ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಕ್ಷೇತ್ರ: ಹಿಟ್ನಾಳ್‌ಗೆ ಹ್ಯಾಟ್ರಿಕ್‌ ಆಸೆ, ಬಿಜೆಪಿಗೆ ಅಭ್ಯರ್ಥಿ ಚಿಂತೆ

ಘೋಷಣೆಯಾಗದ ಜೆಡಿಎಸ್‌ ಅಭ್ಯರ್ಥಿ
Last Updated 3 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಕೊಪ್ಪಳ: ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು ಕೊಪ್ಪಳ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಲು ಹಾಲಿ ಶಾಸಕ ಕಾಂಗ್ರೆಸ್‌ನ ರಾಘವೇಂದ್ರ ಹಿಟ್ನಾಳ ತಯಾರಿ ನಡೆಸಿದ್ದರೆ, ಅಭ್ಯರ್ಥಿಯಾಗಿ ಯಾರನ್ನು ಕಣಕ್ಕಿಳಿಸಬೇಕು ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿ ತೊಡಗಿದೆ.

ಕಾಂಗ್ರೆಸ್‌ನಿಂದ ರಾಘವೇಂದ್ರ ಹಿಟ್ನಾಳ ಮಾತ್ರ ಅರ್ಜಿ ಸಲ್ಲಿಸಿರುವ ಕಾರಣ ಅವರು ಸತತ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗುವುದಂತೂ ನಿಶ್ಚಿತ. ಸಂಸದ ಸಂಗಣ್ಣ ಕರಡಿ ರಾಜ್ಯ ರಾಜಕಾರಣಕ್ಕೆ ಮರಳಿ ಬರುವ ಲೆಕ್ಕಾಚಾರದಲ್ಲಿದ್ದಾರೆ ಎನ್ನುವ ಚರ್ಚೆ ಗುಟ್ಟಾಗಿ ಉಳಿದಿಲ್ಲ. ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ್‌ ಕೂಡ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಈಗಾಗಲೇ ಕೊಪ್ಪಳ ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿ ಪಕ್ಷದ ಪರ ಪ್ರಚಾರ ಶುರು ಮಾಡಿದ್ದಾರೆ. 2018ರ ಚುನಾವಣೆಯಲ್ಲಿ ಚಂದ್ರಶೇಖರ್‌ ಅವರಿಗೆ ಟಿಕೆಟ್‌ ಎಂದು ಘೋಷಿಸಿ ಅಂತಿಮವಾಗಿ ಸಂಗಣ್ಣ ಕರಡಿ ಪುತ್ರ ಅಮರೇಶ ಕರಡಿಗೆ ಬಿ ಫಾರ್ಮ್‌ ನೀಡಲಾಗಿತ್ತು. ಈ ಟಿಕೆಟ್‌ ಗೊಂದಲ ಬಿಜೆಪಿಗೆ ಮುಳುವಾಗಿ ಕಾಂಗ್ರೆಸ್‌ಗೆ ಲಾಭ ತಂದುಕೊಟ್ಟಿತ್ತು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಗುತ್ತಿಗೆದಾರ ಸುರೇಶ ಭೂಮರಡ್ಡಿ ಪಕ್ಷದಿಂದ ದೂರ ಉಳಿದಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿಯಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಯಾವ ಪಕ್ಷದಿಂದ ಎನ್ನುವ ಗುಟ್ಟು ಮಾತ್ರ ರಟ್ಟು ಮಾಡಿಲ್ಲ. ಚಂದ್ರಶೇಖರ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದರೆ ತಮ್ಮ ಬೀಗರಿಗೆ ಹೆಗಲಾಗಿ ಕೆಲಸ ಮಾಡುವ ಲೆಕ್ಕಾಚಾರವನ್ನೂ ಭೂಮರಡ್ಡಿ ಹೊಂದಿದ್ದಾರೆ ಎನ್ನುತ್ತವೆ ಮೂಲಗಳು. ಒಂದು ವೇಳೆ ಟಿಕೆಟ್ ನೀಡದಿದ್ದರೆ ಭೂಮರಡ್ಡಿಯೇ ಬೇರೆ ಪಕ್ಷದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಚರ್ಚೆಯೂ ಜೋರಾಗಿದೆ. ಆದ್ದರಿಂದ ಕೊಪ್ಪಳ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ದಟ್ಟವಾಗಿದೆ.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ ಮಹಾಂತಯ್ಯನಮಠ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ತೊರೆದು ಇತ್ತೀಚೆಗಷ್ಟೇ ಜೆಡಿಎಸ್‌ ಸೇರಿರುವ ಉದ್ಯಮಿ ಸಾಧಿಕ್‌ ಅತ್ತಾರ್‌ ಟಿಕೆಟ್‌ ಗಿಟ್ಟಿಸಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿ ಜೆಡಿಎಸ್‌ ಟಿಕೆಟ್‌ ಯಾರಿಗೆ ಎನ್ನುವುದು ಕೂಡ ನಿಶ್ಚಿತವಾಗಿಲ್ಲ.

ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದ ಮತ ವಿಭಜನೆಯ ’ಆಟ’ವಾಡಲು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಜನಾರ್ದನ ರೆಡ್ಡಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಅತೃಪ್ತ ಮತ್ತು ಟಿಕೆಟ್ ಆಕಾಂಕ್ಷಿಗಳನ್ನು ಹೊಸಪಕ್ಷಕ್ಕೆ ಸೆಳೆದು ಕೊಪ್ಪಳದಿಂದ ಸ್ಪರ್ಧೆಗೆ ಅಣಿ ಮಾಡುತ್ತಿದ್ದಾರೆ. ವಿಧಾನಪರಿಷತ್‌ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಇವರಲ್ಲಿ ಪ್ರಮುಖರು. ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ ಸೇರಿದಂತೆ ಹಲವರು ಟಿಕೆಟ್‌ ನೀಡುವಂತೆ ಮನವಿ ಮಾಡಿದ್ದಾರೆ.

ಪಂಗಡ ಹಾಗೂ ಒಳಪಂಗಡ ಸೇರಿದಂತೆ ಲಿಂಗಾಯತ ಸಮುದಾಯದ ಜನ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕುರುಬರು ಹಾಗೂ ಮುಸ್ಲಿಮರು ನಂತರದ ಸ್ಥಾನದಲ್ಲಿದ್ದಾರೆ. ಇವರೇ ನಿರ್ಣಾಯಕರು ಹೌದು. ಹೀಗಾಗಿ ಎಲ್ಲಾ ಸಮುದಾಯಗಳ ಜನರನ್ನು ಓಲೈಸಿ ‘ಮತಬುಟ್ಟಿ’ ಗಟ್ಟಿಮಾಡಿಕೊಳ್ಳಲು ಎಲ್ಲಾ ಪಕ್ಷಗಳು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿವೆ. ಒಂದೇ ಸಮುದಾಯದ ಹಲವು ಸ್ಪರ್ಧಿಗಳು ಕಣಕ್ಕಿಳಿದರೆ ಮತವಿಭಜನೆಯ ಆತಂಕ ಕೂಡ ತಪ್ಪಿದ್ದಲ್ಲ.

ಹಿಂದಿನ ಚುನಾವಣೆ ನೋಟ
ಕೊಪ್ಪಳ ಕ್ಷೇತ್ರ 1957ರಿಂದ 1983ರ ಚುನಾವಣೆ ತನಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹಿಡಿತದಲ್ಲಿತ್ತು. ಬದಲಾದ ರಾಜಕೀಯ ಏರುಪೇರಿನಲ್ಲಿ 1985ರಲ್ಲಿ ಜನತಾ ಪಕ್ಷದಿಂದ ಅಗಡಿ ವಿರೂಪಾಕ್ಷಕ್ಕೆ ಗೆಲುವು ಸಾಧಿಸಿ ಕಾಂಗ್ರೆಸ್‌ ಜಯದ ಓಟಕ್ಕೆ ಲಗಾಮು ಹಾಕಿದ್ದರು.

1989ರಲ್ಲಿ ಪಕ್ಷೇತರರಾಗಿ ಮಲ್ಲಿಕಾರ್ಜುನ ದಿವಟರ ಗೆಲುವು ಪಡೆದಿದ್ದರು. 1994ರಲ್ಲಿ ಪಕ್ಷೇತರರಾಗಿ ಮತ್ತು 1999ರಲ್ಲಿ ಜೆಡಿಯುನಿಂದ ಸಂಗಣ್ಣ ಕರಡಿ ನಡೆಸಿದ್ದ ಗೆಲುವಿನ ನಾಗಾಲೋಟಕ್ಕೆ 2004ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ. ಬಸವರಾಜ ಹಿಟ್ನಾಳ ತಡೆಯೊಡ್ಡಿದರು. 2008ರಲ್ಲಿ ಸಂಗಣ್ಣ ಕರಡಿ ಜನತಾದಳದಿಂದ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದು 2011ರಲ್ಲಿ ಬಿಜೆಪಿಯಿಂದ ಮರು ಆಯ್ಕೆಯಾದರು. 2013ರ ಚುನಾವಣೆಯಲ್ಲಿ ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ ದಾಖಲೆಯ 26,788 ಮತಗಳ ಅಂತರದ ಗೆಲುವು ಪಡೆದು ಕಾಂಗ್ರೆಸ್‌ ಕೋಟೆ ಭದ್ರಗೊಳಿಸಲು ಕಾರಣರಾದರು. ರಾಘವೇಂದ್ರ ಹಿಂದಿನ ಚುನಾವಣೆಯಲ್ಲಿ ಪಡೆದ 98,783 ಮತಗಳೇ ಕೊಪ್ಪಳ ಕ್ಷೇತ್ರದಲ್ಲಿ ಶಾಸಕರೊಬ್ಬರು ಗಳಿಸಿದ ಅತ್ಯಧಿಕ ಮತಗಳು ಎನಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT