ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಕ್ ಡ್ಯಾಂ: ಹೆಚ್ಚಿದ ಅಂತರ್ಜಲ ಮಟ್ಟ

ನರೇಗಾ ಯೋಜನೆಯಲ್ಲಿ ಹೂಳು ತೆರವು: ಮಳೆ ನೀರು ಸಂಗ್ರಹ
Last Updated 4 ಆಗಸ್ಟ್ 2021, 16:25 IST
ಅಕ್ಷರ ಗಾತ್ರ

ಕನಕಗಿರಿ: ಚೆಕ್ ಡ್ಯಾಂ ನಿರ್ಮಾಣಗೊಂಡು ಮೂರು ವರ್ಷ ಕಳೆದಿದ್ದರೂ ರೈತರಿಗೆ ಯಾವುದೇ ರೀತಿಯಲ್ಲಿ ಲಾಭವಾಗಿರಲಿಲ್ಲ. ಈಚೆಗೆ ನರೇಗಾ ಯೋಜನೆಯಲ್ಲಿ ಚೆಕ್ ಡ್ಯಾಂನಲ್ಲಿ ತುಂಬಿದ್ದ ಹೂಳು ಎತ್ತಿದ್ದರಿಂದ ಮಳೆ ನೀರು ಸಂಗ್ರಹವಾಗಿ ರೈತರ ಮೊಗದಲ್ಲಿ ಸಂತಸ ತಂದಿದೆ.

ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿರುವುದರಿಂದ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.

ತಾಲ್ಲೂಕಿನ ಹುಲಿಹೈದರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಗುಡ್ಡ ಗ್ರಾಮದಲ್ಲಿ ನರೇಗಾ ಯೋಜನೆಯ ’ದುಡಿಯೋಣ ಬಾ‘ ಹಾಗೂ ಜಲಶಕ್ತಿ ಅಭಿಯಾನ ಯೋಜನೆ ಅಡಿಯಲ್ಲಿ 2020-21 ನೇ ಸಾಲಿನಲ್ಲಿ 1.5 ಎಕರೆ ವಿಸ್ತೀರ್ಣ ಹೊಂದಿರುವ ಚೆಕ್ ಡ್ಯಾಂನಲ್ಲಿ ತುಂಬಿದ್ದ ಹೂಳನ್ನು ಎತ್ತಲಾಗಿತ್ತು. ಕಳೆದ ಎರಡು ತಿಂಗಳ ಹಿಂದೆ ಬರಿದಾಗಿದ್ದ ಚೆಕ್ ಡ್ಯಾಂ ಇತ್ತೀಚಿನ ಮಳೆಗೆ ಸಂಪೂರ್ಣ ಭರ್ತಿಯಾಗಿದೆ.

ಪಾತಾಳಕ್ಕೆ ಕುಸಿದಿದ್ದ ಸುತ್ತಲಿನ ಬೋರ್ ವೆಲ್‍ಗಳ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ರೈತರು ಸೂರ್ಯಕಾಂತಿ, ಹೆಸರು, ಜೋಳ, ಸಜ್ಜೆ ಇತರೆ ಬೆಳೆಗಳನ್ನು ಬೆಳೆದಿದ್ದು ಉತ್ತಮ ಫಸಲು ಬರಲಿದೆ.

ಕುಡಿಯುವ ನೀರಿಗಾಗಿ ಎಲ್ಲೆಡೆ ತಿರುಗುತ್ತಿದ್ದ ಕುರಿ, ದನಕರುಗಳು ಚೆಕ್ ಡ್ಯಾಂ ಕಡೆಗೆ ಮುಖ ಮಾಡಿವೆ. ಪಕ್ಷಿಗಳ ಸಂತತಿ ಸಹ ಬೆಳೆದಿದ್ದು ಕಲರವ ಮನಸ್ಸಿಗೆ ಮುದ ನೀಡುತ್ತಿದೆ. ಚೆಕ್ ಡ್ಯಾಂ ಸುತ್ತ ಉತ್ತಮ ವಾತಾವರಣ ನಿರ್ಮಾಣವಾಗಿದೆ.

ಲಾಕ್ ಡೌನ್ ಸಮಯದಲ್ಲಿ ಒಟ್ಟು 164 ಕೂಲಿ ಕಾರ್ಮಿಕರಿಗೆ ಮಾಸ್ಕ್ ವಿತರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಒಟ್ಟು 1148 ಮಾನವ ದಿನಗಳು ಸೃಷ್ಟಿಸಲಾಗಿದ್ದು 191 (ಪಡಿ) ಗುಂಡಿಗಳನ್ನು ತೋಡಲಾಗಿದೆ. ಈ ಕಾಮಗಾರಿಗೆ ₹ 5 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ಕುಲಕರ್ಣಿ ತಿಳಿಸಿದರು.

ಚೆಕ್ ಡ್ಯಾಂ ದಡದಲ್ಲಿ 3ರಿಂದ 4 ಅಡಿ, ಮಧ್ಯಭಾಗದಲ್ಲಿ 6 ಅಡಿ ನೀರು ನಿಂತಿದೆ. ಅಂದಾಜು 30,26,002 ಲೀಟರ್ ನೀರು ಸಂಗ್ರಹಗೊಂಡಿದ್ದು, ಇನ್ನೂ ಮಳೆ ಬಂದರೆ ನೀರಿನ ಸಂಗ್ರಹ ಹೆಚ್ಚಳವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಚೆಕ್ ಡ್ಯಾಂ ಸುತ್ತಮುತ್ತಲ್ಲಿನ ಪ್ರದೇಶದಲ್ಲಿ ಅಂದಾಜು 40 ಕೊಳವೆಬಾವಿಗಳು ಮರುಭರ್ತಿಗೊಂಡ ಪರಿಣಾಮ ಸಜ್ಜೆ, ತೊಗರಿ ಬೆಳೆಗೆ ಬಿತ್ತನೆ ಮಾಡುತ್ತಿದ್ದ ರೈತರು ವಾಣಿಜ್ಯ ಬೆಳೆಗಳಾದ ಸೂರ್ಯಕಾಂತಿ, ಹತ್ತಿ, ಶೇಂಗಾ ಬೆಳೆಯ ಕಡೆಗೆ ಮುಖ ಮಾಡಿದ್ದಾರೆ.

’ನೈಸರ್ಗಿಕವಾಗಿ ಬರುವ ಮಳೆ ನೀರನ್ನು ಸಂಗ್ರಹಿಸಿದರೆ ಏನೆಲ್ಲ ಲಾಭ ಎಂಬುದಕ್ಕೆ ಈ ಚೆಕ್ ಡ್ಯಾಂ ಉದಾಹರಣೆಯಾಗಿದೆ. ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗೆ ನರೇಗಾ ಯೋಜನೆ ಸಹಕಾರಿಯಾಗಿದೆ‘ ಎಂದು ತಾ.ಪಂ. ಒಇ ಕಾವ್ಯರಾಣಿ ತಿಳಿಸಿದರು.

ನರೇಗಾ ಯೋಜನೆಯಲ್ಲಿ ಹೊಸಗುಡ್ಡದ ಚೆಕ್ ಡ್ಯಾಂನಲ್ಲಿ ತುಂಬಿದ್ದ ಹೂಳನ್ನು ಎತ್ತುವಳಿ ಮಾಡಲಾಗಿದ್ದು ಮಳೆಗೆ ಚೆಕ್ ಡ್ಯಾಂ ಭರ್ತಿಯಾದ ಪರಿಣಾಮ ಸಾಕಷ್ಟು ಬದಲಾವಣೆಯಾಗಿದೆ. ದನ, ಕರು, ಇತರೆ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗಿದೆ
-ಕೆ.ವಿ. ಕಾವ್ಯರಾಣಿ ಇ.ಒ ತಾ.ಪಂ., ಕನಕಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT