ಕೊಪ್ಪಳ: ‘ಮುಂಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು ನಮ್ಮ ಪಕ್ಷಕ್ಕೆ ಅನುಕೂಲವಾಗಲಿದೆ. ಮನಪೂರ್ವಕವಾಗಿ ಮಾಡಿಕೊಂಡ ಮೈತ್ರಿ ಇದಾಗಿದ್ದು ಉತ್ತಮ ಭವಿಷ್ಯವೂ ಇದೆ’ ಎಂದು ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಹಿಂದಿನ ಚುನಾವಣೆಯಲ್ಲಿ ಗೆದ್ದಷ್ಟೇ ಸ್ಥಾನಗಳನ್ನು ಈ ಬಾರಿಯೂ ಗೆಲ್ಲುತ್ತೇವೆ. ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ ಮತ್ತು ರೇವಣ್ಣ ಅವರ ಬಲ ನಮ್ಮ ಪಕ್ಷಕ್ಕೆ ಲಭಿಸಿದೆ. ಒಂದು ಪ್ರಬಲ ರಾಜಕೀಯ ಪಕ್ಷವಾಗಿ ಜೆಡಿಎಸ್ ಜನಮಾನಸದಲ್ಲಿ ಸ್ಥಾನ ಗಳಿಸಿದೆ. ರಾಷ್ಟ್ರೀಯ ವಿಷಯಗಳನ್ನು ಮುಂದಿಟ್ಟುಕೊಂಡು ಎನ್‌ಡಿಎ ಒಕ್ಕೂಟದ ವ್ಯಾಪ್ತಿಗೆ ಬಂದಿದೆ. ಇದರಿಂದ ಕಾಂಗ್ರೆಸ್ ಪಕ್ಷದ ವಿರೋಧಿ ಶಕ್ತಿಯಾಗಿ ಬೆಳೆಯಲು ನಮಗೆ ಸಾಧ್ಯವಾಗುತ್ತದೆ’ ಎಂದರು.
‘ರಾಜಕಾರಣದಲ್ಲಿ ಅನಿವಾರ್ಯ ಮತ್ತು ಅಗತ್ಯತೆ ಎಲ್ಲರಿಗೂ ಇದ್ದೇ ಇರುತ್ತದೆ. ಜೆಡಿಎಸ್ ಅನೇಕ ಸೋಲು, ಗೆಲುವುಗಳನ್ನು ಕಂಡಿದ್ದರೂ ಎಂದಿಗೂ ನಿರ್ಲಕ್ಷ್ಯಿತ ಪಕ್ಷವಲ್ಲ. ಎಂಥದ್ದೇ ಸಮಸ್ಯೆಯಾದರೂ ತನ್ನದೇ ಶಕ್ತಿಯಿಂದ ಎದ್ದು ನಿಂತ ಪಕ್ಷವದು’ ಎಂದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿ ‘ಸುಪ್ರೀಂಕೋರ್ಟ್‌ಗೆ ರಾಜ್ಯದಲ್ಲಿನ ಬರ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಈ ವಿಷಯದಲ್ಲಿ ಅನಗತ್ಯವಾಗಿ ಪ್ರಧಾನಿ ಹೆಸರನ್ನು ಎಳೆದು ತರಲಾಗುತ್ತಿದೆ’ ಎಂದರು.
‘ರಾಜ್ಯದಲ್ಲಿ ಬೇಕಾದರೆ ಪ್ರತಿ ಜಿಲ್ಲೆಗೊಂದು ಉಪಮುಖ್ಯಮಂತ್ರಿಯನ್ನು ಮಾಡಲಿ. ಆದರೆ, ಮೊದಲು ರೈತರಿಗೆ ಬರಗಾಲದಿಂದ ಎದುರಾಗಿರುವ ಸಂಕಷ್ಟವನ್ನು ಪರಿಹರಿಸುವ ಕೆಲಸವಾಗಲಿ’ ಎಂದರು.
’ವಿಧಾನಸಭಾ ಚುನಾವಣೆ ಮುಗಿದು ಸಾಕಷ್ಟು ಸಮಯವಾಗಿದ್ದು ವಿರೋಧ ಪಕ್ಷದ ನಾಯಕನ ಆಯ್ಕೆಯಾಗಬೇಕಿತ್ತು. ಅದು ರಾಜಕೀಯ ಪಕ್ಷದ ಜವಾಬ್ದಾರಿಯೂ ಹೌದು’ ಎನ್ನುವುದನ್ನು ಒಪ್ಪಿಕೊಂಡ ಅವರು ‘ಪಕ್ಷದ ವರಿಷ್ಠರು ಸೂಕ್ತ ಸಮಯದಲ್ಲಿ ಇದರ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ಒಂದು ಹೆಜ್ಜೆ ಹಿಂದೆ ಹೋಗಿದ್ದೇವೆಯೆಂದರೆ ಭವಿಷ್ಯದಲ್ಲಿ ಬಹಳ ವೇಗವಾಗಿ ಮುಂದೆ ಹೋಗುತ್ತೇವೆ ಎಂದರ್ಥ’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.