ಕೊಪ್ಪಳ: ಜಾಗತಿಕವಾಗಿ ಹೆಸರು ಮಾಡಿದ ತಿರುಪತಿಯಲ್ಲಿ ನೀಡಲಾಗುವ ಲಾಡು ಪ್ರಸಾದದಲ್ಲಿ ಕಲಬೆರೆಕೆ ತುಪ್ಪ ಬಳಸಿದ ಆರೋಪ, ಪ‍್ರತ್ಯಾರೋಪಗಳ ನಡುವೆಯೂ ಧಾರ್ಮಿಕ ದತ್ತಿ ಇಲಾಖೆಗಳ ವ್ಯಾಪ್ತಿಯಲ್ಲಿರುವ ಜಿಲ್ಲೆಯ ದೇವಸ್ಥಾನಗಳಲ್ಲಿ ನೀಡಲಾಗುವ ಪ್ರಸಾದಲ್ಲಿನ ತುಪ್ಪ ಎಂಥದ್ದು ಎನ್ನುವ ಪ್ರಶ್ನೆಯೂ ಎದುರಾಗಿದೆ.
ಜಿಲ್ಲೆಯಲ್ಲಿ ಉತ್ತರ ಕರ್ನಾಟಕದ ಶಕ್ತಿದೇವತೆ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನ, ಗಂಗಾವತಿ ತಾಲ್ಲೂಕಿನ ಅಂಜನಾದ್ರಿ, ಕನಕಗಿರಿಯ ಕನಕಾಚಲಪತಿ ಹೀಗೆ ಹಲವು ಪ್ರಮುಖ ದೇವಸ್ಥಾನಗಳು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿದೆ. ಇದರಲ್ಲಿ ಹುಲಿಗಿಯಲ್ಲಿ ಮಾರಾಟ ಮಾಡಲಾಗುವ ಲಾಡು ಪ್ರಸಾದವೇ ಹೆಚ್ಚಿನ ಪ್ರಮಾಣದಲ್ಲಿ ಖರ್ಚಾಗುತ್ತದೆ. ರಾಜ್ಯ ಸರ್ಕಾರ ಈಗಾಗಲೇ ಪ್ರಸಾದ ತಯಾರಿಕೆಗೆ ನಂದಿನಿ ತುಪ್ಪ ಮಾತ್ರ ಬಳಸುವಂತೆ ಇತ್ತೀಚೆಗೆ ಆದೇಶ ಹೊರಡಿಸಿದೆ. ಅದರಂತೆ ಹುಲಿಗಿಯಲ್ಲಿ ಹಲವು ವರ್ಷಗಳಿಂದ ನಂದಿನಿ ತುಪ್ಪವನ್ನೇ ಬಳಕೆ ಮಾಡಲಾಗುತ್ತಿದೆ. ಈಗ ದೇವಸ್ಥಾನ ಆಡಳಿತ ಮಂಡಳಿಯು ಸ್ವಚ್ಛತೆ, ತುಪ್ಪ ಬಳಕೆಯಲ್ಲಿ ಕಟ್ಟೆಚ್ಚರ ವಹಿಸಿದೆ.
ತಿರುಪತಿ ಪ್ರಸಾದದಲ್ಲಿ ಪ್ರಾಣಿಜನ್ಯ ಕೊಬ್ಬು ಬಳಸಿರುವ ಕುರಿತು ಈಗ ಸಾಕಷ್ಟು ಚರ್ಚೆಯೂ ನಡೆಯುತ್ತಿದೆ.
ಹುಲಿಗೆಮ್ಮ ದೇವಿ ದರ್ಶನ ಪಡೆಯಲು ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ ದಿನಗಳಂದು ಲಕ್ಷಾಂತರ ಭಕ್ತರು ರಾಜ್ಯ ಹಾಗೂ ಹೊರರಾಜ್ಯಗಳಿಂದ ಹುಲಿಗಿಗೆ ಬರುತ್ತಾರೆ. ಆಗ ಲಾಡು ಖರೀದಿ ಪ್ರಮಾಣ ಹೆಚ್ಚಿರುತ್ತದೆ. ಸಾಮಾನ್ಯ ದಿನಗಳಲ್ಲಿ ಒಂದರಿಂದ ಎರಡು ಸಾವಿರ ಲಾಡು ಪ್ರಸಾದ ಖರ್ಚಾಗುತ್ತದೆ. ಲಾಡು ತಯಾರಿಸುವ ಹೊಣೆಯನ್ನು ಎಜೆನ್ಸಿಗೆ ನೀಡಲಾಗಿದ್ದು, ಜವಾಬ್ದಾರಿ ಒಪ್ಪಿಕೊಂಡ ಸಂಸ್ಥೆ ಹೇಗೆ ಕೆಲಸ ಮಾಡುತ್ತಿದೆ. ಸ್ವಚ್ಛತೆಗೆ ಆದ್ಯತೆ ನೀಡುತ್ತಿದೆಯೇ? ಎನ್ನುವ ಬಗ್ಗೆ ನಿಗಾ ವಹಿಸುವಂತೆ ಹೇಳಿದೆ.
ಹುಲಿಗಿ ದೇವಸ್ಥಾನದಲ್ಲಿ ಒಂದು ವಾರದ ಹಿಂದೆಯಷ್ಟೇ 30 ಟಿನ್ ನಂದಿನಿ ತುಪ್ಪ ಖರೀದಿ ಮಾಡಲಾಗಿದ್ದು, ಪ್ರತಿ ತಿಂಗಳು 7ರಿಂದ 10 ಟಿನ್ ಖರ್ಚಾಗುತ್ತದೆ.
ಹೊರ ರಾಜ್ಯ ಹಾಗೂ ಹೊರದೇಶಗಳ ಭಕ್ತರನ್ನು ಹೊಂದಿರುವ ಅಂಜನಾದ್ರಿಯಲ್ಲಿಯೂ ನಿಶ್ಚಿತವಾಗಿ ಪ್ರಸಾದವೆಂದು ಯಾವ ತಿನಿಸನ್ನೂ ನಿಗದಿ ಮಾಡಿಲ್ಲ. ಆದರೆ ಹನುಮ ಜಯಂತಿ, ಹನುಮಮಾಲಾ ವಿಸರ್ಜನೆ ಸಮಯದಲ್ಲಿ ಲಾಡು ಮತ್ತು ತೀರ್ಥದ ಬಾಟಲ್ ನೀಡಲಾಗುತ್ತದೆ. ಹನುಮಮಾಲಾ ವಿಸರ್ಜನಾ ಸಮಯದಲ್ಲಿ ಬರುವ ಲಕ್ಷಾಂತರ ಭಕ್ತರು ಹಣ ಕೊಟ್ಟು ಲಾಡು ಖರೀದಿ ಮಾಡುತ್ತಾರೆ.
ಲಾಡು ಪ್ರಸಾದ ಬಳಕೆಗೆ ಬೇಕಾಗುವ ಸಾಮಗ್ರಿ ಖರೀದಿಗೆ ಟೆಂಡರ್ ಮೂಲಕ ಎಜೆನ್ಸಿ ನಿಗದಿ ಮಾಡಲಾಗಿದೆ. ಸ್ವಚ್ಛತೆಗೆ ಗಮನ ನೀಡಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಕೆಗೇ ಆದ್ಯತೆ ನೀಡಲಾಗುತ್ತಿದೆ.ಪ್ರಕಾಶ ಹುಲಿಗಿ ದೇವಸ್ಥಾನದ ಸಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.