ಕೊಪ್ಪಳ: ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ ಶೇಂಗಾ ಬೆಳೆ ಅಧಿಕ ಮಳೆ ಸುರಿದ ಪರಿಣಾಮ ಹೊಲದಲ್ಲಿಯೇ ಕೊಳೆಯುತ್ತಿದ್ದು, ರೈತರನ್ನು ಆತಂಕದಲ್ಲಿ ಕೆಡವಿದೆ.
4 ಲಕ್ಷ ಹೆಕ್ಟೇರ್‌ಗಿಂತಲೂ ಹೆಚ್ಚು ಕೃಷಿ ಮತ್ತು ಬಿತ್ತನೆ ಮಾಡಲು ಭೂಮಿ ಲಭ್ಯವಿದ್ದು, ತೋಟಗಾರಿಕೆ ಬೆಳೆ ಸೇರಿದಂತೆ ನೀರಾವರಿ ಪ್ರದೇಶದಲ್ಲಿ ಶೇಂಗಾವನ್ನು ಬೆಳೆಯಲಾಗುತ್ತದೆ. ಹೆಚ್ಚಿನ ನೀರು ಬೇಡುವ ಈ ಬೆಳೆಯನ್ನು ಜಿಲ್ಲೆಯ ರೈತರು ಕಡಿಮೆ ಪ್ರಮಾಣದಲ್ಲಿ ಬಿತ್ತನೆ ಮಾಡುತ್ತಾರೆ.
ಪ್ರಸ್ತುತ ವರ್ಷ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದರಿಂದ 30 ಸಾವಿರ ಹೆಕ್ಟೇರ್ ಜಮೀನುಗಳಲ್ಲಿ ರೈತರು ಶೇಂಗಾ ಬಿತ್ತನೆ ಮಾಡಿದ್ದರು. ಆರಂಭದಲ್ಲಿ ಮಳೆ ಕೊರತೆಯಿಂದ ಕೆಲವು ಬೆಳೆಗಳು ಬಾಡಿದ್ದವು. ನಂತರ ಜಿಟಿಜಿಟಿ ಮಳೆ ಬಿಟ್ಟುಬಿಡದ ಸುರಿದ ಪರಿಣಾಮ ಚೇತರಿಸಿಕೊಂಡವು. ಮಳೆ ಹೆಚ್ಚಾದಂತೆಲ್ಲಾ ಕೆಲ ರೈತರ ಶೇಂಗಾ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿದವಲ್ಲದೆ, ಕೊಳೆತು ಹೋದವು.
ಕೆಲ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರೆ ಮತ್ತೆ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತಷ್ಟು ಆತಂಕ ಪಡುವಂತೆ
ಮಾಡಿದೆ. ಕ್ವಿಂಟಲ್ ಬೀಜಕ್ಕೆ ₹ 10 (ಕೆಜಿಗೆ ₹ 100) ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿರುತ್ತಾರೆ. ಅದೇ ಶೇಂಗಾವನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಮಳೆಗೆ ಸಿಲುಕಿ ಕಪ್ಪಾಗಿದೆ ಎಂಬ ನೆಪ ಹೇಳಿ ಕ್ವಿಂಟಲ್‌ಗೆ ₹ 2 ರಿಂದ ₹ 3 ಸಾವಿರ (ಕೆಜಿಗೆ ₹ 20) ಕೇಳುತ್ತಾರೆ. ಇದರಿಂದ ರೈತರು ರೋಸಿ ಹೋಗಿದ್ದಾರೆ.
ಶೇಂಗಾ ಬೀಜವಲ್ಲದೆ ಅದರ ಹೊಟ್ಟಿಗೆ (ಮೇವು) ಬಹಳ ಕಿಮ್ಮತ್ತು ಇದ್ದು, ಹೆಚ್ಚಿನ ಮಳೆಯಿಂದ ಕಪ್ಪಾಗಿದೆ. ಇದರಿಂದ ಜಾನುವಾರುಗಳಿಗೆ ನೀಡಲು ಭಯಪಡುವಂತೆ ಆಗಿದೆ. ಉತ್ತಮ ಮಳೆಯಿಂದ ಅಧಿಕ ಇಳುವರಿಯ ನಿರೀಕ್ಷೆಯಲ್ಲಿ ಇದ್ದ ಈ ಮಳೆ ಬಿಡದೇ ರೈತರನ್ನು ಕಾಡುತ್ತಿದೆ. ಇದರಿಂದ ಲಕ್ಷಾಂತರ ನಷ್ಟವನ್ನು ರೈತರು ಅನುಭವಿಸುವಂತೆ ಆಗಿದೆ.
ಶೇಂಗಾ ಹೊಲದಲ್ಲಿ ಕಳೆ, ಗಳೆ, ಬೀಜ, ಗೊಬ್ಬರ, ಬಿತ್ತನೆಗೆ ಸಾವಿರಾರು ಎಕರೆ ರೂಪಾಯಿಯನ್ನು ರೈತರು ಖರ್ಚು ಮಾಡಿದ್ದಾರೆ. ಅವು
ಮರಳಿ ಬಂದರೆ ಸಾಕು ಎನ್ನುವ ಪರಿಸ್ಥಿತಿ ಇದೆ. ಕೊಪ್ಪಳದ ಬಹುತೇಕ ಭಾಗ ಮತ್ತು ಯಲಬುರ್ಗಾ, ಕುಕನೂರಿನಲ್ಲಿ ಹೆಚ್ಚಿನ ಪ್ರಮಾಣದ ಶೇಂಗಾವನ್ನು ಬೆಳೆಯುತ್ತಾರೆ.ಕುಷ್ಟಗಿಯಲ್ಲಿಹಬ್ಬು ಶೇಂಗಾ (ಕೆಂಪು) ಶೇಂಗಾವನ್ನು ಹೆಚ್ಚಿಗೆ ಬೆಳೆಯುತ್ತಾರೆ.
ಮುಂಗಾರು ಹಂಗಾಮಿನ ಉತ್ಕೃಷ್ಟ ಬೆಳೆಯಾದ ಶೇಂಗಾ ಬೆಳೆ ನಿಯಮಿತ ಮಳೆ, ಗಾಳಿ, ಬಿಸಿಲು ಬಿದ್ದರೆ ಉತ್ತಮ ಫಸಲು ಬರುತ್ತದೆ. ಹವಾಮಾನದಲ್ಲಿ ವ್ಯತ್ಯಾಸವಾದರೆ ತುಂಬಾ ಹಾನಿಯಾಗುತ್ತದೆ. ಸೂಕ್ಷ್ಮ ಬೆಳೆಯಾದ ಶೇಂಗಾ ಈಗ ಅಧಿಕ ತೇವಾಂಶದಿಂದ ಕೊಳೆಯುವ ಸ್ಥಿತಿಗೆ ತಲುಪಿದ್ದು, ರೈತರನ್ನು ಮತ್ತೆ ಕಷ್ಟಕ್ಕೆ ಕೆಡವಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.