ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನೌಷಧ ಕೇಂದ್ರ ಬಡವರಿಗೆ ವರದಾನ

ಶಾಸಕ ಅಮರೇಗೌಡ ಬಯ್ಯಾಪುರ ಹೇಳಿಕೆ
Last Updated 18 ನವೆಂಬರ್ 2019, 12:10 IST
ಅಕ್ಷರ ಗಾತ್ರ

ಕುಷ್ಟಗಿ: ‘ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಔಷಧಗಳನ್ನು ಒದಗಿಸುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳಿಂದ ಬಡವರಿಗೆ ಬಹಳಷ್ಟು ಅನುಕೂಲವಾಗಲಿದೆ’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಇಲ್ಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಆರಂಭಗೊಂಡ ಜನೌಷಧ ಕೇಂದ್ರದ ಮಳಿಗೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯ ಮೂರು ತಾಲ್ಲೂಕು ಆಸ್ಪತ್ರೆಗಳಿಗೆ ಜನೌಷಧ ಕೇಂದ್ರ ಮಂಜೂರಾಗಿದ್ದು ಸದ್ಯ ಕುಷ್ಟಗಿ ತಾಲ್ಲೂಕಿನಲ್ಲಿ ಮಾತ್ರ ಕಾರ್ಯಾರಂಭಗೊಂಡಿದೆ. ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್‌ ನ್ಯಾಷನಲ್‌ ಕಂಪೆನಿ (ಎಂಎಸ್‌ಐಎಲ್) ಈ ಕೇಂದ್ರದ ನಿರ್ವಹಣೆ ಹೊಣೆ ಹೊತ್ತಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಹೊರೆಯಾಗಿ ಪರಿಣಮಿಸಿದೆ. ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ದೊರಕಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜನೌಷಧ ಕೇಂದ್ರಗಳನ್ನು ತೆರೆದಿದ್ದು ತಾಲ್ಲೂಕಿನ ಹಾಗೂ ಸುತ್ತಲಿನ ಜನರಿಗೆ ಹೆಚ್ಚಿನ ಪ್ರಯೋಜನ ದೊರೆಯಲಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲಿಂಗರಾಜು ಮಾತನಾಡಿ, ಖಾಸಗಿ ಔಷಧ ಅಂಗಡಿಗಳಲ್ಲಿ ದೊರೆಯುವ ಔಷಧಗಳ ಮೊತ್ತಕ್ಕೆ ಹೋಲಿಸಿದರೆ ಜನೌಷಧ ಕೇಂದ್ರದಲ್ಲಿ ದೊರೆಯುವ ಔಷಧಗಳ ಬೆಲೆ ಶೇ 70ರಷ್ಟು ಕಡಿಮೆಯಾಗಿದೆ. ಹೆರಿಗೆಯಾದಾಗ ಬಾಣಂತಿ ಮತ್ತು ಮಗುವಿಗೆ ಬೇಕಾದ ಔಷಧಗಳು ದುಬಾರಿಯಾಗಿದ್ದು ಈ ಕೇಂದ್ರದಲ್ಲಿ ತೀರಾ ಕಡಿಮೆ ದರದಲ್ಲಿ ದೊರೆಯಲಿವೆ ಎಂದರು.

ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಔಷಧಗಳು ಲಭ್ಯವಿದ್ದು, ಉಳಿದ ಔಷಧಗಳು ಜನೌಷಧ ಕೇಂದ್ರದಲ್ಲಿ ಸಿಗಲಿದ್ದು ಖಾಸಗಿ ಔಷಧ ಅಂಗಡಿಗಳಿಂದ ಔಷಧಗಳನ್ನು ತರುವ ಅಗತ್ಯವಿಲ್ಲ. ಹೊರಗಡೆಯಿಂದ ಔಷಧ ತರುವಂತೆ ಚೀಟಿ (ಪ್ರಿಸ್ಕ್ರಿಪ್ಷನ್) ಬರೆದುಕೊಡಬಾರದು ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ತಾಕೀತು ಮಾಡಲಾಗಿದೆ ಎಂದು ವಿವರಿಸಿದರು.

ಅದೇ ರೀತಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು ಇದ್ದರೂ ಚಿಕಿತ್ಸೆಗೆ ಬೇಕಾಗಿರುವ ಅಗತ್ಯ ಸೌಲಭ್ಯಗಳ ಕೊರತೆ ಇರುವುದು ಗೊತ್ತಾಗಿದ್ದು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಆಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ಸಾರ್ವಜನಿಕರು ಉಗುಳುತ್ತಿರುವುದು ಕಂಡುಬಂದಿದ್ದು ಅದನ್ನು ತಡೆಯಲು ಆಯಕಟ್ಟಿನ ಗೋಡೆಗಳಿಗೆ ದೇವರ ಭಾವಚಿತ್ರ ಅಂಟಿಸುವಂತೆ ಆಸ್ಪತ್ರೆಯ ಆಡಳಿತಾಧಿಕಾರಿಗೆ ತಿಳಿಸಲಾಗಿದೆ. ಸರಿಯಾಗಿ ಕೆಲಸ ನಿರ್ವಹಿಸದ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ನಿಯೋಜನೆಗೊಂಡ ಸ್ವಚ್ಛತಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿ ಬೇರೆಯವರನ್ನು ನೇಮಕ ಮಾಡಿಕೊಳ್ಳುವಂತೆಯೂ ಸೂಚಿಸಿರುವುದಾಗಿ ತಿಳಿಸಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಆನಂದ ಗೊಟೂರು, ಆಸ್ಪತ್ರೆ ಮುಖ್ಯವೈದ್ಯ ಡಾ.ಚಂದ್ರಕಾಂತ ಮಂತ್ರಿ, ಡಾ.ವಿರುಪಾಕ್ಷಪ್ಪ ಹಳ್ಳಳ್ಳಿ, ರಾಜು ವಾಲಿಕಾರ, ಕಾಶಿನಾಥ ತುರಕಾಣಿ, ಶಕುಂತಲಾ ಹಿರೇಮಠ ಸೇರಿದಂತೆ ವೈದ್ಯರು, ಸಿಬ್ಬಂದಿ, ಸಾರ್ವಜನಿಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT