ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ದಶಕದ ನಂತರ ಹಿರೇಹಳ್ಳ ಜಲಾಶಯ ಭರ್ತಿ

ಎರಡು ಗೇಟ್ ಮೂಲಕ ನೀರು; ಸುತ್ತಲಿನ ರೈತರಲ್ಲಿ ಹರ್ಷ, ಬೇಸಿಗೆಯಲ್ಲಿ ಜಾನುವಾರುಗಳಿಗೆ ಅನುಕೂಲ
Last Updated 22 ಸೆಪ್ಟೆಂಬರ್ 2020, 2:42 IST
ಅಕ್ಷರ ಗಾತ್ರ

ಕೊಪ್ಪಳ: ತುಂಗಭದ್ರಾ ನದಿಗೆ ಹೂಳು ಸೇರುವುದನ್ನು ತಪ್ಪಿಸಲು ನಿರ್ಮಿಸಲಾದ ತಾಲ್ಲೂಕಿನ‌ ಕಿನ್ನಾಳ ಸಮೀಪದ (ಗಂಗಾವತಿ ತಾಲ್ಲೂಕಿನ ಮುದ್ಲಾಪುರ) ಹಿರೇಹಳ್ಳ ಜಲಾಶಯ ದಶಕದ ನಂತರ ಭರ್ತಿಯಾಗಿದೆ.

1.62 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯ, ಸುತ್ತಲಿನ ಹತ್ತಾರು ಗ್ರಾಮಗಳಿಗೆ ಜೀವನಾಡಿಯಾಗಿದೆ. ಹಳ್ಳದ ಪಾತ್ರದಲ್ಲಿ 33 ಗ್ರಾಮಗಳು ಬರುತ್ತಿದ್ದು, ನೀರಾವರಿಗೆ ಅನುಕೂಲವಾಗಿದೆ. ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಟ್ಟಿದೆ.

ಯಲಬುರ್ಗಾ, ಕುಕನೂರ, ಕೊಪ್ಪಳ ತಾಲ್ಲೂಕಿನಲ್ಲಿ ಮಳೆಯಾದರೆ ಆ ನೀರು ವಿವಿಧ ಹಳ್ಳಗಳ ಮೂಲಕ ಹಿರೇಹಳ್ಳ ಸೇರುತ್ತದೆ. ಹಳ್ಳದಲ್ಲಿ ಜಾಲಿಗಿಡಗಳು ಬೆಳೆದು ಅಸ್ತಿತ್ವವನ್ನೇ ಕಳೆದುಕೊಂಡಿತ್ತು. ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಹಳ್ಳವನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ‌ ಸ್ವಚ್ಛಗೊಳಿಸಿದ್ದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿದೆ.

ಇದರಿಂದ ಸುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿಯಾಗಿದ್ದು, ಬೇಸಿಗೆಯಲ್ಲಿ ಜಾನುವಾರುಗಳಿಗೆ ಅನುಕೂಲವಾಗಲಿದೆ. ಈಗಾಗಲೇ ಹಳ್ಳದಲ್ಲಿ ಕೋಳೂರ ಬಳಿ ನಿರ್ಮಿಸಿರುವ ಬಾಂದಾರದ ಯಶಸ್ಸಿನಿಂದ ಹಳ್ಳದಲ್ಲಿ ಕಿ.ಮೀ ಗೆ ಒಂದು ಚೆಕ್ ಡ್ಯಾಂ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.

ಹಿರೇಹಳ್ಳ ಒಂದೊಮ್ಮೆ ಕೊಪ್ಪಳ ನಗರದ ಜನರ ನೀರಿನ ದಾಹ ತಣಿಸಿತ್ತು. ಕಾಲನ ಹೊಡೆತಕ್ಕೆ ಸಿಲುಕಿ ಹಳ್ಳದಲ್ಲಿ ನೀರೇ ಬರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಲಾಶಯ ನಿರ್ಮಾಣ ಮತ್ತಿತರ ಕಾರಣದಿಂದ ಹರಿಯುವ ನೀರನ್ನು ತಡೆಯಲಾಗಿತ್ತು. ತಡೆದ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ. ಈಗ ಜಲಾಶಯದಲ್ಲಿ ವ್ಯಾಪಕ ಪ್ರಮಾಣದ ಹೂಳು ತುಂಬಿದೆ.

ಜಲಾಶಯದ ಎಡ ಬಲದಲ್ಲಿ ಹಳ್ಳದ ಉದ್ದಕ್ಕೂ ಅಂತರ್ಜಲ ಹೆಚ್ಚಳಕ್ಕೆ ಗಿಡ ನೆಡುವ ಕಾರ್ಯಕ್ರಮ ರೂಪಿಸಲಾಗಿದೆ. ಬರದಿಂದ ತತ್ತರಿಸುವ ಜಿಲ್ಲೆಯನ್ನು ಹಿರೇಹಳ್ಳ ಹಸರೀಕರಣದ ಮೂಲಕ ನೀರು ಸಂಗ್ರಹಿಸುವ ₹89 ಕೋಟಿ ವೆಚ್ಚದಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿದೆ.

ಕಾಲುವೆಗಳ ದುಃಸ್ಥಿತಿ: ‘ಹಿರೇಹಳ್ಳ ಜಲಾಶಯದ ಕಾಲುವೆಗಳಲ್ಲಿ ಸುಮಾರು 10 ರಿಂದ 14 ಕಿ.ಮೀ ಮಾತ್ರ ನೀರು ಹರಿಯುತ್ತದೆ. ಆದರೆ ಅನೇಕ ಕಿರು, ಉಪ ಕಾಲುವೆಗಳು ಬಳಕೆಗೆ ಬಾರದೆ ಹಾಳಾಗಿ ಹೋಗಿವೆ. ಪರಿಣಾಮವಾಗಿ ಯೋಜನೆಯ ಉದ್ದೇಶಿತ
ಗ್ರಾಮಗಳಿಗೆ ನೀರೇ ಬರುವುದಿಲ್ಲ’ ಎನ್ನುತ್ತಾರೆ ಜನ.

ಈಗ ಕೋಳೂರು ಬಳಿ ಇರುವ ಬಾಂದಾರದ ಜೊತೆಗೆ ₹36.30 ಕೋಟಿ ವೆಚ್ಚದಲ್ಲಿ ತಾಲ್ಲೂಕಿನ ಮಾದಿನೂರ, ದೇವಲಾಪುರ, ಕಾಟ್ರಳ್ಳಿ, ಗುನ್ನಳ್ಳಿ, ಯತ್ನಟ್ಟಿ, ಓಜನಳ್ಳಿ ಬಳಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ನೀರಾವರಿ ಇಲಾಖೆ ಒಪ್ಪಿಗೆ ನೀಡಿದೆ. ಈಗಾಗಲೇ ಸರ್ಕಾರ ₹10 ಕೋಟಿ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT