ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಡಿಮಳೆಗೆ ಭತ್ತ, ಈರುಳ್ಳಿ, ಸಜ್ಜೆ, ಶೇಂಗಾ ಸೇರಿದಂತೆ 7,200 ಹೆಕ್ಟೇರ್ ಬೆಳೆ ಹಾನಿ

Last Updated 22 ನವೆಂಬರ್ 2021, 6:07 IST
ಅಕ್ಷರ ಗಾತ್ರ

ಕೊಪ್ಪಳ: ಸತತ ಮೂರು ದಿನಗಳಿಂದ ಸುರಿದ ಮಳೆಗೆ ಜಿಲ್ಲೆಯ ರೈತಾಪಿ ಮತ್ತು ಗ್ರಾಮೀಣ ಜನರ ಬದುಕು ಅಸ್ತವ್ಯಸ್ತಗೊಂಡಿದೆ. ಸಾವಿರಾರು ಹೆಕ್ಟೇರ್‌ ಜಮೀನುಗಳಲ್ಲಿ ಬೆಳೆದಿದ್ದ ಭತ್ತ, ಹತ್ತಿ, ಶೇಂಗಾ, ಈರುಳ್ಳಿ ಸೇರಿದಂತೆ 7,200 ಹೆಕ್ಟೇರ್‌ ಬೆಳೆ ನಾಶವಾಗಿದೆ.

ಮೂರು ದಶಕದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಮಳೆ ಅವಘಡ ಸಂಭವಿಸಿದೆ ಎಂದು ಹಿರಿಯರು ಹೇಳುತ್ತಾರೆ. ನೀರಾವರಿ ಪ್ರದೇಶದಲ್ಲಿ ಒಂದು ರೀತಿಯ ತೊಂದರೆಯಾದರೆ ಒಣಬೇಸಾಯದಲ್ಲಿ ಇನ್ನೊಂದು ರೀತಿಯ ತೊಂದರೆ ಕಾಣಿಸಿಕೊಂಡಿದೆ. ಫಸಲಿಗೆ ಬಂದ ಮತ್ತು ಕಟಾವು ಮಾಡಿದ ಭತ್ತ ನೆಲಕ್ಕೆ ಬಿದ್ದು ಕಪ್ಪಾಗಿದೆಯಲ್ಲದೆ, ಕೆಲವು ಕಡೆ ಕೊಳೆತು ಹೋಗಿದೆ. ಒಣಬೇಸಾಯದ ಜಮೀನುಗಳಲ್ಲಿ ಈಗಾಗಲೇ ಬಿತ್ತಿರುವ ಜೋಳ, ಕಡಲೆ, ಇನ್ನೂ ಬಿತ್ತಲಿರುವ ಕುಸುಬಿ ಸೇರಿದಂತೆ ಹಿಂಗಾರು ಬೆಳೆ ಬೆಳೆಯಲು ಸಾಧ್ಯವಾಗದಷ್ಟು ನೀರು ನಿಂತಿದೆ.

ಇದರಿಂದ ವಿವಿಧ ಕಳೆ ಸಸ್ಯಗಳು ವಾರದಲ್ಲಿಯೇ ಬೆಳೆದು ಕೃಷಿ ಕಾರ್ಯವನ್ನು ಮತ್ತಷ್ಟು ದುಬಾರಿ ಮಾಡಲಿವೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಭರ್ತಿಯಾದ ಜಲಾಶಯ: ತುಂಗಭದ್ರಾ ಜಲಾಶಯ ಎರಡು ಸಾರಿ ಭರ್ತಿಯಾಗಿದೆ. ನದಿಗೆ ಹೆಚ್ಚುವರಿಯಾಗಿ 1 ಲಕ್ಷ ಕ್ಯುಸೆಕ್ ನೀರನ್ನು ಬಿಡಲಾಗುತ್ತಿದ್ದು, ನದಿಪಾತ್ರಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಈಗಾಗಲೇ ನಡುಗಡ್ಡೆಗಳಿಗೆ ಸಂಪರ್ಕ ಕಡಿತಗೊಂಡಿದ್ದು, ಐತಿಹಾಸಿಕ ಸ್ಮಾರಕಗಳು ಮುಳುಗಡೆಯಾಗಲಿವೆ. ನದಿ ಪಾತ್ರಗಳಲ್ಲಿ ಮತ್ತು ಮಲೆನಾಡಿನಲ್ಲಿ ಇನ್ನೂ ಮಳೆ ನಿಂತಿಲ್ಲವಾದ್ದರಿಂದ ಹೆಚ್ಚು ನೀರು ಬಿಡಬೇಕಾಗಿರುವುದರಿಂದ ಪ್ರವಾಹದ ಅಪಾಯ ಇದ್ದು, ಜಿಲ್ಲಾಡಳಿತವು ಆ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ.

ಹವಾಮಾನದ ಈ ವೈಪರೀತ್ಯ ಜನಜೀವನವನ್ನು ಕಂಗೆಡಿಸಿದ್ದು, ಗ್ರಾಮೀಣ ಭಾಗದ ರಸ್ತೆಗಳು, ಹೊಲಕ್ಕೆ ಹೋಗುವ ಕಚ್ಚಾ ರಸ್ತೆಗಳಲ್ಲಿ ನೀರು ನಿಂತು ಮತ್ತಷ್ಟು ಅಸಹನೀಯವಾಗಿಸಿದೆ. ಅಲ್ಲದೆ ನಗರದ ಕೆಲವು ಬಡಾವಣೆಗಳು ಮತ್ತು ಹೊರವಲಯದ ಪ್ರದೇಶಗಳಲ್ಲಿ ರಸ್ತೆಗಳ ತುಂಬೆಲ್ಲ ನೀರು ಹರಿಯುತ್ತಿದ್ದು ಸಂಚಾರಕ್ಕೆ ಸಂಚಕಾರ ಒದಗಿದೆ.

ಈ ವರ್ಷ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ಹೆಸರು ಸೇರಿದಂತೆ ಇತರೆ ಬೆಳೆಗಳು ಅತಿಯಾದ ತೇವಾಂಶದಿಂದ ಕೊಳೆತು ಇಳುವರಿ ಬಂದಿಲ್ಲ. ಅದಕ್ಕೂ ಪರಿಹಾರ ಕೂಡಾ ದೊರೆತಿಲ್ಲ ಎಂಬುವುದು ರೈತರ ಅಳಲಾಗಿದೆ. ಯಲಬುರ್ಗಾ, ಕುಕನೂರು ಭಾಗಗಳಲ್ಲಿ ಮುಂಗಾರು ಬೆಳೆಗಳು ಹೆಚ್ಚಿನ ಹಾನಿ ಸಂಭವಿಸಿವೆ.

ತೋಟಗಾರಿಕೆ ಬೆಳೆಗಳನ್ನು ಹೆಚ್ಚು ಬೆಳೆಯುವ ಕೊಪ್ಪಳದ ಅರ್ಧ ತಾಲ್ಲೂಕು, ಕುಷ್ಟಗಿ, ಗಂಗಾವತಿ ಕೆಲವು ಜಮೀನುಗಳಲ್ಲಿ ಮಳೆಯಿಂದ ಹೆಚ್ಚು ಹಾನಿಯಾಗಿದೆ. ಮಳೆಯ ಅಭಾವ ಎದುರಿಸುತ್ತಿದ್ದ ಹನಮಸಾಗರ, ತಾವರಗೇರಾ, ಕನಕಗಿರಿ ಭಾಗದಲ್ಲಿ ಈ ಮಳೆ ಹಸಿರು ಚಿಗುರಲು ಕಾರಣವಾದರೆ, ತೊಗರಿ ಬೆಳೆ ಹೂವು ಕಟ್ಟುವ ಹಂತದಲ್ಲಿ ಮಳೆಯಿಂದ ಉದುರಿ ತೊಂದರೆಯಾಗಿದೆ.

ಪಕ್ಕದಲ್ಲಿಯೇ ನೀರನ್ನೇ ಹಾಸಿ ಹಾದ್ದು ಮಲಗುವ ಕಾರಟಗಿ, ಗಂಗಾವತಿ ತಾಲ್ಲೂಕಿಗೆ ಜನತೆ ಮಳೆ ಮತ್ತು ನೀರು ಎಂದರೆ ಭಯ ಉಂಟಾಗುವಂತೆ ಮಾಡಿದೆ. ಮಳೆಗೆ ಭತ್ತ ಒಣಗಿಸಲು ಜಾಗವಿಲ್ಲದೆ, ಕಟಾವು ಮಾಡಿ ಜಮೀನಿನಲ್ಲಿಯೇ ಬಿಟ್ಟ ಫಸಲು ಅಲ್ಲಿಯೇ ಮೊಳಕೆ ಒಡೆದು ಕೈಗೆ ಬಂದ ತುತ್ತು, ಬಾಯಿಗೆ ಬಾರದಂತಹ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಮತ್ತು ಜಿಲ್ಲಾಡಳಿತ, ವಿಶೇಷವಾಗಿ ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆಗಳು ಸಮರೋಪಾದಿಯಲ್ಲಿ ಕೆಲಸ ಮಾಡಿ ಮಳೆಯಿಂದ ಬಾಧಿತ ಜನರ ನೆರವಿಗೆ ಬರಬೇಕಾಗಿರುವುದು ಇಂದಿನ ಅವಶ್ಯಕತೆ ಆಗಿದೆ.

ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಲು ಸಚಿವರ ಸೂಚನೆ

ಕೊಪ್ಪಳ: ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಇತ್ತಿಚೆಗೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭತ್ತ, ದ್ರಾಕ್ಷಿ, ಶೇಂಗಾ, ತೊಗರಿ, ಮೆಕ್ಕೆಜೋಳ, ಈರುಳ್ಳಿ, ಸೇರಿದಂತೆ ಈ ಭಾಗದ ಪ್ರಮುಖ ಬೆಳೆಗಳು ಮಳೆಯಿಂದ ಹಾನಿಗೊಳಗಾಗಿದ್ದು, ಈ ಬೆಳೆಗಳ ಸಮೀಕ್ಷೆಯನ್ನು ಪ್ರಥಮ ಆದ್ಯತೆ ಮೇರೆಗೆ ಕೈಗೊಳ್ಳಲು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಸೇರಿ ಇತರೆ ಇಲಾಖೆಗಳನ್ನು ಬಳಸಿಕೊಂಡು ಅಂದಾಜಿತ ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆಸಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಸೂಚಿಸಿದ್ದಾರೆ.

ಸಾರ್ವಜನಿಕ ಆಸ್ತಿ ಹಾನಿಯಾಗಿರುವುದರ ಬಗ್ಗೆ ವರದಿಯನ್ನು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದು ಸರ್ಕಾರಕ್ಕೆಸಲ್ಲಿಸಬೇಕು. ಈ ತುರ್ತು ಸಂದರ್ಭದಲ್ಲಿ ಜಿಲ್ಲೆಯ ಜಿಲ್ಲಾ ಹಾಗೂ ತಾಲ್ಲೂಕ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇದ್ದು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲುಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಡುಗಡ್ಡೆಯಲ್ಲಿ ಸಿಲುಕಿದ್ದ ಜಾನುವಾರುಗಳಿಗೆ ಮೇವು

ಕೊಪ್ಪಳ ತಾಲ್ಲೂಕಿನ ಶಿವಪುರ ಮಾರ್ಕಂಡೇಶ್ವರ ದೇವಸ್ಥಾನದ ಹತ್ತಿರದ ನಡುಗಡ್ಡೆಯಲ್ಲಿ ಸಿಲುಕಿರುವ ಜಾನುವಾರುಗಳಿಗೆ ಒಂದು ವಾರಕ್ಕೆ ಆಗುವಂತೆ ಮೇವಿನ ವ್ಯವಸ್ಥೆ ಮತ್ತು ಅವುಗಳ ಆರೋಗ್ಯ ಪರೀಕ್ಷೆ ಮಾಡಲಾಗಿದೆ.

ಪಶು ಇಲಾಖೆಯ ಉಪನಿರ್ದೆಶಕರಾದ ಡಾ.ಎಚ್ ನಾಗರಾಜ ನೇತೃತ್ವದಲ್ಲಿ ಭಾನುವಾರ ನಡುಡ್ಡೆಗೆ ತೆಪ್ಪದ ಮೂಲಕ ತೆರಳಿ ಪರಿಶೀಲನೆ ನಡೆಸಿದರು.

'ಸುಮಾರು 500 ಜಾನುವಾರುಗಳು ಈ ನಡುಗಡ್ಡೆಯಲ್ಲಿ ಸಿಲುಕಿದ್ದು ಅವುಗಳಿಗೆ ಸ್ಥಳೀಯವಾಗಿ ಮೇವಿನ ಲಭ್ಯತೆಯನ್ನು ಗೌಸ್ ಮೊಹಿದ್ದಿನ್ ಹುಸೇನ ಸಾಬ್ ಕುದರಿ ಮತ್ತು ಮಹ್ಮದ ರಫಿ ಹಸನಸಾಬ್ ಪಿಂಜಾರ ಅವರ ಹತ್ತಿರ ಇರುವ ಮೇವಿನ ವ್ಯವಸ್ಥೆ ಮಾಡಲಾಗಿದ್ದು, ಇದು ಒಂದು ವಾರಗಳವರೆಗೆ ಅವುಗಳಿಗೆ ಆಗಲಿದೆ' ಎಂದು ಡಾ.ನಾಗರಾಜ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT