ಗುರುವಾರ , ಜೂನ್ 17, 2021
21 °C
ಜಿಲ್ಲಾಡಳಿತ, ಆರೋಗ್ಯ ಇಲಾಖೆಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮ; ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ

ಕೊರೊನಾ ಸೋಂಕು ಹೆಚ್ಚಳ: ಆತಂಕ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಜನರ ನಿದ್ದೆಗೆಡಿಸಿದೆ. ಅವರು ಮುಂಜಾಗ್ರತೆಯ ಮೊರೆ ಹೋಗಿದ್ದಾರೆ. ಜಿಲ್ಲೆಯಲ್ಲಿ ಎರಡನೇ ಅಲೆ ಇನ್ನೂ ತೀವ್ರ ಪ್ರಮಾಣವಾಗಿ ಬಾಧಿಸದೇ ಇದ್ದರೂ ಮೊದಲ ಅಲೆಯಲ್ಲಿಯೇ ಸಾಕಷ್ಟು ತೊಂದರೆಗೆ ಒಳಗಾಗಿ ಮುನ್ನೆಚ್ಚರಿಕೆ ಕ್ರಮವನ್ನು ಸ್ವಯಂಪ್ರೇರಿತವಾಗಿ ಕಂಡುಕೊಂಡಿದ್ದು, ಮನೆಯಿಂದ ಹೊರ ಬಾರದೇ ವಾರಾಂತ್ಯದ ಲಾಕ್‌ಡೌನ್‌ಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.

ಕೊರೊನಾ ಹಾವಳಿ ವ್ಯಾಪಕವಾಗುತ್ತಿರುವ ಕಾರಣ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಜಿಲ್ಲಾ ಸರ್ಕಾರಿ ಆಸ್ಪತ್ರೆ, ಕಿಮ್ಸ್ ನೆರವಿನೊಂದಿಗೆ ಎಲ್ಲ ತಾಲ್ಲೂಕುಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ. ಕೊರೊನಾ ವಿಶೇಷ ಆಸ್ಪತ್ರೆ ಆರಂಭಿಸದೆ ಹೋದರೂ, ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 400 ಹಾಸಿಗೆಗಳ ವ್ಯವಸ್ಥೆ ಇದೆ.

ಹೆಚ್ಚಿನ ಸೋಂಕು ಕಾಣಿಸಿಕೊಳ್ಳದಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಆಕ್ಸಿಜನ್‌ ಸಿಲಿಂಡರ್‌ ಮತ್ತು ಅಗತ್ಯ ಲಸಿಕೆಗಳ ದಾಸ್ತಾನಿಗೆ ಸೂಚನೆ ನೀಡಲಾಗಿದೆ. 6 ಸಾವಿರ ಲೀಟರ್‌ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕ್‌ ಅನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪನೆ ಮಾಡಲಾಗಿದೆ. ಅತ್ಯಾಧುನಿಕ ಗುಣಮಟ್ಟದ ಮತ್ತು ಶಾಶ್ವತ ಟ್ಯಾಂಕ್‌ ಅನ್ನು ಈಚೆಗೆ ಅಳವಡಿಸಿದ್ದು, ಯಾವಾಗಲೂ ಭರ್ತಿಯಾಗಿರುವಂತೆ ನಿಗಾ ವಹಿಸಲಾಗಿದೆ.

ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 80ಕ್ಕೂ ಹೆಚ್ಚು ವೆಂಟಿಲೇಟರ್‌ ಹಾಸಿಗೆಗಳ ಸೌಲಭ್ಯವಿದೆ. ಕಲ್ಯಾಣ ಮತ್ತು ಜಿಂದಾಲ್‌ ಕಾರ್ಖಾನೆಗಳು ನಿತ್ಯ 10 ಸಾವಿರ ಟನ್‌ ಆಕ್ಸಿಜನ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಮೊದಲು ಜಿಲ್ಲೆಗೆ ಬೇಕಾದಷ್ಟು ಆಕ್ಸಿಜನ್‌ಗಳನ್ನು ಸಂಗ್ರಹಿಸಿಟ್ಟುಕೊಂಡು ಬೇರೆಡೆ ಕಳುಹಿಸಲು ಸೂಚನೆ ನೀಡಲಾಗಿದೆ.

ಮಾಸ್ಕ್‌ ಮತ್ತು ಪರಸ್ಪರ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಈ ಕುರಿತು ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಕೊರೊನಾ ನಿಯಮ ಉಲ್ಲಂಘನೆ ಮಾಡುವ ಜನರಿಗೆ ದಂಡವನ್ನು ಕೂಡಾ ಪೊಲೀಸರು ಹಾಕುತ್ತಿದ್ದು, ಆಯಾಕಟ್ಟಿನ ಸ್ಥಳದಲ್ಲಿ ನಿರಂತರ ಎಚ್ಚರಿಕೆಯನ್ನು ವಹಿಸಿದ್ದಾರೆ. ಇದರಿಂದ ವಾರಾಂತ್ಯದ ಲಾಕ್‌ಡೌನ್‌ಗೆ ಜನರ ಸಹಕಾರ ಕೂಡಾ ಉತ್ತಮವಾಗಿದೆ.

ಸಿಬ್ಬಂದಿ ಕೊರತೆ: ಸೀಮಿತ ಸಿಬ್ಬಂದಿ ನಡುವೆಯೇ ಕೊರೊನಾ ಸೇರಿದಂತೆ ವಿವಿಧ ವೈದ್ಯಕೀಯ ಸೇವೆಗಳನ್ನು ಆರೋಗ್ಯ ಇಲಾಖೆ ನೀಡುತ್ತಿದೆ. ಕೊಪ್ಪಳದಲ್ಲಿ 1 ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಗಂಗಾವತಿ ನಗರ ಆರೋಗ್ಯ ಕೇಂದ್ರ, ಕುಷ್ಟಗಿ, ಯಲಬುರ್ಗಾ ತಾಲ್ಲೂಕು ಆಸ್ಪತ್ರೆಗಳು ಸೇರಿದಂತೆ 46 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ತಳಕಲ್‌ನಲ್ಲಿ ಹೆರಿಗೆ ಆಸ್ಪತ್ರೆ, ಕೊಪ್ಪಳ, ಗಂಗಾವತಿಯಲ್ಲಿ ತಾಯಿ ಮತ್ತು ಮಗು ಆಸ್ಪತ್ರೆ ಇವೆ.

ಜಿಲ್ಲೆಯಲ್ಲಿ 28 ತಜ್ಞ ವೈದ್ಯರು ಇದ್ದು, 368 ಹುದ್ದೆಗಳು ಖಾಲಿ ಇವೆ. ಈಚೆಗೆ 80 ಜನರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದು, ತಕ್ಕ ಮಟ್ಟಿಗೆ ಸೇವೆ ನೀಡುತ್ತಿವೆ. ಆದರೆ, ಆಸ್ಪತ್ರೆಗಳಲ್ಲಿ ಸ್ವಚ್ಛತೆ ಮತ್ತು ಸೌಲಭ್ಯ ಕೊರತೆಯಿಂದ ಜನರಿಗೆ ತೊಂದರೆ ಆಗುತ್ತಿದೆ. ಕೋವಿಡ್‌ ಸೇರಿದಂತೆ ಸಣ್ಣಪುಟ್ಟ ರೋಗಗಳಿಗೆ ಬಹುತೇಕ ಜನರು ಈ ಆಸ್ಪತ್ರೆಗಳನ್ನೇ ಅವಲಂಬಿಸಿದ್ದರಿಂದ ಜನದಟ್ಟಣೆ ಹೆಚ್ಚಿದೆ.

ವಲಸೆ ಕಾರ್ಮಿಕರ ಸಮಸ್ಯೆ: ಕಳೆದ ಬಾರಿಯಂತೆ ಈ ಸಾರಿ ವಲಸೆ ಕಾರ್ಮಿಕರ ಸಮಸ್ಯೆ ಅಷ್ಟೊಂದು ಇಲ್ಲ. ಮಹಾರಾಷ್ಟ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಗೆ ತೆರಳಿದ್ದ ಕುಷ್ಟಗಿ, ಯಲಬುರ್ಗಾದ ಜನರು ಈ ಬಾರಿ ಊರಿನಲ್ಲಿಯೇ ಉಳಿದುಕೊಂಡಿದ್ದು, ನರೇಗಾ ಸೇರಿದಂತೆ ವಿವಿಧ ಕಟ್ಟಡ ನಿರ್ಮಾಣ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಸೋಂಕಿನ ಪ್ರಮಾಣದ ತೀವ್ರತೆ ಕಡಿಮೆಯಾಗಿದೆ.

ಅವಧಿಗೂ ಮುಂಚೆಯೇ ಭತ್ತ ಸೇರಿದಂತೆ ನೀರಾವರಿ ಭಾಗದಲ್ಲಿ ಕಟಾವು ಕಾರ್ಯ ಮುಗಿದಿದ್ದು, ಆಂಧ್ರ, ತೆಲಾಂಗಣದ ಕೃಷಿ ಕೂಲಿಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಬಂದಿಲ್ಲ. ಜಿಲ್ಲೆಯ ಗಡಿಭಾಗದಲ್ಲಿ ಚೆಕ್‌ ಪೋಸ್ಟ್‌ ಆರಂಭಿಸದೇ ಇದ್ದರೂ ಹೋಗಿ ಬರುವ ಜನರ ಮೇಲೆ ಸೂಕ್ಷ್ಮ ನಿಗಾ ಇರಿಸಲಾಗಿದೆ.

ಪರೀಕ್ಷೆ ಹೆಚ್ಚಳ: ಸಮುದಾಯ ಆರೋಗ್ಯ ಪರೀಕ್ಷೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದ್ದು, 100ಕ್ಕೆ ಇಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಕೊರೊನಾ ಪರೀಕ್ಷೆ ವರದಿ ವಿಳಂಬವಾಗುತ್ತಿದ್ದು, ಪ್ರಾಯೋಗಿಕ ವರದಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಪರೀಕ್ಷೆ ನಡೆಸಿದ 24 ಗಂಟೆಗಳಲ್ಲಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಆದರೂ ಕೆಲವು ಕಡೆ 48 ಗಂಟೆಯಾದರೂ ವರದಿ ಬಾರದೇ ವಿಳಂಬವಾಗುತ್ತಿರುವುದು ತೊಂದರೆಯಾಗುತ್ತಿದೆ.

ಕೊರೊನಾ ಎರಡನೇ ಅಲೆ ವ್ಯಾಪಿಸಿದಂತೆ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಎರಡನೇ ಅಲೆಯಲ್ಲಿ  2 ಸಾವುಗಳು ಸಂಭವಿಸಿವೆ. 281 ಹೊಸ ಪ್ರಕರಣ ಪತ್ತೆಯಾಗಿದ್ದು, ಗುಣಮುಖರಾಗುತ್ತಿರುವರ ಸಂಖ್ಯೆ ಕೂಡಾ ಹೆಚ್ಚಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.