ನಿವೇಶನ ಹಕ್ಕುಪತ್ರಕ್ಕೆ ಫಲಾನುಭವಿ ಪರದಾಟ

7
ಅರ್ಜಿ ವಿಲೇವಾರಿ ಮಾಡದ ಕಂದಾಯ ಇಲಾಖೆ

ನಿವೇಶನ ಹಕ್ಕುಪತ್ರಕ್ಕೆ ಫಲಾನುಭವಿ ಪರದಾಟ

Published:
Updated:
ಕುಷ್ಟಗಿ ತಾಲ್ಲೂಕು ಕಂದಕೂರು ಗ್ರಾಮದ ಸರ್ಕಾರಿ ಜಮೀನಿನಲ್ಲಿ ಫಲಾನುಭವಿ ಶಂಕರಪ್ಪ ಮನ್ನಾಪುರ ಕಟ್ಟಿಕೊಂಡಿರುವ ಮನೆ

ಕುಷ್ಟಗಿ: ತಾಲ್ಲೂಕಿನ ಕಂದಕೂರು ಗ್ರಾಮದಲ್ಲಿ ವಸತಿ ಮನೆ ಮತ್ತು ನಿವೇಶನ ರಹಿತ ಫಲಾನುಭವಿ ಶಂಕರಪ್ಪ ಮನ್ನಾಪುರ ಎಂಬುವರು ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ಒಂದು ದಶಕದಿಂದ ವಾಸವಿದ್ದರೂ ನಿವೇಶನ ಹಕ್ಕುಪತ್ರ ದೊರೆಯದ ಕಾರಣ ವರ್ಷದಿಂದ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.

ಗ್ರಾಮಕ್ಕೆ ಹೊಂದಿಕೊಂಡ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಳ್ಳುವುದಕ್ಕೆ ಕಂದಕೂರು ಗ್ರಾಮ ಪಂಚಾಯಿತಿ ಬಸವ ವಸತಿ ಯೋಜನೆಯಡಿ ಶಂಕರಪ್ಪ ಫಲಾನುಭವಿಯಾಗಿ ಆಯ್ಕೆಯಾಗಿದ್ದರು. ಸರ್ಕಾರಿ ಜಮೀನಿನ ಅನಧಿಕೃತ ನಿವೇಶನದಲ್ಲಿ ಮನೆ ನಿರ್ಮಿಸಿಕೊಳ್ಳುವುದಕ್ಕೆ ನಿಗದಿತ ಹಣ ಬಿಡುಗಡೆ ಮಾಡಿದ್ದ ಗ್ರಾಮ ಪಂಚಾಯಿತಿ ನಿವೇಶನ ಹಕ್ಕುಪತ್ರ ಇಲ್ಲ ಎಂಬ ಕಾರಣಕ್ಕೆ ಆಸ್ತಿ ದಾಖಲೆಗಳಲ್ಲಿ ಮನೆಯನ್ನು ನೋಂದಣಿ ಮಾಡಿರಲಿಲ್ಲ. ‘ನಿವೇಶನಕ್ಕೆ ಸಂಬಂಧಿಸಿದ ದಾಖಲೆಪತ್ರಗಳು ಇಲ್ಲ.ಪರಿಶಿಷ್ಟ ಪಂಗಡಕ್ಕೆ ಸೇರಿರುವ ನಾನು ಸರ್ಕಾರದ ಇತರೆ ಸೌಲಭ್ಯಗಳಿಂದ ವಂಚಿತನಾಗಿದ್ದೇನೆ’ ಎಂದು ಶಂಕರಪ್ಪ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಮನೆ ಇರುವ ಜಾಗದ ಹಕ್ಕುಪತ್ರ ನೀಡುವಂತೆ 2017ರ ಜ 19 ರಂದು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. 10  ತಿಂಗಳ ನಂತರ ಕಂದಕೂರು ಗ್ರಾಮ ಪಂಚಾಯಿತಿಗೆ ಪತ್ರ ಬರೆದ ತಹಶೀಲ್ದಾರ್, ಮನೆ ನಿರ್ಮಿಸಿಕೊಂಡಿರುವ ಪ್ರದೇಶ ಅರಣ್ಯ ಇಲಾಖೆಗೆ ಸೇರಿದೆ. ಈ ವಿಷಯವನ್ನು ಪಂಚಾಯಿತಿ ಅರಣ್ಯ ಹಕ್ಕು ಸಮಿತಿಯಲ್ಲಿ ಪರಿಶೀಲಿಸಿ ತಕ್ಷಣ ಅಗತ್ಯ ಪ್ರಸ್ತಾವವನ್ನು ಉಪ ವಿಭಾಗಾಧಿಕಾರಿಗೆ ಸಲ್ಲಿಸುವಂತೆ ಸೂಚಿಸಿದ್ದರು.

‘ಮಾರ್ಚ್ 3ರಂದು ಉಪವಿಭಾಗ ಅಧಿಕಾರಿಗೆ ಪತ್ರ ಬರೆದು, ಪ್ರಸ್ತಾವವನ್ನು ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡುವಂತೆ ತಿಳಿಸಿದ್ದೇವೆ. ಈವರೆಗೂ ಉಪವಿಭಾಗ ಅಧಿಕಾರಿ ಕಚೇರಿಯಿಂದ ಪಂಚಾಯಿತಿಗೆ ಯಾವುದೇ ಸೂಚನೆ ಬಂದಿಲ್ಲ’ ಎಂದು ಕಂದಕೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೇಖದಾದೂ ಕಿಡದೂರು ತಿಳಿಸಿದರು.

‘ಮನೆ ನಿವೇಶನದ ಹಕ್ಕುಪತ್ರ ನೀಡಿ ಎಂದು ಕಳೆದ ಒಂದೂವರೆ ವರ್ಷದಿಂದ ಕಚೇರಿಗೆ ಅಲೆದಾಡಿ ಅಧಿಕಾರಿಗಳ ಬಳಿ ಅಂಗಲಾಚಿದರೂ ಅಧಿಕಾರಿಗಳಿಂದ ಸ್ಪಂದನೆ ಸಿಕ್ಕಿಲ್ಲ. ಹಕ್ಕುಪತ್ ಸಿಗುವುದೇ ಅಥವಾ ಇಲ್ಲವೇ ಎಂಬುದು ಗೊತ್ತಾಗಿಲ್ಲ. ಅರ್ಜಿ ವಿಲೇವಾರಿ ಮಾಡಿದ್ದರೆ, ನಿಖರ ಮಾಹಿತಿ ಸಿಗುತಿತ್ತು’ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !