ಬುಧವಾರ, ಅಕ್ಟೋಬರ್ 21, 2020
22 °C
ಕಾಂಗ್ರೆಸ್‌ಗೆ ಬಹುಮತದ ಬಲ; ಅಧಿಕಾರ ಹಿಡಿಯಲು ಬಿಜೆಪಿ ಕಸರತ್ತು

ಪ.ಪಂ ಮಾಜಿ ಅಧ್ಯಕ್ಷೆಗೆ ಮತ್ತೆ ಅದೃಷ್ಟ?

ಮೆಹಬೂಬಹುಸೇನ ಕನಕಗಿರಿ Updated:

ಅಕ್ಷರ ಗಾತ್ರ : | |

Prajavani

ಕನಕಗಿರಿ: ಕಳೆದ ಎರಡು ವರ್ಷದ ಹಿಂದೆ ಇಲ್ಲಿನ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದ ಆಕಾಂಕ್ಷಿಗಳು ಈಗ ಮತ್ತೆ ಮುಂಚೂಣಿಗೆ ಬಂದಿದ್ದಾರೆ.

ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ 'ಅ' ಹಾಗೂ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾತಿ ನಿಗದಿ ಮಾಡಲಾಗಿದೆ. ಎರಡು ತಿಂಗಳ ಕಾಲ ಈ ಹಿಂದಿನ ಅವಧಿಯಲ್ಲಿ ಅಧ್ಯಕ್ಷೆಯಾಗಿದ್ದ ಸರಸ್ವತಿ ಸಣ್ಣ ಕನಕಪ್ಪ ಅವರು ಪರಿಶಿಷ್ಟ ಜಾತಿಯಲ್ಲಿ ಬರುವ ಏಕೈಕ ಸದಸ್ಯೆಯಾಗಿರುವ ಕಾರಣ ಅವರು ಅವಿರೋಧ ಆಯ್ಕೆಯಾಗುವ ನಿರೀಕ್ಷೆ ಇದೆ.

ಒಟ್ಟು 17 ಸ್ಥಾನಗಳ ಪೈಕಿ 9 ಜನ ಕಾಂಗ್ರೆಸ್, 5 ಜನ ಬಿಜೆಪಿ ಹಾಗೂ 3 ಪಕ್ಷೇತರ ಸದಸ್ಯರಿದ್ದಾರೆ. ಬಿಜೆಪಿಯಲ್ಲಿ ಗಾಣಿಗ ಸಮುದಾಯಕ್ಕೆ ಸೇರಿದ ರವೀಂದ್ರ ಸಜ್ಜನ್ ಬಿಟ್ಟರೆ ಉಳಿದವರು ಅಧ್ಯಕ್ಷ ಹುದ್ದೆಯ ಮೀಸಲಾತಿಯಲ್ಲಿ ಬರುವುದಿಲ್ಲ. ಕಾಂಗ್ರೆಸ್‌ನ ಶರಣಬಸಪ್ಪ ಭತ್ತದ, ಮಂಜುನಾಥ ಗಡಾದ, ತಿಪ್ಪಣ್ಣ ನಾಯಕ ಹೊರತುಪಡಿಸಿದರೆ ಆರು ಮಂದಿ ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರು ಬಿಸಿಎ ಮೀಸಲಾತಿಯಲ್ಲಿ ಬರುತ್ತಾರೆ.

ಈ ಹಿಂದೆ ಮೀಸಲಾತಿ ಪ್ರಕಟವಾದಾಗ ಮಾಜಿ ಶಾಸಕ ಶಿವರಾಜ ತಂಗಡಗಿ ಅವರ ನಿವಾಸದಲ್ಲಿ ನಡೆದ ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರ ಸಭೆಯಲ್ಲಿ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತ ಸಮುದಾಯಕ್ಕೆ ಬಿಟ್ಟು ಕೊಡಬೇಕು ಎಂಬ ನಿರ್ಣಯಕ್ಕೆ ಅನ್ಯ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ಸದಸ್ಯರು ಸಹ ಒಪ್ಪಿಗೆ ಸೂಚಿಸಿದ್ದರು.

ಪಕ್ಷೇತರ ಸದಸ್ಯರಾಗಿ ಆಯ್ಕೆಯಾಗಿರುವ ಮೂವರು ಸದಸ್ಯರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದು ಪಕ್ಷೇತರರ ಬೆಂಬಲ ಪಡೆದು ಕಾಂಗ್ರೆಸ್ 2016ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಬದಲಾದ ರಾಜಕೀಯದಲ್ಲಿ ಪಕ್ಷೇತರರು ಹಾಗೂ ಕೆಲ ಕಾಂಗ್ರೆಸ್ ಸದಸ್ಯರ ಒಲವು ಭಿನ್ನ ಹಾದಿಯಲ್ಲಿದ್ದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ತೊಡಕು ಆಗಲಿದೆ ಎಂಬ ಮಾತುಗಳು ಕೇಳಿಬಂದಿವೆ.

ಮೂವರು ಪಕ್ಷೇತರ ಹಾಗೂ ಇಬ್ಬರು ಕಾಂಗ್ರೆಸ್ ಸದಸ್ಯರು ಸೇರಿ ಒಟ್ಟು ಐದು ಮಂದಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಮಂದಿ ಒಗ್ಗಟು ಪ್ರದರ್ಶನ ಮಾಡಿದರೆ ಮಾತ್ರ ಕಾಂಗ್ರೆಸ್‌ಗೆ ಅಧಿಕಾರ ಗಿಟ್ಟಿಸಿಕೊಳ್ಳಲು ಸಾಧ್ಯವಿದೆ.

ಐದು ಜನ ಬಿಜೆಪಿ, ಇಬ್ಬರು ಪಕ್ಷೇತರ, ಸಂಸದ ಕರಡಿ ಸಂಗಣ್ಣ, ಶಾಸಕ ಬಸವರಾಜ ದಢೇಸೂಗೂರು ಹಾಗೂ ಕಾಂಗ್ರೆಸ್ ದೂರವಾಗಿರುವ ಸದಸ್ಯ ರವಿ ಭಜಂತ್ರಿ ಅವರ ಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ.

‘ಪಕ್ಷೇತರ ಸದಸ್ಯರು ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಒಪ್ಪದಿದ್ದರೆ ಪಕ್ಷೇತರ ಸದಸ್ಯ ಹುಸೇನಸಾಬ್ ಅವರನ್ನು ಬೆಂಬಲಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಅವರಿಗೆ ಮುಖಭಂಗ ಮಾಡುವ ಯೋಚನೆ ಬಿಜೆಪಿ ವಲಯದಲ್ಲಿದೆ’ ಎಂಬ ಮಾತು ಕೇಳಿಬಂದಿದೆ.

ಈ ಹಿಂದೆ ಮಾತು ಕೊಟ್ಟಂತೆ ಕಾಂಗ್ರೆಸ್ ಸದಸ್ಯರು ನಡೆದುಕೊಳ್ಳದಿದ್ದರೆ ಬಿಜೆಪಿಯ ರವೀಂದ್ರ ಸಜ್ಜನ್ ಅವರ ಆಯ್ಕೆ ಸರಳ ಆಗಲಿದೆ. ಚುನಾವಣೆಯ ದಿನ ಇನ್ನೂ ಪ್ರಕಟ ಆಗದಿದ್ದರೂ ಎರಡೂ ಪಕ್ಷಗಳಲ್ಲಿ ಅಧ್ಯಕ್ಷ
ಸ್ಥಾನದ ಕುರಿತು ಚರ್ಚೆಗಳು ಜೋರಾಗಿ ನಡೆದಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.