ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ| ತಂಪೆರೆದ ಮಳೆ: ಸಂಚಾರಕ್ಕೆ ತೊಡಕು

ನೆಲಕ್ಕೆ ಉರುಳಿದ ಮರ, ಎರಡು ಜಾನುವಾರು ಸಾವು
Last Updated 8 ಏಪ್ರಿಲ್ 2023, 5:06 IST
ಅಕ್ಷರ ಗಾತ್ರ

ಕೊಪ್ಪಳ: ಪ್ರಖರ ಬಿಸಿಲಿಗೆ ಬಸವಳಿದಿದ್ದ ನಗರದ ಜನರಿಗೆ ಶುಕ್ರವಾರ ಕೆಲ ಹೊತ್ತು ಸುರಿದ ಜೋರು ಮಳೆ ಭಾರಿ ತಂಪು ಮೂಡಿಸಿತು. ಮಧ್ಯಾಹ್ನ ಸುಮಾರು ಅರ್ಧ ತಾಸು ಬಿರುಗಾಳಿ, ಗುಡುಗಿನ ಆರ್ಭಟದ ಜೊತೆಗೆ ಮಳೆ ಸುರಿಯಿತು. ಕೊಪ್ಪಳ, ಅಳವಂಡಿ, ಕುಕನೂರುನಲ್ಲಿ ಜೋರು ಮಳೆ ಮತ್ತು ಮುನಿರಾಬಾದ್‌ನಲ್ಲಿ ಆಲಿಕಲ್ಲು ಮಳೆ ಬಂತು.

ನಿತ್ಯ 37ರಿಂದ 38 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿರುಬಿಸಿಲಿಗೆ ಬಸವಳಿದಿದ್ದ ಇಲ್ಲಿಯ ಜನ ಮಳೆಯಿಂದಾಗಿ ಖುಷಿಪಟ್ಟರು. ಇಲ್ಲಿನ ಬಿಸಿಲಿನ ತಾಪ ತಾಳಲಾಗದೆ ಜನ ನಿತ್ಯ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದರು. ಕಲ್ಲಂಗಡಿ, ಎಳನೀರು ಸೇವನೆ ಮಾಡುತ್ತಿದ್ದರು. ಬಿಸಿಲು ಶುರುವಾಗುವ ಮೊದಲೇ ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳುತ್ತಿದ್ದರು.

ಚುನಾವಣಾ ಸಮಯವಾದ್ದರಿಂದ ವಿವಿಧ ಪಕ್ಷಗಳ ನಾಯಕರು ಈಗಾಗಲೇ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಸಿಲಿನ ನಡುವೆಯೂ ಬಿರುಸಾಗಿ ಮತಯಾಚನೆ ಮಾಡುತ್ತಿದ್ದಾರೆ. ಅವರಿಗೆಲ್ಲ ಮಳೆ ಭಾರಿ ತಂಪುಗೊಳಿಸಿತು. ಮಳೆ ಜೊತೆಗೆ ಬೀಸಿದ ತಂಪು ಗಾಳಿ ಮೈ ಮನಕ್ಕೆ ಆನಂದ ನೀಡಿತು.

ಕುಸಿದ ಗೋಡೆ: ನಗರದ 12ನೇ ವಾರ್ಡಿನ ಸಜ್ಜಿ ಹೊಲ ಬಡಾವಣೆಯಲ್ಲಿ ಸುನೀತ ಅರಕೇರಿ ತಮ್ಮ ಇಬ್ಬರ ಮಕ್ಕಳೊಂದಿಗೆ ವಾಸಿಸುತ್ತಿದ್ದ ತಗಡಿನ ಶೆಡ್ಡಿನ ಮಣ್ಣಿನ ಗೋಡೆ ಕುಸಿದು ಬಿದ್ದಿದೆ. ಕುವೆಂಪು ನಗರದಲ್ಲಿ ಗಾಳಿಯಿಂದ ಗಿಡ ಬಿದ್ದು, ಕಂಬಗಳಿಗೆ ಹಾನಿಯಾಗಿದ್ದು, ಕೆಇಬಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಸಿಡಿಲಿಗೆ ಕೊಪ್ಪಳ ತಾಲ್ಲೂಕಿನ ಓಜನಹಳ್ಳಿ ಗ್ರಾಮದ ಶಿವಪುತ್ರಪ್ಪ ತಳಕಲ್‌ ಎಂಬ ರೈತರಿಗೆ ಸೇರಿದ ಎತ್ತು ಮೃತಪಟ್ಟಿದೆ. ಕುಷ್ಟಗಿ ತಾಲ್ಲೂಕಿನ ತುಗ್ಗಲಗೋಣಿ ಗ್ರಾಮದ ಜಮೀನಿನಲ್ಲಿ ಅಶೋಕ ಕುಣಿಮಂಚಿ ಎಂಬ ರೈತರಿಗೆ ಸೇರಿದ ಎಮ್ಮೆ ಸಾವಿಗೀಡಾಗಿದೆ.

ತೆಂಗಿನ ಮರಕ್ಕೆ ಬಡಿದ ಸಿಡಿಲು

ಕುಕನೂರು: ಇಲ್ಲಿನ ತಹಶೀಲ್ದಾರ್ ಕಚೇರಿ ಸಮೀಪದ ಭೀಮಾಂಬಿಕಾ ದೇವಸ್ಥಾನ ಆವರಣದಲ್ಲಿನ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡಿತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ವಾಹನವು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.

ಶುಕ್ರವಾರ ವಾರದ ಸಂತೆ ವ್ಯಾಪಾರಸ್ಥರಿಗೆ ಮಳೆಯಿಂದ ಅನನುಕೂಲ ವಾಯಿತು. ಪಟ್ಟಣದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿನ ಗೋಡೆಗೆ ಹಾಕಲಾಗಿದ್ದ ಟೈಲ್ಸ್‌ಗಳು ಮಳೆ ಹಾಗೂ ಗಾಳಿಯ ರಭಸಕ್ಕೆ ಕೆಳಗೆ ಬಿದ್ದವು. ಇನ್ನು ರೈತರ ಮುಖದಲ್ಲಿ ಮಳೆ ಸಂತಸ ಮೂಡಿದೆ. ಬಿತ್ತನೆ ಕಾರ್ಯಕ್ಕೆ ಭೂಮಿಯನ್ನು ಹದಗೊಳಿಸಲು ಈ ಮಳೆ ತುಂಬಾ ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT