ಗುರುವಾರ , ಆಗಸ್ಟ್ 11, 2022
25 °C
ಹನುಮಸಾಗರ: ಕೌದಿ ಹೊಲಿಯುವುದೇ ಮಹಿಳೆಯರ ಬದುಕಿನ ಮೂಲ ಉದ್ಯೋಗ

ಯಂತ್ರಗಳ ಮುಂದೆ ಮುದುಡಿದ ಕೌದಿಗಳು

ಕಿಶನರಾವ್ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ಹನುಮಸಾಗರವು ಹಲವು ವರ್ಷಗಳಿಂದ ಹಳೆ ಬಟ್ಟೆಗಳಿಂದ ಕೌದಿ ತಯಾರಿಸುವಲ್ಲಿ ಹೆಸರಾಗಿದೆ. ಇಲ್ಲಿನ ಅನೇಕ ಮಹಿಳೆಯರು ಕೌದಿ ಹೊಲಿಯುವ ಕೆಲಸವನ್ನು ತಮ್ಮ ಬದುಕಿನ ಮೂಲ ಉದ್ಯೋಗವಾಗಿ ಮಾಡಿಕೊಂಡಿದ್ದಾರೆ.

ಆದರೆ, ಈಚೆಗೆ ಕೌದಿ ಹೊಲಿಯಲು ರಾಟಿಗಳು ಬಂದ ಕಾರಣವಾಗಿ ಇವರ ಬದುಕಿಗೆ ಆಸರೆಯಾಗಿದ್ದ ಈ ಕೌದಿ ಕೆಲಸಕ್ಕೆ ಬೇಡಿಕೆ ಕಡಿಮೆಯಾಗಿರುವುದು ಚಿಂತೆಗೆ ಕಾರಣವಾಗಿದೆ.

ಕೌದಿ ತಯಾರಾಗುವಲ್ಲಿ ತರಾವರಿ ಬಗೆಯ ಕೆಲಸಗಳಿವೆ. ಹಾಗೆ ಆಯಾ ಕೆಲಸಕ್ಕೆ ಆಯಾ ವಯೋಮಾನದವರೆ ಕೆಲಸ ನಿರ್ವಹಿಸಲು ಸೂಕ್ತವೆಂಬಂತೆ ಕಾಣುತ್ತದೆ.

ಹಳ್ಳಿಗರಿಂದ ಕೌದಿಗೆ ಬೇಡಿಕೆ ಪಡೆದು, ಅವರು ನೀಡುವ ಹಳೆಯ ಅರಿವೆಗಳನ್ನು ತರುತ್ತಾರೆ. ಬಳಿಕ ಆ ಎಲ್ಲ ಬಟ್ಟೆಗಳನ್ನು ತೊಳೆದು ಒಣಗು ಹಾಕುತ್ತಾರೆ. ಅರಿವೆಯಲ್ಲಿನ ಗಟ್ಟಿ ಭಾಗ ಹುಡುಕಿ ಕತ್ತರಿಸಿಕೊಳ್ಳುತ್ತಾರೆ. ನಂತರ ವೃದ್ದರು, ಯುವತಿಯರು ಸಾಮೂಹಿಕವಾಗಿ ಹೊಲೆಯಲು ಕೂಡುತ್ತಾರೆ.

'ಸಂಪೂರ್ಣವಾಗಿ ನಮ್ಮ ದೈಹಿಕ ಶ್ರಮವೇ ಈ ಕೆಲಸಕ್ಕೆ ದೊಡ್ಡ ಬಂಡವಾಳ ನೋಡ್ರಿ' ಎಂದು ಹನುಮಸಾಗರದ ಗಂಗಮ್ಮ ಹೇಳುತ್ತಾರೆ.

‘ಬಂಡವಾಳ ಇಲ್ಲ ಅನ್ನೋದೇನ ಖರೆ ಐತ್ರಿ, ಆದ್ರ ಸೂಜಿ ಪೋಣಿಸಿ ಒಂದೇ ಕಡೆ ದೃಷ್ಟಿ ನೆಟ್ಟೂ ನೆಟ್ಟೂ ಕಣ್ಣು ಮಂಜಾಗ್ಯಾವ್ರಿ, ಕುಂತು ಕುಂತು ನಡು ಬಾಗತಾವ್ರಿ' ಎಂದು ಕೌದಿಯ ಹಿಂದೆ ಅಡಗಿರುವ ಹಲವಾರು ತೊಂದರೆಗಳನ್ನು ಯುವತಿ ಶಾಂತಾ ಹೀಗೆ ಬಿಚ್ಚಿಡುತ್ತಾರೆ.

ಇಲ್ಲಿ ಸುಮಾರು ಎರಡು ನೂರಕ್ಕೂ ಹೆಚ್ಚು ಕುಟುಂಬಗಳು ಈ ಕೌದಿ ಕಾಯಕವನ್ನೇ ಅವಲಂಬಿಸಿದ್ದಾರೆ.
ಪುಟ್ಟ ಕೌದಿಗಳಾದರೆ ಒಬ್ಬರೆ ಹೊಲಿಯಲು ಕುಳಿತರೆ ದೊಡ್ಡ ಕೌದಿಗೆ ಏಕಕಾಲದಲ್ಲಿ ನಾಲ್ಕಾರು ಜನರು ಕೌದಿಯ ಒಂದೊಂದು ಮೂಲೆಗಳನ್ನು ಹಿಡಿದು ಹೊಲಿಯಲು ಕೂಡುತ್ತಾರೆ.

ಬಳಸಿ ಬೀಸಾಕಿದ ಅಥವಾ ತುಂಡಾದ ಮಕ್ಕಳ ಬಟೆಗಳು, ತಾತನ ಧೋತಿ, ಅಜ್ಜಿಯ ಹಳೆ ಸೀರೆಗಳೇ ಇವರ ಕೌದಿಗೆ ಬೇಕಾಗುವ ಮೂಲ ಕಚ್ಚಾ ವಸ್ತುಗಳು. ಕೌದಿಗಳಿಗೆ ಒಂದು ಮೊಳಕ್ಕೆ ₹ 80 ರಿಂದ ₹ 100 ಮಜೂರಿ ಇದೆ. ಸಾಮಾನ್ಯವಾಗಿ ಕೌದಿಗಳು ಎಂಟರಿಂದ ಹತ್ತು ಮೊಳಗಳು ಇರುತ್ತವೆ. ಒಂದು ಕೌದಿ ಸಂಪೂರ್ಣವಾಗಿ ಸಿದ್ಧವಾಗಬೇಕಾದರೆ ನಾಲ್ಕು ಜನರು ಎರಡು ದಿವಸ ಹೊಲಿಗೆ ಹಾಕಬೇಕಾಗುತ್ತದೆ.

ಕೆಲ ದರ್ಜಿಗಳು ಜೀನ್ಸ್ ಬಟ್ಟೆ ಹೊಲಿಯಲು ಬಳಸಿ ಹಳೆಯದಾಗಿರುವ ರಾಟಿಗಳನ್ನು ಖರೀದಿಸಿ ಹಳ್ಳಿಗಳ ಕಡೆಗೆ ಬಂದು ಕಡಿಮೆ ಕೂಲಿಯಲ್ಲಿ ಕೌದಿ ಹೊಲಿದು ಕೊಡುತ್ತಿದ್ದಾರೆ. ರಾಟಿಯಿಂದ ದಿನಕ್ಕೆ ನಾಲ್ಕಾರು ಕೌದಿಗಳನ್ನು ಹೊಲಿಯುತ್ತಾರಾದರೂ ಕೈಯಿಂದ ಹಾಕಿದ ಹೊಲಿಗೆಗೂ ರಾಟಿಯಿಂದ ಹಾಕಿದ ಹೊಲಿಗೆಗೂ ಸಾಕಷ್ಟು ಅಂತರವಿರುತ್ತದೆ.

‘ರಾಟಿ ಬಂದ ನಂತರ ನಮ್ಮ ದುಡಿಮೆಗೆ ದೊಡ್ಡ ಪೆಟ್ಟು ಬಿದ್ದೈತ್ರಿ, ಸರ್ಕಾರ ನಮಗೂ ಅಂತಹ ರಾಟಿಗಳನ್ನು ಖರೀದಿಸಲು ಹಣಕಾಸಿನ ನೆರವು ನೀಡಿದರೆ ನಮಗೂ ಬದಕೋಕೆ ಅನುಕೂಲ ಮಾಡಿದಂಗಾಕೈತೆ’ ಎಂದು ರಾಮವ್ವ ನೊಂದು ಹೇಳುತ್ತಾರೆ.
 **
 

ಕೌದಿ ಹೆಣಿಗೆ ಹಾಕುವವರು ಬಡಕುಟುಂಬದವರಾಗಿದ್ದು, ಗ್ರಾಮೀಣ ಭಾಗದಲ್ಲಿ ಜನಪದ ಹೊದಿಕೆ ಹೊದ್ದ ಕೌದಿ ಉಳಿಯಬೇಕಾದರೆ ಸರ್ಕಾರ ಕೌದಿ ಕಲವಿದರ ನೆರವಿಗೆ ಬರಬೇಕು.
-ರಮೇಶ ಬಡಿಗೇರ, ಗ್ರಾ.ಪಂ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು