ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರವಾಗಿ ಲೋಕಸಭೆಗೆ ಜಿಗಿದ ವಿದ್ಯಾರ್ಥಿ ನಾಯಕ

ಮಾಜಿ ಸಂಸದ ಶಿವರಾಮಗೌಡ ಸಂದರ್ಶನ
Last Updated 26 ಮಾರ್ಚ್ 2019, 20:15 IST
ಅಕ್ಷರ ಗಾತ್ರ

ಕೊಪ್ಪಳ: ಮಾಜಿ ಸಂಸದ ಕಾಂಗ್ರೆಸ್ ಮುಖಂಡ ಶಿವರಾಮಗೌಡ ಯಾವುದೇ ಚುನಾವಣೆಯನ್ನು ಎದುರಿಸದೇ, ಪ್ರಥಮ ಬಾರಿಗೆ ಕೊಪ್ಪಳ ಲೋಕಸಭಾ ಕ್ಷೇತ್ರದದಿಂದ ಸ್ಪರ್ಧಿಸಿ ನೇರವಾಗಿ ಸಂಸತ್ತಿಗೆ ಚುನಾಯಿತರಾಗಿದ್ದು ವಿಶೇಷ.

ಮೂಲತಃ ಜನತಾ ಪರಿವಾರದಿಂದ ರಾಜಕೀಯ ಪ್ರವೇಶ ಮಾಡಿದ ಗೌಡರು. ಲೋಕ ಶಕ್ತಿ ಪಕ್ಷದಲ್ಲಿ ಆರಂಭದಲ್ಲಿ ಗುರುತಿಸಿಕೊಂಡಿದ್ದರು. ಬದಲಾದ ಸನ್ನಿವೇಶದಲ್ಲಿ ಬಿಜೆಪಿಯಿಂದ 2008ರಲ್ಲಿ ಸ್ಪರ್ಧಿಸಿ ಚುನಾಯಿತರಾದರು.

ನಂತರ ರಾಜಕೀಯ ಕಾರಣಕ್ಕಾಗಿ ಬಿಜೆಪಿ ವಿರುದ್ಧ ಅಸಮಾಧಾನಗೊಂಡು ಕಾಂಗ್ರೆಸ್ ಸೇರಿದರು. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಆಕಾಂಕ್ಷಿಯಾಗಿದ್ದರೂ ಟಿಕೆಟ್ ದೊರೆಯಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಅವರ ಪರ ಪ್ರಚಾರ ಮಾಡುವುದು ಒಂದೇ ಈಗ ಉಳಿದ ದಾರಿ. ಪಕ್ಷದಲ್ಲಿ ಅನೇಕ ನಾಯಕರು ಇರುವುದರಿಂದ ಅಸ್ತಿತ್ವಕ್ಕಾಗಿ ಪೈಪೋಟಿ ನಡೆಸಬೇಕಾದ ಪರಿಸ್ಥಿತಿ ಇದೆ.

ವಕೀಲರಾಗಿ, ವ್ಯಾಪಾರಸ್ಥರಾಗಿ ಗಂಗಾವತಿಯಲ್ಲಿ ನೆಲೆಸಿರುವ ಇವರುಲೋಕಸಭೆಗೆ ಚುನಾಯಿತರಾಗಿ ಅಲ್ಲಿ ತಾವು ಮಾಡಿದ ಕೆಲಸ, ಅನುಭವವನ್ನು ಪತ್ರಿಕೆ ಜೊತೆ ಮುಕ್ತ ಮನಸ್ಸಿನಿಂದ ಹಂಚಿಕೊಂಡಿದ್ದಾರೆ.

ರಾಜಕೀಯಕ್ಕೆ ಬಂದ ಬಗೆ:

ನಾನು ಮೊದಲು ಚುನಾವಣೆ ಎದುರಿಸಿದ್ದು ಕಾಲೇಜಿನಲ್ಲಿ. ಧಾರವಾಡ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ. ಆಗ ತರಗತಿಯ ಪ್ರತಿನಿಧಿಯಾಗಲು ಚುನಾವಣೆ ನಡೆಯಿತು. ನಾವು 23 ಜನ ಆತ್ಮೀಯ ಸ್ನೇಹಿತರು ಇದ್ವಿ. ಅವರ ಪ್ರೋತ್ಸಾಹದಿಂದ ಚುನಾವಣೆಗೆ ನಿಂತೆ. ಆದ್ರೆ, ನನಗೆ ಓಟುಗಳು ಬಿದ್ದಿದ್ದು 23 ಮಾತ್ರ.ಅವತ್ತೇ ನಿರ್ಧಾರಮಾಡಿದೆ ನಾವು ಸಾಮಾನ್ಯ ಜನರ ಮನಸ್ಸಿನಲ್ಲಿಇರಬೇಕೇ ಹೊರತು,ಆತ್ಮೀಯರ ಜೊತೆ ಅಲ್ಲ ಅಂತ. ಈ ಕಾರಣದಿಂದ ರಾಜಕಾರಣ, ಚುನಾವಣೆಯತ್ತ ಆಕರ್ಷಣೆ ಬೆಳೆಯಿತು.

1980 ರಲ್ಲಿ ಕಾನೂನು ಪ್ರಾಕ್ಟೀಸ್ ಗೆ ಕೊಪ್ಪಳಕ್ಕೆ ಬಂದೆ. ಅಲ್ಲಿಯವರೆಗೂ ನನಗೆ ರಾಜಕೀಯದ ಗಂಧಗಾಳಿಯೂ ಗೊತ್ತಿರಲಿಲ್ಲ. ನನಗೆ ಕೆಪಿಎಸ್‌ಸಿ, ಐಎಎಸ್, ಪಿಎಸ್‌ಐ ಆಗಬೇಕು. ನಾನು ನೌಕರಿ ಮಾಡಬೇಕು ಎಂಬ ಹಂಬಲ ಇತ್ತು. ಆದ್ರೇ ನಮ್ಮ ತಂದೆ ಬೇಡ ಅಂದರು. ನಿನಗೆ ನಾನು ಲಾ ಪ್ರಾಕ್ಟೀಸ್ ಮಾಡೋಕೆ ಹೇಳಿದೆ ಹೊರತು ವಕಾಲತ್ತು ಮಾಡು ಅಂತಾ ಹೇಳಿಲ್ಲಾ. ಜ್ಞಾನ ಬರಲಿ ಅಂತಾ ಓದಿಸಿದ್ದೀನಿ, ಹೊರತು ಕೋರ್ಟ್‌ನಲ್ಲಿ ಕುಳಿತುಕೊಳ್ಳಲು ಅಂತಾ ಹೇಳಿಲ್ಲ ಎಂದು ಹೇಳಿದರು.ಅಲ್ಲದೆ ಇಲ್ಲಿರುವ ವ್ಯವಹಾರ ನೋಡಿಕೊ ಬಾ ಅಂತಾ ಕರೆದರು.

ಯತ್ನಾಳರಿಂದ ಅನಂತಕುಮಾರ್ ಪರಿಚಯ:

1980ರಲ್ಲಿ ಜನತಾ ಪರಿವಾರದ ಜೊತೆ ಗುರುತಿಸಿಕೊಳ್ಳುವ ಅವಕಾಶ ಸಿಕ್ತು. ಲೋಕಶಕ್ತಿ ಪಕ್ಷ ಇರುವಾಗ ಒಂದು ವಾತಾವರಣ ನಿರ್ಮಾಣವಾಯಿತು. ಎಲ್ಲರೂ ಬಿಜೆಪಿ ಸೇರಬೇಕು ಅಂತಾ ನಿರ್ಣಯವಾಯಿತು. ಅದೇ ಸಮಯದಲ್ಲಿ ಪಂಚಮಸಾಲಿ ಸಮಾಜವನ್ನುಓಬಿಸಿಗೆ ಸೇರಿಸಬೇಕು ಅಂತಾ ಹೋರಾಟ ಮಾಡಿ ಆಗಿನ ಪ್ರಧಾನಿ ಆಟಲ್ ಬಿಹಾರಿ ವಾಜಪೇಯಿ ಅವರಿಗೆ ಮನವಿ ಸಲ್ಲಿಸಲು ಇಲ್ಲಿಂದ 150 ಜನ ದೆಹಲಿಗೆ ಹೋಗಿದ್ವಿ. ಆಗಬಸವನಗೌಡ ಪಾಟೀಲ ಯತ್ನಾಳ್ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದರು. ಅವರು ರಾತ್ರಿ ಪಂಚಮಸಾಲಿ ಸಮಾಜದವರಿಗೆಲ್ಲ ಊಟದ ವ್ಯವಸ್ಥೆ ಮಾಡಿದ್ದರು. ಅಲ್ಲಿಗೆ ಅನಂತಕುಮಾರ್ ಅವರು ಬಂದಿದ್ದರು.

ಅವರು ನನ್ನನ್ನು ನೋಡಿ ಗೌಡ್ರೆ, ಬರುವ ಚುನಾವಣೆಯಲ್ಲಿ ನೀವು ಪಾರ್ಲಿಮೆಂಟ್‌ ಸದಸ್ಯರಾಗಬೇಕು. ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಾಗಿರಿ ಎಂದು ಹೇಳಿದರು. ನಾನು ಆಯ್ತು ಸರ್, ನಮ್ಮ ಕ್ಷೇತ್ರದ ಜನರ ಜೊತೆ ಚರ್ಚಿಸಿ ಹೇಳ್ತೇನೆ ಅಂತಾ ಬಂದಿದ್ದೆ.

ಚುನಾವಣೆ ಕಣಕ್ಕೆ:

2003ರಲ್ಲಿ ನಾನು ಮಾನಸಿಕವಾಗಿ ಬಿಜೆಪಿಗೆ ಹೋಗಬೇಕು ಅಂತಾ ಪ್ರಿಪೇರ್ ಆಗಿದ್ದೆ. 2004 ರಲ್ಲಿ ವಿಧಾಸಭೆ ಹಾಗೂ ಲೋಕಸಭೆ ಎರಡು ಚುನಾವಣೆಗಳು ಒಟ್ಟೊಟ್ಟಿಗೆ ಬಂದಿತ್ತು. ಆಗ ನನಗೆ ವಿಧಾನಸಭೆಗೆ ನಿಲ್ಲುವಂತೆ ಹೇಳಿದರು. ಆದ್ರೆ ನನಗೆ ಇಷ್ಟವಿರಲ್ಲಿಲ್ಲ. ಪಾರ್ಲಿಮೆಂಟ್‌ಗೆ ಹೋಗಬೇಕು ಎಂಬ ಕನಸು ನನ್ನಲ್ಲಿತ್ತು. ಯಾಕೆಂದರೆ ನಾನು ದೆಹಲಿಗೆ ಹೋದಾಗ ಪಾರ್ಲಿಮೆಂಟ್ ಅನ್ನು ಪ್ರಥಮವಾಗಿ ಪ್ರವೇಶ ಮಾಡಿದ್ದು, ಅಲ್ಲಿ ನಡೆದ ಅಧಿವೇಶನದಲ್ಲಿ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದ್ದು, ನನ್ನ ಮನಸ್ಸಿನ ಮೇಲೆ ಪ್ರಭಾವ ಬೀರಿತ್ತು. ಹಾಗಾಗಿ ನನಗೆ ಪಾರ್ಲಿಮೆಂಟ್ ಟಿಕೆಟ್ ಕೊಡುವಂತೆ ಕೇಳಿದೆ.

ಅಲ್ದೇ ಅನಂತಕುಮಾರ್ ಬಳಿಯೂ ಈ ಬಗ್ಗೆ ಚರ್ಚಿಸಿದೆ. ಆದ್ರೆ, ಆ ಟಿಕೆಟ್ ಅನ್ನು ಬೇರೆಯವರಿಗೆ ಅಷ್ಟರಲ್ಲಾಗಲೇನೀಡಲಾಗಿತ್ತು. ಮತ್ತೆ 2008 ರಲ್ಲಿ ವಿಧಾನಸಭೆ ಚುನಾವಣೆ ಬಂದಾಗ ನನ್ನ ಹೆಸರು ಕೇಳಿಬಂದಿತ್ತು. ಅದೇ ವರ್ಷ ನನಗೆಅಪಘಾತವಾಯಿತು.

ಬಳಿಕ ಮತ್ತೆ 2009 ರಲ್ಲಿ ಲೋಕಸಭೆ ಚುನಾವಣೆ ಬಂತು. ಆವಾಗ ಮತ್ತೆ ಹೋಗಿ ಟಿಕೆಟ್ ಕೇಳಿದೆ ನಮ್ಮ ಸಮಾಜದ ವತಿಯಿಂದ ನನಗೆ ಟಿಕೆಟ್ ಕೊಡಿ ಎಂದು ಕೇಳಿದೆ.ಅಳೆದೂ ತೂಗಿ ಟಿಕೆಟ್ ಕೊಟ್ರು. ಆದ್ರೆ, ಮೊದಲ ಸಲ ಸ್ಪರ್ಧಿಸಿದ ಚುನಾವಣೆಯಲ್ಲೆ ಗೆಲುವು ಸಾಧಿಸಿದೆ. ಯಾವುದೇ ನಗರಸಭೆ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಿಲ್ಲದ ಈ ವ್ಯಕ್ತಿ ಪಾರ್ಲಿಮೆಂಟ್‌ನಲ್ಲಿ ಗೆದ್ದು ಏನು ಮಾಡ್ತಾನೆ. ಅಂತಾ ಮಾತಾಡಿಕೊಂಡವರೇ ಹೆಚ್ಚು. ಇದ್ಯಾವುದಕ್ಕೂ ನಾನು ತಲೆಕೆಡಿಸಿಕೊಳ್ಳಲ್ಲಿಲ್ಲ.

ಈ ಭಾಗದಲ್ಲಿ ಯಾವುದೇ ಸಂಸದರು ಇದುವರೆಗೂ ಲೋಕಸಭೆಯಲ್ಲಿ ಕೇಳದೆ ಇರುವಂತ ಪ್ರಶ್ನೆಗಳನ್ನ, ಚರ್ಚೆಯಲ್ಲಿ ಭಾಗವಹಿಸದೇ ಇರುವಂತ ಅವಕಾಶಗಳನ್ನ, ತಿದ್ದುಪಡಿ ಮಾಡುವಂತ ಅವಕಾಶಗಳನ್ನ ಮತ್ತು ಇಲ್ಲಿತನಕ ಸ್ಥಳೀಯ ಸಮಸ್ಯೆ ಮತ್ತು ರಾಷ್ಟ್ರ ಮಟ್ಟದಲ್ಲಿ ಇರುವಂತ ಸಮಸ್ಯೆಗಳನ್ನು ಸೇರಿಸಿಚರ್ಚೆ ಮಾಡುವಂತ ಅವಕಾಶಗಳನ್ನು ಪಡೆದುಕೊಂಡೆ.

ಅಧಿವೇಶನದಲ್ಲಿ ಕೇಳಿದ ಪ್ರಶ್ನೆ, ಸಾಧನೆ:

ಪ್ರಥಮ ಅಧಿವೇಶನದಲ್ಲಿ ನಾನು ಏನು ಮಾಡದೇ ಇರಬಹುದು. ಆದರೆ ನಂತರ ಈ ಭಾಗದ ಜನರ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನ ಕೇಳಲು ಶುರುಮಾಡಿದೆ. ಬಿಎಸ್ಎಎನ್ಎಲ್ ರೋಮಿಂಗ್ ಚಾರ್ಜ್ ಸಮಸ್ಯೆಯ ಬಗ್ಗೆ ಪ್ರಥಮವಾಗಿ ಧ್ವನಿ ಎತ್ತಿದ್ದು ನಾನೇ. ನನ್ನ ಕ್ಷೇತ್ರದಲ್ಲಿ ಈ ಸಮಸ್ಯೆಯನ್ನ ಜನರು ಅನುಭವಿಸುತ್ತಿದ್ದರು. ಈ ಬಗ್ಗೆ ನಾನು ಅಧಿವೇಶನದಲ್ಲಿ ಧ್ವನಿ ಎತ್ತಿದೆ. ಡಿಜಿಟಲ್ ಮ್ಯಾಪಿಂಗ್ ಬಗ್ಗೆಯೂ ಧ್ವನಿ ಎತ್ತಿದ್ದು ನಾನೇ ಅದರ ಫಲವಾಗಿ ಇಂದು ನಮ್ಮೆಲ್ಲರ ಜಮೀನಿನ ಹಕ್ಕುಪತ್ರದಲ್ಲಿ ಮಾಲೀಕನ ಭಾವಚಿತ್ರ,ನಕಾಶೆ ಕೂಡ ಇರುವಂತೆ ಆಗಿದೆ. ಇವತ್ತು ದೇಶಾದ್ಯಂತ ಅದು ಎಲ್ಲರಿಗೂ ಅನುಕೂಲವಾಗಿದೆ.

ಭಾಷೆ ಸಮಸ್ಯೆ ಆಗಿಲ್ಲ:

ಕನ್ನಡ, ಇಂಗ್ಲಿಷ್, ತೆಲುಗು ಹಿಂದಿ ಭಾಷೆ ಬರುವುದರಿಂದ ಯಾವುದೇ ಭಾಷಾ ಸಮಸ್ಯೆ ಆಗಲಿಲ್ಲ.ನಾನು ನನ್ನ ಕ್ಷೇತ್ರದ ಕಟ್ಟಕಡೆಯ ಹಳ್ಳಿಗೂ ತೆರಳಿ ಸಮಸ್ಯೆಗಳ ಬಗ್ಗೆ ಆಲಿಸಿದ್ದೇನೆ.

ನಗೆಗಡಲಲ್ಲಿ ತೇಲಿದ ಸಂಸತ್:

ಒಂದು ಬಿಲ್ ಬಗ್ಗೆ ಮಾತಾಡುವ ಸಂದರ್ಭ ಬಂತು. ಕೃಷಿ ಮಂತ್ರಿಗಳಾಗಿದ್ದ ಶರದ್ ಪವಾರ್ ಅವರು ಬಿಲ್ ಮಂಡನೆ ಮಾಡ್ತಾ ಇದ್ದರು. ನಾನು ಅವತ್ತು ಸೆಕೆಂಡ್ ಸ್ಪೋಕ್ ಪರ್ಸನ್ ಆಗಿ ಮಾತಾಡ್ತಾ, ಗೌರವಾನ್ವಿತ ಕೃಷಿ ಸಚಿವರಾದ ಶರದ್ ಪವಾರ್ ಅನ್ನುವ ಬದಲು ಶರದ್ ಯಾದವ್ ಅಂತ ಹೇಳಿದೆ. ಇಡೀಸದನವೇ ನಗೆ ಗಡಲಲ್ಲಿ ತೇಲಿತು. ತಪ್ಪಿನ ಅರಿವು ಆಗಿ ಸಾವರಿಸಿಕೊಂಡು ಮಾತು ಮುಂದುವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT