ಶುಕ್ರವಾರ, ಏಪ್ರಿಲ್ 3, 2020
19 °C
ಕೊಪ್ಪಳ: ಕೊರೊನಾ ವೈರಸ್‌ ವಿರುದ್ಧ ಆಂದೋಲನ: ಆರೋಗ್ಯ ಕಾರ್ಯಕರ್ತರಿಗೆ ವಂದನೆ

ಜನತಾ ಕರ್ಫ್ಯೂ: ಸ್ತಬ್ಧಗೊಂಡ ನಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಜನತಾ ಕರ್ಫ್ಯೂಗೆ ಸ್ಪಂದಿಸಿದ ಜನತೆ ಸಂಪೂರ್ಣ ಮತ್ತು ಸ್ವಯಂಪ್ರೇರಿತ ಬಂದ್ ಆಚರಣೆ ಮಾಡುವ ಮೂಲಕ ಕೊರೊನಾ ಮಹಾಮಾರಿ ತಡೆಗೆ ಪ್ರತಿಜ್ಞೆ ಮಾಡಿದರು.

ನಗರದಲ್ಲಿ ಎಂದೂ ಕಂಡರಿಯದ ಬಂದ್‌ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೆಳಿಗ್ಗೆ ಹಾಲು, ಔಷಧಿ, ಪತ್ರಿಕೆ ಸೇರಿದಂತೆ ತುರ್ತು ಅಗತ್ಯಗಳನ್ನು ಮಾರಾಟ ಮಾಡುವ ಅಂಗಡಿಗಳು ತಾತ್ಕಾಲಿಕವಾಗಿ ಆರಂಭವಾಗಿದ್ದವು, ಕ್ಷಣ ಕಾಲದಲ್ಲಿಯೇ ಅವು ಬಂದ್ ಆದವು. ಬಸ್ ಸಂಚಾರವಿಲ್ಲದೆ ಕೇಂದ್ರ ಬಸ್‌ ನಿಲ್ದಾಣ ಬಿಕೋ ಎನ್ನುತ್ತಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಬೇವಿನಹಳ್ಳಿ, ಮುನಿರಾಬಾದ್, ಹೊಸಳ್ಳಿ ಬಳಿ ಸಾಲುಗಟ್ಟಿ
ನಿಂತಿದ್ದವು.

ನಗರದ ಪ್ರಮುಖ ರಸ್ತೆಗಳಲ್ಲಿ ಜನಸಂಚಾರವಿಲ್ಲದೆ ಭಣಗುಡುತ್ತಿತ್ತು. ಪ್ರಮುಖ ದೇವಸ್ಥಾನಗಳು ಬಂದ್ ಆಗಿದ್ದವು. ರೈಲ್ವೆ ನಿಲ್ದಾಣದಲ್ಲಿ ರೈಲುಗಳು ರದ್ದು ಆಗಿದ್ದರಿಂದ ಬೆರಳಣಿಕೆಯ ಪ್ರಯಾಣಿಕರು ಯಾವ ಕಡೆ ಹೋಗಬೇಕು ಎಂದು ತಿಳಿಯದೇ ನಿಲ್ದಾಣದಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬಂತು. ಆರೋಗ್ಯ ಕಾರ್ಯಕರ್ತರು, ತಪಾಸಣೆ ಕೇಂದ್ರಗಳಲ್ಲಿ ಕೋವಿಡ್‌-19 ವೈರಸ್‌ ಪತ್ತೆ ಹಚ್ಚುವ ಕಾರ್ಯದಲ್ಲಿ ಪರಿಕರಗಳನ್ನು ಹಿಡಿದುಕೊಂಡು ಸಜ್ಜಾಗಿ
ನಿಂತಿದ್ದರು.

ಜನ ರಸ್ತೆಗೆ ಇಳಿಯದೇ ಮನೆಯಲ್ಲಿ ಟಿವಿ ಇತರೆ ಮನರಂಜನೆ ಕಾರ್ಯಕ್ರಮಗಳನ್ನು ನೋಡಿತ್ತಾ ಕಾಲಕಳೆದರು.
ಗ್ರಾಮೀಣ ಭಾಗದ ಜನತೆ ಕೃಷಿ ಕಾಯಕದಲ್ಲಿ ತೊಡಗಿಸಿದ್ದು, ಕಂಡು ಬಂತು. ಉಪಾಹಾರ ಮಂದಿರಗಳು, ಬೀದಿ ಬದಿ ವ್ಯಾಪಾರಸ್ಥರು ಬಂದ್‌ಗೆ ಬೆಂಬಲ ನೀಡಿದ್ದರು.
ಕೊರೊನಾ ಸಾಂಕ್ರಾಮಿಕ ರೋಗ ಭೀತಿಯನ್ನು ದೂರು ಮಾಡುವ ಉದ್ದೇಶದಿಂದ ಪಣತೊಟ್ಟ ಯುವಕರು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದು
ಕಂಡುಬಂತು.

ಕೊರೊನಾ ನಿರ್ಮೂಲನೆಗೆ ಶ್ರಮಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್, ಮಾಧ್ಯಮಮಿತ್ರರಿಗೆ ಪ್ರಧಾನಿ ಅವರ ಮನವಿ ಹಿನ್ನೆಲೆಯಲ್ಲಿ ಚಪ್ಪಾಳೆ, ಗಂಟೆ, ಜಾಗಟೆ, ಹಲಗೆ, ತುತ್ತೂರಿ, ಕೊಳಲು ಊದಿ ಅಭಿನಂದನೆ
ಸಲ್ಲಿಸಿದರು.

ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಜನತೆ ಬೀದಿಗೆ ಇಳಿಯದೆ ಕುಟುಂಬದ ಸದಸ್ಯರ ಜತೆ ಕಾಲ ಕಳೆದರು. ಸಂಜೆಯಾದ ನಂತರ ದೂರ, ದೂರ ತೆರಳುವ ಭಾರಿ ವಾಹನಗಳ ಭರಾಟೆ ಹೆಚ್ಚಾಯಿತು. ಪೆಟ್ರೋಲ್‌ ಬಂಕ್‌ಗಳು ಸಂಜೆಯವರೆಗೆ ಬಂದ್‌ ಆಗಿದ್ದವು. ನಗರದ ಇತಿಹಾಸದಲ್ಲಿ ಇಂತಹ ಬಂದ್ ಇದೇ ಮೊದಲ ಬಾರಿ ಎಂದು ಜನತೆ ಮಾತನಾಡಿಕೊಳ್ಳುತ್ತಿರುವುದು ಕಂಡು ಬಂತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)