ಮಂಗಳವಾರ, ನವೆಂಬರ್ 19, 2019
29 °C
ಮುಂಡರಗಿ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಅಭಿಮತ

ಹೊಟ್ಟೆಪಾಡಿನ ಪತ್ರಿಕೋದ್ಯಮ ಬೇಡ: ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ

Published:
Updated:
Prajavani

ಕೊಪ್ಪಳ: ‘ಹೊಟ್ಟೆಪಾಡಿನ ಪತ್ರಿಕೋದ್ಯಮ ಬೇಡ. ಜನರನ್ನು ಬದುಕಿಸುವ ಕ್ರಿಯಾಶೀಲ ಪತ್ರಿಕೆಗಳ ಅವಶ್ಯಕತೆ ಇದೆ’ ಎಂದು ಮುಂಡರಗಿ ತೋಂಟದಾರ್ಯ ಶಾಖಾ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸಲಹೆ ನೀಡಿದರು.

ನಗರದ ಸಾಹಿತ್ಯ ಭವನದಲ್ಲಿ ಸೋಮವಾರ ಕನ್ನಡ ನೆಟ್‌.ಕಾಂ ದಶಮಾನೋತ್ಸವ ಮತ್ತು ಬಹುತ್ವ ಭಾರತ ಮಾಸ ಪತ್ರಿಕೆ ಬಿಡುಗಡೆಗೊಳಿಸಿ ಅವರು ಉಪನ್ಯಾಸ ನೀಡಿದರು.

‘ನೊಂದವನ ನೋವು, ನೋಯದವರೆತ್ತ ಬಲ್ಲವರು. ಬಸವಣ್ಣನನ್ನು, ಬುದ್ಧನನ್ನು ಓಡಿಸಿದ ದೇಶ ಇದು. ಅಂದು ಪತ್ರಿಕಾರಂಗ ಇತ್ತು. ಸಮೂಹ ಸಂವಹನಗಳಿಂದ ಬಸವಣ್ಣನವರ ಕೀರ್ತಿ ಕಾಶ್ಮೀರದವರೆಗೆ ಹಬ್ಬಿದ್ದರಿಂದಲೇ ಮೋಳಿಗೆ ಮಾರಯ್ಯನಂತಹ ಶರಣರು ಕಲ್ಯಾಣಕ್ಕೆ ಬರುವಂತೆ ಆಗಿತ್ತು. ಪ್ರಾಮಾಣಿಕ. ಅಪ್ರಮಾಣಿಕ ವಿಷಯ ಬಿಡಿ, ಸತ್ಯವನ್ನು, ಇದ್ದದ್ದನ್ನು ಇದ್ದ ಹಾಗೆ ಹೇಳುವ ಪತ್ರಿಕೆಗಳ ಅವಶ್ಯಕತೆ ಇದೆ’ ಎಂದು ಹೇಳಿದರು.

'ಸಾಹಿತ್ಯ, ಬರವಣಿಗೆಯ ಎಂದ ರೇನು ಎನ್ನುವ ಅರಿವಿನ ಪ್ರಜ್ಞೆಯನ್ನೇ ಕಳೆದುಕೊಂಡಿದ್ದೇವೆ. ಶಬ್ಧದ ಮೇಲೆ ಜಗತ್ತು ನಿಂತಿದೆ. ಇದು ಜಗತ್ತನ್ನು ಪರಿವರ್ತನೆ ಮಾಡುತ್ತದೆ. ಶಾಂತಿ ಕೊಡುತ್ತದೆ. ನಾನು ದೇಶ, ಧರ್ಮದ ವಿರೋಧಿ ಭಾಷಣಕಾರನಲ್ಲ. ನಾನು ನಾಸ್ತಿಕ ಅಲ್ಲ. ಧರ್ಮ ವಿರೋಧದ ರಾಜಕಾರಣ ಬರಬಾರದು. ದೇಶಕ್ಕೆ ಇಸ್ಲಾಂ, ಕ್ರೈಸ್ತ, ಬುದ್ಧರ ಕೊಡುಗೆ ಹಾಗೂ ಭಾರತೀಯನ ಕೊಡುಗೆಯೂ ಬಹಳಷ್ಟಿದೆ' ಎಂದು ಹೇಳಿದರು.

‘ಬಹುತ್ವವನ್ನು ಹೊತ್ತು ಸಾಗಿದ ಸಾಮರಸ್ಯದ ಹಡಗಿನಲ್ಲಿ ಎಲ್ಲರೂ ಇದ್ದಾರೆ. ಇನ್ನೊಬ್ಬರ ಕೋಣೆಗೆ ತೂತು ಮಾಡಿದರೆ ಹಡುಗು ಮುಳುಗಿ ಹೋಗುತ್ತದೆ. ಆ ಹಡಗನ್ನು ಮುಂದಕ್ಕೆ ಎಳೆದುಕೊಂಡು ಹೋಗುವ ಕೆಲಸವಾಗಬೇಕು. ಇದರ ಚಾಲಕ ರಾಜಕಾರಣಿಯಾಗಬಾರದು. ಬುದ್ಧ, ಬಸವಣ್ಣ, ಅಂಬೇಡ್ಕರ್ ಅದರ ಚಾಲಕರು ಆಗಬೇಕು’ ಎಂದು ಪ್ರತಿಪಾದಿಸಿದರು.

‘ವ್ಯಸನಗಳಿಂದ ಮುಕ್ತವಾಗಬೇಕು. ಸಮಾಜ, ತಂದೆ–ತಾಯಿಗಳನ್ನು ಗೌರವಿಸಬೇಕು. ರೈತ, ನೆಲ, ಉದ್ಯೋಗ, ಕಪ್ಪತಗುಡ್ಡದ ಸೇರಿದಂತೆ ವಿವಿಧ ಸಮಸ್ಯೆಗಳಿವೆ. ಪ್ರಜಾಪ್ರಭುತ್ವದ ಆಶಯವಾದ ಅನ್ನ, ಅರಿವು, ಜೌಷಧ, ಜ್ಞಾನ, ಬಟ್ಟೆ ಇವೆಲ್ಲವೂ ಬೇಕು. ಹಾಗಾಗಿ ಅಭಿವೃದ್ಧಿ ವಿಷಯಗಳ ಮೇಲೆ ಮಾಧ್ಯಮಗಳು ಬೆಳಕು ಚೆಲ್ಲಬೇಕು’ ಎಂದು ಸಲಹೆ ನೀಡಿದರು.

‘ಧರ್ಮ ಎಂದರೆ ಗುಡಿ ಅಲ್ಲ, ಮಸೀದಿ ಅಲ್ಲ, ಪ್ರಾರ್ಥನೆ ಅಲ್ಲ. ಮಾನವೀಯತಯೇ ಧರ್ಮ ಆಗಬೇಕು. ದೇವರನ್ನು ಪ್ರೀತಿಸುವ ಬದಲು ಮನುಷ್ಯ ರನ್ನು ಪ್ರೀತಿ ಮಾಡೋಣ. ಬುದ್ಧಿ, ಮನಸ್ಸು ವಿಕಾಸವಾಗಬೇಕು’ ಎಂದರು.

ಪತ್ರಕರ್ತರಾದ ಅಹಿರಾಜ್‌, ಸಿದ್ದು ಬಿರಾದಾರ್‌, ಹೋರಾಟಗಾರ ರಜಾಕ್‌ ಉಸ್ತಾದ್‌ ಅವರನ್ನು ಸನ್ಮಾನಿಸಲಾಯಿತು.

ಶಿರಾಜ್ ಬಿಸರಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಾಬಕ್ಷಿ ಸ್ವಾಗತಿಸಿದರು. ವೇದಿಕೆ ಮೇಲೆ ಹೋರಾಟಗಾರ ಭಾರಧ್ವಾಜ್, ಚಿಂತಕ ಸಯ್ಯದ್ ಗೌಸ್ ಪಾಶಾ, ಪ್ರಭುಕುಮಾರ ಗಾಳಿ, ರಾಜು ಬಿ.ಆರ್. ಪಾಟೀಲ ಇದ್ದರು.

ಪ್ರತಿಕ್ರಿಯಿಸಿ (+)