ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ರೇಷ್ಮೆ ಬೇಸಾಯಕ್ಕೆ ಆಸಕ್ತಿ ವಹಿಸಿ: ಸಂಸದ ಸಂಗಣ್ಣ ಕರಡಿ

ಪ್ರಗತಿಪರ ರೇಷ್ಮೆ ಬೆಳೆಗಾರರಿಗೆ ಸನ್ಮಾನ
Last Updated 16 ಜುಲೈ 2020, 13:06 IST
ಅಕ್ಷರ ಗಾತ್ರ

ಕೊಪ್ಪಳ: ರೈತರಿಗೆ ಮಾಸಿಕ ನಿಶ್ಚಿತ ಆದಾಯ ತರುವ ರೇಷ್ಮೆ ಬೇಸಾಯ ಕೈಗೊಳ್ಳುವ ನಿಟ್ಟಿನಲ್ಲಿ ಯುವಕರು ಆಸಕ್ತಿ ವಹಿಸಬೇಕಿದೆ ಎಂದು ಸಂಸದ ಸಂಗಣ್ಣ ಕರಡಿ ಗುರುವಾರ ಹೇಳಿದರು.

ನಗರದಲ್ಲಿ ಗುರುವಾರ ಪ್ರಗತಿಪರ ರೇಷ್ಮೆ ಬೆಳೆಗಾರರ ವಿಭಾಗದಲ್ಲಿ ದ್ವಿ ತಳಿ (ಬೈವೋಲ್ಟೈನ್ ಹೈಬ್ರಿಡ್) ರೇಷ್ಮೆಗೂಡು ಉತ್ಪಾದನೆಯಲ್ಲಿ ಉತ್ತಮ ಸಾಧನೆ ತೋರಿದ ರೇಷ್ಮೆ ಬೆಳೆಗಾರರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೇಷ್ಮೆ ಕೃಷಿಯಲ್ಲಿ ವಿಪುಲ ಅವಕಾಶಗಳಿವೆ. ಇಲಾಖೆಯ ಮೂಲಕ ರೈತರಿಗೆ ಹಿಪ್ಪುನೇರಳೆ ಬೇಸಾಯ, ಹುಳು ಸಾಕಾಣೆ, ವ್ಯವಸ್ಥಿತರ ರೀತಿಯಲ್ಲಿ ಗೂಡುಗಳ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಸರ್ಕಾರ ರೈತರಿಗೆ ಅಗತ್ಯ ಆರ್ಥಿಕ, ತಾಂತ್ರಿಕ ನೆರವು ನೀಡುತ್ತಿದೆ. ಗುಣಮಟ್ಟದ ಗೂಡುಗಳ ಉತ್ಪಾದಿಸುವ ರೈತರನ್ನು ಪ್ರೋತ್ಸಾಹಿಸುತ್ತಿದೆ. ರೇಷ್ಮೆ ಬೇಸಾಯ ಕ್ಷೇತ್ರ ಹೆಚ್ಚಿಸುವಲ್ಲಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮುತುವರ್ಜಿ ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಅನೇಕ ರೈತರು ರೇಷ್ಮೆ ಹುಳು ಸಾಕಾಣೆಗೆ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಅವರಿಗೆ ಸರ್ಕಾರದ ಸಹಾಯಧನ ಬಿಡುಗಡೆಯಾಗಿಲ್ಲ. ಈ ಬಗ್ಗೆ ರೈತರು ಸಮಸ್ಯೆ ತೋಡಿಕೊಂಡಿದ್ದು, ಈ ವಿಷಯದ ಬಗ್ಗೆ ರಾಜ್ಯದ ರೇಷ್ಮೆ ಇಲಾಖೆ ಆಯುಕ್ತರೊಂದಿಗೆ ಚರ್ಚಿಸಿ, ಸಹಾಯಧನ ಬಿಡುಗಡೆಗೆ ಪ್ರಯತ್ನಿಸುವುದಾಗಿ ಸಂಸದ ಸಂಗಣ್ಣ ರೈತರಿಗೆ ಭರವಸೆ ನೀಡಿದರು.

ರೇಷ್ಮೆ ಇಲಾಖೆ ಉಪ ನಿರ್ದೇಶಕ ಸಿ.ಆಂಜನಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿನ ಮಣ್ಣು ಮತ್ತು ಹವಾಗುಣ ರೇಷ್ಮೆ ಬೇಸಾಯಕ್ಕೆ ಪೂರಕವಾಗಿದ್ದು, ಹೆಚ್ಚಿನ ಕ್ಷೇತ್ರದಲ್ಲಿ ಬೇಸಾಯ ಕೈಗೊಳ್ಳಲು ಹೆಚ್ಚು ಅವಕಾಶಗಳು ಇರುವುದರಿಂದ ಯುವಜನತೆ ರೇಷ್ಮೆ ಬೇಸಾಯದತ್ತ ಗಮನಹರಿಸಬೇಕು ಎಂದರು.

ಇಲಾಖೆಯಿಂದ ಯಾಂತ್ರೀಕರಣ, ಹುಳು ಸಾಕಾಣೆ, ಸಲಕರಣೆಗಳು, ಹೊಸ ಸಸಿ ನಾಟಿ, ಹುಳು ಸಾಕಾಣೆ ಮನೆ ನಿರ್ಮಾಣ, ಹನಿ ನೀರಾವರಿ ಇತರೆ ಅನುಕೂಲತೆಗಾಗಿ ಸರ್ಕಾರ ಸಾಕಷ್ಟು ಸಹಾಯಧನ ನೀಡುತ್ತಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡರೆ ರೈತರು, ಯುವಜನರ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ. ಮನೆ ಮಂದಿಗೆಲ್ಲ ಕೆಲಸ ದೊರೆಯುತ್ತದೆ. ರೇಷ್ಮೆ ಬೆಳೆಗಾರರ ಕುಟುಂಬಗಳು ವೈಯಕ್ತಿಕ ಆದಾಯ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ಬೆಳೆಗಾರರಿಗೆ ಸನ್ಮಾನ

2018–19ನೇ ವರ್ಷದ ಜಿಲ್ಲಾಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದ ತಾಲ್ಲೂಕಿನ ಹ್ಯಾಟಿ ಗ್ರಾಮದ ರೇಷ್ಮೆ ಬೆಳೆಗಾರ ಸಿದ್ಧಲಿಂಗಪ್ಪ ಯಡ್ರಮ್ಮನಹಳ್ಳಿ ಮತ್ತು ದ್ವಿತೀಯ ಬಹುಮಾನ ಪಡೆದ ಯಲಬುರ್ಗಾ ತಾಲ್ಲೂಕಿನ ಹಿರೇಅರಳಿಹಳ್ಳಿ ಗ್ರಾಮದ ನಾರಾಯಣರಾವ ಕುಲಕರ್ಣಿ ಅವರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿಪತ್ರ ವಿತರಿಸಲಾಯಿತು.

ರೇಷ್ಮೆ ಪ್ರದರ್ಶಕರಾದ ಅಕ್ಕಮ್ಮ, ಈರಣ್ಣ, ಎಸ್‌.ಜಿ.ಗಣಾಚಾರಿ, ಶರಣಪ್ಪ ಹಾವರಗಿ, ಎನ್‌.ಟಿ.ಕಟ್ಟಿಮನಿ, ಆರ್‌.ಬಿ.ಕಮತರ, ಚನ್ನಬಸಯ್ಯ ಹಿರೇಮಠ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT