ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜನಾದ್ರಿಯಲ್ಲಿ ಹನುಮ ಜಯಂತಿ ಸಂಭ್ರಮ: ಸಾವಿರಾರು ಭಕ್ತರಿಂದ ದರ್ಶನ

ಮಾಲಾಧಾರಿಗಳಿಂದ ಕೇಸರಿಮಯವಾದ ಬೆಟ್ಟ
Last Updated 17 ಏಪ್ರಿಲ್ 2022, 4:29 IST
ಅಕ್ಷರ ಗಾತ್ರ

ಕೊಪ್ಪಳ: ಆಂಜನೇಯ ಜನ್ಮಭೂಮಿ ಅಂಜನಾದ್ರಿಯಲ್ಲಿ ಶನಿವಾರ ಹನುಮ ಜಯಂತಿ ಪ್ರಯುಕ್ತ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದರ್ಶನ ಪಡೆದರು.

ಪರ್ವತದಲ್ಲಿ ಇರುವ ಆಂಜನೇಯನ ದೇವಾಲಯಕ್ಕೆ ಶುಕ್ರವಾರ ಮಧ್ಯರಾತ್ರಿಯಿಂದಲೇ ದರ್ಶನಕ್ಕೆ ಭಕ್ತರು ಸರತಿಯಲ್ಲಿ ನಿಂತಿದ್ದರು. ಬೆಳಗಿನ 2ರಿಂದ 4ರವರೆಗೆ ವಿಶೇಷ ಪೂಜೆ ನಂತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಹರಿದ್ವಾರ ಯೋಗ ಪೀಠದ ದಕ್ಷಿಣ ಭಾರತ ಉಸ್ತುವಾರಿ ಭವರ್‌ಲಾಲ್‌ ಆರ್ಯ ನೇತೃತ್ವದಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಯೋಗ ಪ್ರದರ್ಶನ ನೀಡಿದರು. ನೂರಾರು ಯೋಗಪಟುಗಳು ಸ್ವಾಮೀಜಿಯೊಂದಿಗೆ ಯೋಗಾಭ್ಯಾಸದ ಮೂಲಕ ಯೋಗೋತ್ಸವಕ್ಕೆ ಕಳೆ ತಂದರು.

ಬೆಟ್ಟಕ್ಕೆ ಬರುವ ಭಕ್ತರಿಗೆ ಏರುವ, ಇಳಿಯುವ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ನೂಕುನುಗ್ಗಲು ಇಲ್ಲದೆ ಭಕ್ತರನ್ನು ನಿಯಂತ್ರಿಸುವ ಮೂಲಕ ಯಾವುದೇ ಅವ್ಯವಸ್ಥೆಯಾಗದಂತೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು. ಬರುವ ಮತ್ತು ಹೋಗುವ ಭಕ್ತರಿಗೆ ಬೆಟ್ಟದ ಎರಡು ಬದಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಸಾಧು ಸಮಾವೇಶ: ಉತ್ತರ ಭಾರತದ ಕಾಶೀ, ಹರಿದ್ವಾರ, ಚಿತ್ರಕೂಟ, ಮಥುರಾ ಸೇರಿದಂತೆ ವಿವಿಧ ಭಾಗಗಳ ಪ್ರಮುಖ ಶಕ್ತಿಪೀಠ ಮತ್ತು ಹನುಮಾನ್ ದೇವಸ್ಥಾನಗಳ 200ಕ್ಕೂ ಹೆಚ್ಚು ಸಾಧುಗಳು ಪಾಲ್ಗೊಂಡು ತುಳಸೀದಾಸ ವಿರಚಿತ ಶ್ರೀರಾಮಚರಿತ ಮಾನಸ ಪಠಣವನ್ನು ಲಯಬದ್ಧವಾಗಿ ಹಾಡಿದರೆ, ದಿನದ 24 ನಾಲ್ಕು ತಾಸು, ಜಯರಾಮ, ರಾಮಜಯ ಜಯ ಎಂಬ ಹನುಮಾನ್ ಚಾಲೀಸ್ ಪಠಣ ನಿರಂತರವಾಗಿ ನಡೆಯಿತು.

ದರ್ಶನಕ್ಕೆ ಬರುವ ಭಕ್ತರಿಗೆ ಬೆಟ್ಟದ ಸುತ್ತಮುತ್ತ ಮತ್ತು ಹೊರವಲಯದ 6 ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಟ್ಟದ ತುದಿಯಲ್ಲಿ ಶುದ್ಧ ಕುಡಿಯುವ ನೀರು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಪ್ರಸಾದಕ್ಕೆ ಅನ್ನ, ಸಾಂಬಾರು, ಪಲಾವ್, ಉಪ್ಪಿಟ್ಟು ಬಡಿಸಲಾಯಿತು. ಮಂಗಳೂರಿನಿಂದಲೂ ಭಕ್ತರು ಪಾಲ್ಗೊಂಡು ಹನುಮ ಜಯಂತಿಗೆ ಮೆರುಗು ತಂದರು.

ಹನುಮಮಾಲಾಧಾರಿಗಳು: ಹನುಮಮಾಲೆ ವ್ರತಾಚಾರಣೆ ಕೈಗೊಂಡ ಹನುಮಮಾಲಾಧಾರಿಗಳು ಬೆಳಿಗ್ಗೆಯಿಂದ ಇರುಮುಡಿಯನ್ನು ಹೊತ್ತುಕೊಂಡು ಪಾದಯಾತ್ರೆಯ ಮೂಲಕ ತಂಡೋಪತಂಡವಾಗಿ ಬಂದು ದರ್ಶನ ಪಡೆದು ಮಾಲೆ ವಿಸರ್ಜನೆ ಮಾಡಿದರು. ಮಾಲಾಧಾರಿಗಳಿಂದ ಅಂಜನಾದ್ರಿ ಕೇಸರಿಮಯವಾಗಿ ಕಂಡಿತು. ದೇವಸ್ಥಾನಕ್ಕೆ ಕೂಡಾ ಈ ಬಾರಿ ಬಿಳಿಯ ಬಣ್ಣದ ಬದಲು ಕೇಸರಿ ಬಣ್ಣ ಬಳಿಯಲಾಗಿತ್ತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ವಚನಾನಂದ ಸ್ವಾಮೀಜಿ, ದೇವಾಲಯದ ಸುಂದರ ಪರಿಸರ ಮತ್ತು ಹನುಮ ಜಯಂತಿಯಂದೇ ಯೋಗ ಪ್ರದರ್ಶನ ನೀಡಿರುವುದು ನಮ್ಮ ಪಾಲಿಗೆ ಸೌಭಾಗ್ಯ ತಂದಿದೆ. ಭಕ್ತಿಯ ಮುಂದೆ ಇನ್ನಾವ ಶಕ್ತಿಯೂ ಇಲ್ಲ. ಜನರು ಆಂಜನೇಯನ ಮೇಲೆ ಇಟ್ಟಿರುವ ಭಕ್ತಿ ಅಪಾರವಾದದು ಎಂದರು.

ಮಹಿಳೆ, ಮಕ್ಕಳು, ವೃದ್ಧರು ಎನ್ನದೇ ಕಡಿದಾದ ಪರ್ವತವನ್ನು ಕಷ್ಟಪಟ್ಟು ಹತ್ತಿ ದರ್ಶನ ಪಡೆದು ಕೃತಾರ್ಥರಾದರು. ವಿವಿಧ ಹರಕೆ ಹೊತ್ತ ಭಕ್ತರು ಅಕ್ಕಿ, ಟೆಂಗು ಅರ್ಪಿಸಿದರು. ಆಂಜನೇಯನ ಸಂಕೇತವಾಗಿರುವ ಇಲ್ಲಿರುವ ನೂರಾರು ಕಪಿಗಳಿಗೆ ಆಹಾರ ನೀಡಲಾಯಿತು.

ಮುಂಜಾಗ್ರತಾ ಕ್ರಮವಾಗಿಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಪೊಲೀಸ್‌ ಹಾಗೂ ಹೋಂ ಗಾರ್ಡ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಬೆಳಿಗ್ಗೆ ಮಾಲಾಧಾರಿಗಳು ಪೂಜೆ ಮುಗಿಸಿಕೊಂಡ ನಂತರ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಅಂಜನಾದ್ರಿಯತ್ತ ತೆರಳುತ್ತಿರುವುದು ಕಂಡು ಬಂತು.

ಆಂಜನೇಯನಿಗೆ ವಿಶೇಷ ಪೂಜೆ

ದೇಶದಲ್ಲಿ ಹನುಮಂತನ ದೇವಸ್ಥಾನವಿಲ್ಲದಊರು ಇಲ್ಲ ಎಂಬ ಮಾತಿಗೆ ಇಲ್ಲಿನ ಅಂಜನಾದ್ರಿ ಕೂಡಾ ಅಪವಾದವಲ್ಲ. ಆದರೆ ಜನ್ಮಸ್ಥಾನ ಇದೇ ಎಂಬ ಪ್ರತೀತಿ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಶ್ರದ್ಧಾ, ಭಕ್ತಿಯಿಂದ ಪಾಲ್ಗೊಂಡು ಸಂಭ್ರಮಿಸಿದರು.

ಇಲ್ಲಿನ ಉದ್ಭವ ಆಂಜನೇಯ ಮೂರ್ತಿಗೆ ದೇವಸ್ಥಾನದ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ನೇತೃತ್ವದಲ್ಲಿ ನಿರ್ಮಾಲ್ಯ ಪೂಜೆಯೊಂದಿಗೆ ಶನಿವಾರ ಬೆಳಗಿನ ಜಾವ ವಿಶೇಷ ಪೂಜೆ ಆರಂಭಗೊಂಡಿತು. 101 ಟೆಂಗಿನಕಾಯಿ ನೀರಿನ ಅಭಿಷೇಕ, ಗಂಗಾ, ತುಂಗಾ ಸೇರಿದಂತೆ ಪವಿತ್ರ ನದಿಗಳಿಂದ ತಂದಿದ್ದ ಕುಂಭಗಳ ಜಲಾಭಿಷೇಕ, 01,11,111 ಲಕ್ಷ ಕುಂಕುಮಾರ್ಚನೆ ಮೂಲಕ ಅಂಜನಾಪುತ್ರನಿಗೆ ಜನ್ಮೋತ್ಸವದ ವಿಶೇಷ ಪೂಜೆ ನಡೆಯಿತು.

ದೇವಸ್ಥಾನದ ಆವರಣದಲ್ಲಿ ಪವಮಾನ ಹೋಮ, ಲಾಡು ಸೇರಿದಂತೆ ಕೊಬ್ಬರಿ, ಉತ್ತತ್ತಿ, ಕಲ್ಲುಸಕ್ಕರೆ, ಬಾಳೆಹಣ್ಣು, ದ್ರಾಕ್ಷಿ, ಗೋಡಂಬಿ, ಮನೂಕಾ ಸೇರಿದಂತೆ ವಿವಿಧ ಪ್ರಸಾದಗಳನ್ನು ಹಂಚಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT