ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಮೈದುಂಬಿ ಹರಿಯುವ ಕಪ್ಪಲೆಪ್ಪ ಜಲಪಾತ

Last Updated 25 ಜುಲೈ 2020, 19:30 IST
ಅಕ್ಷರ ಗಾತ್ರ

ಹನುಮಸಾಗರ: ಹದಿನೈದು ದಿನಗಳ ಹಿಂದೆ ಬಾಡಿ ನಿಂತಿದ್ದ ಸಮೀಪದ ಕಬ್ಬರಗಿ ಬಳಿ ಇರುವ ಕಪ್ಪಲೆಪ್ಪ ಜಲಪಾತ ಶುಕ್ರವಾರ ರಾತ್ರಿ ಸುರಿದ ಪುಷ್ಯ ಮಳೆಗೆ ಜೀವಕಳೆ ಬಂದಿದ್ದು ಸದ್ಯ ಭೋರ್ಗರೆಯುತ್ತಿದೆ.

ಕಪ್ಪಲೆಪ್ಪ, ಕಪೀಲತೀರ್ಥ, ಕಬ್ಬರಗಿ ದಿಡಗ ಎಂದೆಲ್ಲ ಕರೆಯುವ ಈ ಬಿಸಿಲ ನಾಡಿನ ಜಲಪಾತ ಈ ಭಾಗದಲ್ಲಿ ಏಕೈಕ ಜಲಪಾತವಾಗಿರುವುದರಿಂದ ನೀರು ಬೀಳುತ್ತಿರುವುದನ್ನು ಕೇಳಿದ ಸುತ್ತಲಿನ ಜನರು ಇತ್ತ ದೌಡಾಯಿಸುವುದು ಸಹಜ.

ಬಹುತೇಕ ಜಲಪಾತಗಳನ್ನು ದೂರದಿಂದಲೇ ನಿಂತು ನೋಡಿ ಆನಂದಿಸಬಹುದು. ಆದರೆ ಇಲ್ಲಿ ಜಲಧಾರೆಯ ಅಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಾಸುಬಂಡೆ ಇರುವುದರಿಂದ ಜಲಪಾತಕ್ಕೆ ಮೈಯೊಡ್ಡಿ ಮೈ-ಮನ ಹಗುರ ಮಾಡಿಕೊಳ್ಳಲು ಯಾವುದೇ ಅಪಾಯವಿಲ್ಲ.

ಸುಮಾರು 25 ಅಡಿ ಎತ್ತರದಿಂದ ಬೀಳುವ ನೀರು ನೋಡಲು ಮನೋಹರವಾಗಿ ಕಾಣುತ್ತದೆ. ಬಂಡೆಗೆ ಅಪ್ಪಳಿಸಿದ ನೀರು ಹನಿ-ಹನಿಯಾಗಿ ಮೇಲಕ್ಕೆ ಚಿಮ್ಮುವ ದೃಶ್ಯ ಆಕರ್ಷಕವಾಗಿರುತ್ತದೆ. ಬೆಳಗಿನ ಮಂಜು ಮುಸುಕಿದ ವಾತಾವರಣದಲ್ಲಿ ಜಲಪಾತದ ಸುತ್ತ ಮಂಜಿನ ಹನಿಗಳ ಸಂಗಮವೇ ಮೇಳೈಸಿರುತ್ತದೆ.

ಜಲಪಾತದ ನೀರು ಮುಂದೆ ಹರಿದು ಹೋಗಿ ದೊಡ್ಡಕರೆಯನ್ನು ಸೇರುತ್ತದೆ. ಈ ಕೆರೆ ತುಂಬಿದರೆ ಸುತ್ತಲಿನ ಕೊಳವೆಬಾವಿಗಳಿಗೆ ವರ್ಷಪೂರ್ತಿ ನೀರಿನ ಆಶ್ರಯ ದೊರತಂತಾಗುತ್ತದೆ.

ಮಳೆಗಾಲದಲ್ಲಿ ಜಿಲ್ಲೆಯ ಮುಖ್ಯ ಪ್ರವಾಸಿ ತಾಣವಾಗುವ ಎಲ್ಲ ಅರ್ಹತೆ ಪಡೆದಿರುವ ಈ ಜಲಪಾತಕ್ಕೆ ಇಲ್ಲಿಯವರೆಗೆ ರಸ್ತೆಯದ್ದೆ ದೊಡ್ಡ ತೊಂದರೆ ಇತ್ತು. ಕಬ್ಬರಗಿ ಗ್ರಾಮದಿಂದ ಸುಮಾರು ನಾಲ್ಕು ಕಿ.ಮೀ ನಡೆದುಕೊಂಡೇ ಹೋಗಬೇಕಾಗಿತ್ತು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ಬೆಟ್ಟದವರೆಗೆ ಮಾತ್ರ ಸಿ.ಸಿ ರಸ್ತೆ ಮಾಡಿದ್ದರೆ, ಅರಣ್ಯ ಇಲಾಖೆಯ ಅನುಮತಿ ದೊರೆಯದ ಬೆಟ್ಟದಿಂದ ಜಲಪಾತದವರೆಗೂ ಕಚ್ಚಾ ರಸ್ತೆ ಇದ್ದು ಜಾಗೃತಿಯಿಂದ ವಾಹನ ಚಲಾಯಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ.

‘ಒಂದು ಬಾರಿ ಈ ಜಲಪಾತಕ್ಕೆ ಮೈಯೊಡ್ಡಿ ಜಳಕ ಮಾಡಿದರೆ ಸಾಕು ಮೈಮನವೆಲ್ಲಾ ಹಿತವಾಗುತ್ತದೆ. ಸುತ್ತಲಿನ ನಾಲ್ಕಾರು ಜಿಲ್ಲೆಗಳಲ್ಲಿ ಇದು ಒಂದೇ ಜಲಪಾತವಾಗಿರುವುದು ನಮಗೆ ಹಮ್ಮೆಯ ವಿಷಯ' ಎಂದು ಶಂಕರ ಪಾಟೀಲ, ಅಶೋಕ ಪಾಟೀಲ ಹೇಳುತ್ತಾರೆ.

ಸದ್ಯ ಭೊರ್ಗರೆಯುವ ಜಲಪಾತ ವಾರದವರೆಗೂ ಮುಂದುವರೆಯುತ್ತದೆ, ಮಳೆ ನಿರಂತರವಾದರೆ ತಿಂಗಳದವರೆಗೂ ಜಲಪಾತದ ಸವಿ ಸವಿಯಬಹುದಾಗಿದೆ.

ಹೇಗೆ ಬರಬೇಕು: ಗದಗನಿಂದ ಗಜೇಂದ್ರಗಡ ಮಾರ್ಗವಾಗಿ ಬಂದರೆ 32 ಕಿ.ಮೀ. ಕುಷ್ಟಗಿಯಿಂದ 30 ಕಿ.ಮೀ, ಬಾಗಲಕೋಟ ಜಿಲ್ಲೆ ಇಳಕಲ್ಲನಿಂದ ಬಂದರೆ 18 ಕಿ.ಮೀ ದೂರವಾಗುತ್ತದೆ. ಹೀಗೆ ಬರುವವರು ಹನುಮಸಾಗರ ಮಾರ್ಗವಾಗಿಯೇ ಜಲಪಾತಕ್ಕೆ ಹೋಗಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT