕಲಶೆಟ್ಟಿ, ವಿನಯ್, ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ, ಸಂತೋಷ ಕೆಲೋಜಿ, ಕಂದಾಯ ನಿರೀಕ್ಷಕ ಮಂಜುನಾಥ, ಪೊಲೀಸ್ ಅಧಿಕಾರಿ ಶಾರದಮ್ಮ, ಶಿವಶರಣ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ವ್ಯಾಪಾರಕ್ಕೆ ಪರ್ಯಾಯ ಸ್ಥಳ

ಅಂಜನಾದ್ರಿಯಲ್ಲಿ ಹನುಮ ಮಾಲಾ ವಿಸರ್ಜನೆ ಅಂಗವಾಗಿ ಅಂಜನಾದ್ರಿ ಬೆಟ್ಟದ ಬಳಿನ ಮುಖ್ಯರಸ್ತೆಯಲ್ಲಿ ಟಿಫೀನ್, ಹಣ್ಣು, ಬಟ್ಟೆ ಸೇರಿ ವಿವಿಧ ವ್ಯಾಪಾರಸ್ಥರನ್ನು ಕರೆಯಿಸಿ 3 ದಿನ ಪರ್ಯಾಯ ಸ್ಥಳದಲ್ಲಿ ವ್ಯಾಪಾರ ಮಾಡಬೇಕು ಎಂದು ಪೊಲೀಸ್ ಅಧಿಕಾರಿ ಶಾರದಮ್ಮ ಅವರು ವ್ಯಾಪಾರಿಗಳಿಗೆ ಸೂಚಿಸಿದರು.

ಈ ವೇಳೆ ವ್ಯಾಪಾರಸ್ಥರು ರಸ್ತೆಬದಿಯೇ ಸಂಚಾರ ದಟ್ಟಣೆ ಆಗದಂತೆ ವ್ಯಾಪಾರ ಮಾಡುವುದಾಗಿ ಮನವಿ ಮಾಡಿದರು. ಸಂಚಾರಕ್ಕೆ ತೊಂದರೆ ಆಗುವ ಸಂಭವವಿದ್ದು, ಮೇಲಾಧಿಕಾರಿಯ ಸೂಚನೆಯಂತೆ ನಿಗದಿಪಡಿಸಿದ ಸ್ಥಳದಲ್ಲಿ ಅಂಗಡಿಗಳು ಇಡುವಂತೆ ಪೊಲೀಸರು ಸೂಚಿಸಿದರು.

ಕೆಲ ವ್ಯಾಪಾರಿಗಳು ಪೊಲೀಸ್ ಅಧಿಕಾರಿ ಸೂಚನೆಗೆ ಮೇರೆಗೆ ಬಂಡಿಗಳನ್ನು ಇರಿಸಲು ಸ್ಥಳಗಳನ್ನು ಗುರುತಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT