ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ವಾಟ್ಸ್ಆ್ಯಪ್‌ ಗ್ರೂಪ್‌ಗೆ ಸಲಹೆ

ಸುರಕ್ಷಿತ ವ್ಯವಸ್ಥೆಯಲ್ಲಿ ಅಗತ್ಯವಸ್ತು ತಲುಪಿಸಿ
Last Updated 9 ಏಪ್ರಿಲ್ 2020, 12:09 IST
ಅಕ್ಷರ ಗಾತ್ರ

ಕುಷ್ಟಗಿ: ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಕಿರಾಣಿ, ಸಗಟು ಮತ್ತು ಚಿಲ್ಲರೆ ಮಾರಾಟಗಾರರು ಗ್ರಾಹಕರಿಗೆ ಅಗತ್ಯ ದಿನಸಿ ವಸ್ತುಗಳನ್ನು ತಲುಪಿಸಲು ಸುರಕ್ಷಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಹಾಗೂ ತಾಲ್ಲೂಕಿನ ಕೊರೊನಾ ನೋಡಲ್‌ ಅಧಿಕಾರಿ ಸಿದ್ರಾಮೇಶ್ವರ ಹೇಳಿದರು.

ಇಲ್ಲಿಯ ಪುರಸಭೆ ಕಚೇರಿಯಲ್ಲಿ ಗುರುವಾರ ನಡೆದ ಕಿರಾಣಿ ವರ್ತಕರೊಂದಿಗೆ ನಡೆಸಿದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಅಂಗಡಿ ತೆರೆಯುವಂತಿಲ್ಲ, ಜನರನ್ನು ಗುಂಪಾಗಿ ನಿಲ್ಲಿಸುವಂತಿಲ್ಲ. ಹಾಗಾಗಿ ಜನರ ಬೇಡಿಕೆಗೆ ಅನುಗುಣವಾಗಿ ಮನೆ ಮನೆಗೆ ತಲುಪಿಸುವುದು ಅವಶ್ಯ. ನಿಗದಿತ ಓಣಿಗಳಲ್ಲಿ ಹೋಗಿ ಸಾಮಗ್ರಿ ವಿತರಿಸುವುದಕ್ಕೆ ವರ್ತಕರಿಗೆ ಪರವಾನಗಿ ನೀಡಲಾಗುತ್ತದೆ. ಅದೇ ರೀತಿ ಗ್ರಾಮಾಂತರ ಪ್ರದೇಶದಲ್ಲಿರುವ ಚಿಲ್ಲರೆ ವರ್ತಕರ ಅಂಗಡಿಗಳಿಗೆ ದಿನಸಿ ವಸ್ತುಗಳನ್ನು ವಾಹನಗಳಲ್ಲಿ ತೆಗೆದುಕೊಂಡು ಹೋಗಿ ಸರಬರಾಜು ಮಾಡುವುದಕ್ಕೂ ಪಾಸ್‌ ನೀಡಲಾಗುತ್ತದೆ ಎಂದರು.

ವ್ಯಾಟ್ಸ್ಆ್ಯಪ್‌ ಗ್ರೂಪ್‌: ಸಗಟು ಮತ್ತು ಚಿಲ್ಲರೆ ವ್ಯಾಪಾರಸ್ಥರು ಈಗಾಗಲೇ ತಮ್ಮ ತಮ್ಮ ನಿರ್ದಿಷ್ಟ ಗ್ರಾಹಕರನ್ನು ಹೊಂದಿರುತ್ತಾರೆ. ಆದರೆ ಅವರು ಅಂಗಡಿಗಳಿಗೆ ಬರುವಂತಿಲ್ಲ. ಹಾಗಾಗಿ ಬದಲಾದ ವ್ಯವಸ್ಥೆಗೆ ಅನುಗುಣವಾಗಿ ಎಲ್ಲರೂ ಹೊಂದಿಕೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ಮೊಬೈಲ್‌ ತಾಂತ್ರಿಕತೆಯ ನೆರವು ಬಳಸಿಕೊಳ್ಳಬಹುದು. ಇತ್ತಿಚಿನ ದಿನಗಳಲ್ಲಿ ಎಲ್ಲರಲ್ಲಿಯೂ ಆ್ಯಂಡ್ರಾಯಿಡ್ ಮೊಬೈಲ್‌ಗಳು ಇರುತ್ತವೆ. ಅಂಥ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಿ ವ್ಯಾಟ್ಸ್ಆ್ಯಪ್‌ ಗ್ರೂಪ್‌ಗಳನ್ನು ಮಾಡಿಕೊಳ್ಳಬೇಕು. ಸಂಪರ್ಕದಲ್ಲಿರುವ ಗ್ರಾಹಕರು ತಮ್ಮ ಬೇಡಿಕೆ ವಸ್ತುಗಳ ಪಟ್ಟಿಯನ್ನು ಗ್ರೂಪ್‌ಗೆ ಕಳಿಸುವಂತಾಗಬೇಕು. ನಂತರ ಅಂಗಡಿಯವರು ನೇರವಾಗಿ ಮನೆಗಳಿಗೆ ವಸ್ತುಗಳನ್ನು ತಲುಪಿಸಲು ಸಾಧ್ಯವಾಗುತ್ತದೆ. ಇಂಥ ಕ್ರಮಗಳು ಅಳವಡಿಸಿಕೊಳ್ಳುವುದು ಅನಿವಾರ್ಯವೂ ಹೌದು ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಎಂ.ಸಿದ್ದೇಶ್‌, ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ, ಸಬ್‌ ಇನ್‌ಸ್ಪೆಕ್ಟರ್ ಚಿತ್ತರಂಜನ್ ಹಾಗೂ ಪಟ್ಟಣದ ಬಹಳಷ್ಟು ಜನ ಕಿರಾಣಿ ವರ್ತಕರು ಸಭೆಯಲ್ಲಿದ್ದರು.

ರೈತರಿಂದ ನೇರ ಖರೀದಿ
ಹಳ್ಳಿಗಳಿಂದ ರೈತರು ತರುವ ತರಕಾರಿಗಳನ್ನು ಹರಾಜು ಮೂಲಕ ಮಾರಾಟ ಮಾಡುವ ವ್ಯಾಪಾರಿಗಳು ವಾರದಲ್ಲಿ ಕೇವಲ ಮೂರು ದಿನ ಮಾತ್ರ ಈ ಪ್ರಕ್ರಿಯೆ ನಡೆಸುವಂತೆ ಸೂಚಿಸಲಾಗಿದೆ.

ಬುಧವಾರ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ವಿಷಯ ತಿಳಿಸಿದ ತಹಶೀಲ್ದಾರ್‌ ಎಂ.ಸಿದ್ದೇಶ್, ಬೆಳಿಗ್ಗೆ 6 ಗಂಟೆಯಿಂದ 6.30ರ ಅವಧಿಯಲ್ಲಿ (ಕೇವಲ ಅರ್ಧಗಂಟೆ) ವಹಿವಾಟು ಮುಗಿಸಬೇಕು. ಎಲ್ಲರೂ ಒಂದೇ ಕಡೆ ಗುಂಪು ಸೇರಿ ವ್ಯಾಪಾರ ನಡೆಸುವುದಕ್ಕೆ ಅವಕಾಶವಿಲ್ಲ. ಈ ಸೂಚನೆ ಕಡೆಗಣಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವುದು ಅನಿವಾರ್ಯ. ಅದೇ ರೀತಿ ಎಪಿಎಂಸಿ ವರ್ತಕರು ರೈತರ ಕೃಷಿ ಉತ್ಪನ್ನಗಳನ್ನು ಅವರು ಇದ್ದಲ್ಲಿಗೇ ಹೋಗಿ ನೇರವಾಗಿ ಖರೀದಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT