ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ ವಿಧಾನಸಭಾ ಕ್ಷೇತ್ರ: ಬೆಟ್ಟದಷ್ಟು ಭರವಸೆ- ಇನ್ನೂ ಇದೆ ನಿರೀಕ್ಷೆ

ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮುಂದುವರಿದ ಕಾಮಗಾರಿಗಳೇ ಹೆಚ್ಚು; ಬೇಕಿದೆ ಇನ್ನಷ್ಟು ಸೌಕರ್ಯ
Last Updated 1 ಮಾರ್ಚ್ 2023, 5:27 IST
ಅಕ್ಷರ ಗಾತ್ರ

ಗಂಗಾವತಿ: ‘ಐದು ವರ್ಷಗಳ ಅವಧಿಯಲ್ಲಿ ಶಾಸಕ ಪರಣ್ಣ ಮನವಳ್ಳಿ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಭರವಸೆಗಳು ಬೆಟ್ಟದಷ್ಟು. ಆದರೆ, ಅವುಗಳಲ್ಲಿ ಈಡೇರಿದ್ದು ಜನರ ನಿರೀಕ್ಷೆಗಿಂತಲೂ ಕಡಿಮೆ’ ಎನ್ನುವುದು ಕ್ಷೇತ್ರದ ಮತದಾರರ ಅಭಿಪ್ರಾಯ.

‘ರಾಜ್ಯದ ಭತ್ತದ ಕಣಜ ಎನಿಸಿರುವ ಗಂಗಾವತಿ ಹಾಗೂ ಈ ವಿಧಾನಸಭಾ ಕ್ಷೇತ್ರ ವ್ಯಾಪಕವಾಗಿ ಬೆಳೆಯುತ್ತಿದೆ. ಸ್ವಚ್ಛತೆ ಮರೀಚಿಕೆ ಆಗಿದೆ. ಎಲ್ಲೆಂದರಲ್ಲೆ ಕಸ ಬಿಸಾಡುವುದು ಸಾಮಾನ್ಯವಾಗಿದೆ. ಕೊಳೆಗೇರಿ ಬಡಾವಣೆಗಳಲ್ಲಿ ಸೌಲಭ್ಯಗಳಿಲ್ಲ. ಈಚೆಗೆ ಕೊಳಗೇರಿ ಮಂಡಳಿಯಡಿ ಕೆಲ ನಿವೇಶನ ಮಂಜೂರಾತಿ ಪತ್ರ ನೀಡಿದ್ದು ಮಾತ್ರ ಅಲ್ಲಿನ ಕೆಲ ಜನರಿಗೆ ಸಮಾಧಾನ ತಂದಿದೆ.

ಚರಂಡಿ ಸ್ವಚ್ಛತೆ, ಕಸ ವಿಲೇವಾರಿ, ಯುಜಿಡಿ ಕಾಮಗಾರಿ ನಡೆಯದ ಕಾರಣ ಚರಂಡಿ ನೀರು ರಸ್ತೆಗೆ ಹರಿದು ದುರ್ನಾತ ಬೀರುತ್ತಿದೆ. ಸೂಕ್ತ ಕುಡಿಯುವ ನೀರಿನ ಪೂರೈಕೆಯಿಲ್ಲ. ಅಮೃತ ಯೋಜನೆಯಡಿ ಸುಂದರ ನಗರ ಕಟ್ಟುವ ಭರವಸೆ, ಮರಳಿ ಚುನಾವಣೆ ಬಂದರೂ ಈಡೇರಿಲ್ಲ. ಕೊಳೆಗೇರಿ ಮತ್ತು ವಾಜಪೇಯಿ ವಸತಿ ಯೋಜನೆಯಡಿ ನಗರ ಮತ್ತು ಗ್ರಾಮೀಣ ಭಾಗದವರಿಗೆ 1500 ನಿವೇಶನ ಮಂಜೂರಾಗಿದ್ದರೂ ಶೇ 30ರಷ್ಟು ಫಲಾನುಭವಿಗಳಿಗೆ ಮಾತ್ರ ನಿವೇಶನ ಪತ್ರ ನೀಡಲು ಸಾಧ್ಯವಾಗಿದೆ. ಕೊಳೆಗೇರಿ ಪ್ರದೇಶದಲ್ಲಿ ಮಹಿಳೆಯರಿಗೆ ಸಾರ್ವಜನಿಕ, ವೈಯಕ್ತಿಕ ಶೌಚಾಲಯಗಳ ಕೊರತೆ ಇನ್ನೂ
ನೀಗಿಲ್ಲ.

ವಿರೂಪಾಪುರ ಗಡ್ಡೆ ರೆಸಾರ್ಟ್‌ ತೆರವು ವೇಳೆ ಸೂರು ಕಳೆದುಕೊಂಡು ಎಂಟು ವರ್ಷಗಳಾಗಿವೆ. ಈವರೆಗೆ 74 ಕುಟುಂಬಗಳಿಗೆ ಸೂರು ಕಲ್ಪಿಸಿಲ್ಲ. ಭಟ್ಟರನರಸಾಪುರ ಭಾಗದ ಗ್ರಾಮಗಳಿಗೆ ಡಾಂಬರು ರಸ್ತೆ ಕಲ್ಪಿಸದ ಕಾರಣ ಜನರು ಜೀವ ಅಂಗೈಯಲ್ಲಿಡಿದು ತೆಗ್ಗು ದಿನ್ನೆ ರಸ್ತೆಗಳಲ್ಲಿ ಸಂಚಾರ
ಮಾಡುತ್ತಿದ್ದಾರೆ.

ಕ್ಷೇತ್ರದ ಅಭಿವೃದ್ಧಿಗೆ ₹185 ಕೋಟಿ ಮೀಸಲಿಟ್ಟು ಕೆಲಸ ಮಾಡಲಾಗಿದೆ. ಹಲವು ಗ್ರಾಮಗಳಲ್ಲಿ ಚರಂಡಿ, ಸಿಸಿ ರಸ್ತೆ ಕಾಮಗಾರಿ, ಶಾಲಾ ಕೊಠಡಿ, ಶೌಚಾಲಯ, ನೀರಿನ ಪೈಪ್ ಲೈನ್ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎನ್ನುವ ಆರೋಪವಿದೆ.

ಹಿಂದಿನ ಐದು ವರ್ಷಗಳ ಅವಧಿಯಲ್ಲಿ ₹35 ಕೋಟಿಯಲ್ಲಿ ಗಂಗಾವತಿಗೆ ಕೃಷಿ ಕಾಲೇಜು, ತಾಂತ್ರಿಕ ಕಾಲೇಜು ಮಂಜೂರು ಮಾಡಿಸಿದ್ದು ಶಾಸಕರ ಹೆಗ್ಗಳಿಕೆ. ತಾಂತ್ರಿಕ ಕಾಲೇಜಿಗೆ ಅಗತ್ಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ವಸತಿ ನಿಲಯ ಸಮಸ್ಯೆ ಇದೆ. ಕೇಂದ್ರೀಯ ವಿದ್ಯಾಲಯ ನಿರ್ಮಿಸಲಾಗಿದ್ದು, ಈವರೆಗೆ ಉದ್ಘಾಟನೆಯಾಗಿಲ್ಲ. ಕ್ಷೇತ್ರದಲ್ಲಿ ಮಹಿಳಾ ಪದವಿ ಕಾಲೇಜು, ನೂತನ ವಸತಿ ನಿಲಯಗಳ ನಿರ್ಮಾಣಕ್ಕೆ ವಿದ್ಯಾರ್ಥಿಗಳಿಗೆ ಬೇಡಿಕೆಗಳಿದ್ದರೂ ಅದಕ್ಕೆ ಮನ್ನಣೆ ಸಿಕ್ಕಿಲ್ಲ.

ನೀರಾವರಿ ಕ್ಷೇತ್ರ: ವಿಜಯನಗರ ಕಾಲುವೆ ಆಧುನೀಕರಣ ಕಾಮಗಾರಿಗೆ ₹536 ಕೋಟಿ ಮೀಸಲಿಡಲಾಗಿದ್ದರೂ, ಅವೈಜ್ಞಾನಿಕ ಮತ್ತು ಸಂಪೂರ್ಣ ಕಾಮಗಾರಿಯೇ ಕಳಪೆಯಾಗಿದೆ ಎನ್ನುವುದು ಇಲ್ಲಿನ ರೈತರ ಆಕ್ರೋಶ. ಮುಕ್ಕುಂಪಿ, ಇರಕಲ್‌ಗಡ ಭಾಗದ ಕೆರೆ ತುಂಬಿಸುವ ಯೋಜನೆ, ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ.

ಆರೋಗ್ಯ ಕ್ಷೇತ್ರದಲ್ಲಿ ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಹೆಚ್ಚಿನ ಆದ್ಯತೆ, ಅನುದಾನ, ಸಲಕರಣೆ ಕೊಡಲಾಗಿದೆ. ಆನೆಗೊಂದಿ, ವೆಂಕಟಗಿರಿ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರ, ಕಿರಿಯ ಪ್ರಾಥಮಿಕ ಕೇಂದ್ರಗಳ ಅಭಿವೃದ್ಧಿಗೆ ಒಲವು ತೋರಿಲ್ಲ. ಇಲ್ಲಿ ಸಿಬ್ಬಂದಿ ಕೊರತೆಯಿಂದ ಬಡಜನರು ಚಿಕಿತ್ಸೆಗಾಗಿ ತಾಲ್ಲೂಕು ಕೇಂದ್ರವನ್ನೇ ಅಲವಂಬಿಸಬೇಕಾಗಿದೆ.

ಗಂಗಾವತಿಯಲ್ಲಿ ಪ್ರತಿಭಾವಂತ ಕ್ರೀಡಾಪಟುಗಳು ಇದ್ದು, ವೃತ್ತಿಪರ ತರಬೇತಿಗೆ ಅಗತ್ಯವಿರುವ ಮೈದಾನ, ಸಿಂಥೆಟಿಕ್‌ ಟ್ರ್ಯಾಕ್‌ ಇಲ್ಲ. ಹೀಗಾಗಿ ಇಲ್ಲಿನ ಕ್ರೀಡಾಪಟುಗಳು ರಾಜಧಾನಿಗೆ ಎಡತಾಕುವುದು ತಪ್ಪಿಲ್ಲ. ₹90 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಿದ್ದರೂ ಈವರೆಗೆ ಬಳಕೆಗೆ ಲಭ್ಯವಾಗಿಲ್ಲ. ಈಜುಕೊಳ ಮತ್ತು ಕೊಠಡಿಗಳು ಪಾಳುಬಿದ್ದಿದೆ.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಕಾರಣ ಮಹಿಳಾ ಪದವಿ ಕಾಲೇಜು, ಪರಿಶಿಷ್ಟ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳು,
ಗಂಗಾವತಿ ನಗರದಲ್ಲಿ ಬೈಪಾಸ್ ರಸ್ತೆ, ಗ್ರಾಮೀಣ ಭಾಗಗಳಿಗೆ ಡಾಂಬರು ರಸ್ತೆ, ರಸ್ತೆಗಳ ಅಭಿವೃದ್ಧಿ, ಉದ್ಯಾನಗಳ ಅಭಿವೃದ್ಧಿಗೆ, 24X7 ಕುಡಿಯುವ ನೀರಿನ ವ್ಯವಸ್ಥೆ, ಫುಟ್‌ಪಾತ್ ತೆರವು, ಗ್ರಾಮೀಣ ಭಾಗಕ್ಕೆ ಬಸ್ ಸೌಕರ್ಯ, ಕ್ಷೇತ್ರ ವ್ಯಾಪ್ತಿಯ ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಆದ್ಯತೆ ನೀಡಬೇಕಾಗಿತ್ತು. ಮೂಲ ಸೌಕರ್ಯ ಕಲ್ಪಿಸುವುದೇ ಆದ್ಯತೆಯಾಗಬೇಕಿತ್ತು ಎನ್ನುತ್ತಾರೆ ಕ್ಷೇತ್ರದ ಮತದಾರರು.

ಅಂಜನಾದ್ರಿ ಅಭಿವೃದ್ಧಿಯ ಸವಾಲು

ದೇಶದ ಗಮನ ಸೆಳೆದಿರುವ ಮತ್ತು ರಾಜಕೀಯದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಹನುಮ ಜನಿಸಿದ ನಾಡು ಅಂಜನಾದ್ರಿ ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಈ ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ₹100 ಕೋಟಿ ಘೋಷಿಸಿದೆ. ಆದರೆ, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಲಭಿಸಿಲ್ಲ. ಚುನಾವಣೆ ಸಮೀಪಿಸಿದ್ದು, ಎಲ್ಲಾ ಪಕ್ಷಗಳ ಕಣ್ಣು ಅಂಜನಾದ್ರಿ ಮೇಲಿದೆ. ಅಭಿವೃದ್ಧಿ ಕುರಿತು ಪಕ್ಷಗಳು ವಿವಿಧ ಪರಿಕಲ್ಪನೆ ಹೊಂದಿವೆ. ಅಂಜನಾದ್ರಿಯ ಸಮಗ್ರ ಅಭಿವೃದ್ಧಿಯೆ ಸವಾಲು ಆಗಿದೆ.

ಗಂಗಾವತಿ ಕ್ಷೇತ್ರದ ಅಭಿವೃದ್ಧಿಗೆ 5 ವರ್ಷದಲ್ಲಿ ₹1,300 ಕೋಟಿಗೂ ಹೆಚ್ಚಿನ ಅನುದಾನ ತಂದು ಶಿಕ್ಷಣ, ಆರೋಗ್ಯ, ನೀರಾವರಿ ಸೇರಿದಂತೆ ಹಲವು ಮೂಲಸೌಕರ್ಯಗಳನ್ನು ಕಲ್ಪಿಸಲು ಆದ್ಯತೆ ಕೊಟ್ಟಿದ್ದೇನೆ. ಜನತೆಗೆ ಆಶ್ರಯ ನಿವೇಶನ, ರಸ್ತೆ, ಚರಂಡಿ, ಅಭಿವೃದ್ಧಿ ಕಾರ್ಯ ಮಾಡಿದ್ದೇನೆ

–ಪರಣ್ಣ ಮುನವಳ್ಳಿ, ಶಾಸಕ

ಗಂಗಾವತಿ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ಬಿಜೆಪಿ ಸರ್ಕಾರ ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಗಂಗಾವತಿ ಅಸ್ವಚ್ಚತೆಯಿಂದ ಕೂಡಿ, ಗಬ್ಬು ನಾರುತ್ತಿದೆ. ಇಲ್ಲಿನ ಕೊಳೆಗೇರಿ ಬಡಾವಣೆಗಳು ಅಭಿವೃದ್ಧಿ ಕಂಡಿಲ್ಲ. ಅಭಿವೃದ್ಧಿ ಕೆಲಸ ಮಾಡಲು ಹೇರಳ ಅವಕಾಶಗಳಿದ್ದವು

–ಎಚ್.ಆರ್.ಶ್ರೀನಾಥ, ಕಾಂಗ್ರೆಸ್ ಮುಖಂಡ, ಗಂಗಾವತಿ


ರೈತರ, ಮಹಿಳಾ ಸಬಲೀಕರಣ, ನಗರ ಸ್ವಚ್ಛತೆ, ಕೊಳೆಗೇರಿ ಜನತೆಗೆ ನಿವೇಶನ ಸೌಕರ್ಯ, ದುರ್ಗಮ್ಮನ ಹಳ್ಳ ಶುದ್ದೀಕರಣ, ರಸ್ತೆ, ಸರ್ಕಾರಿ ಯೋಜನೆ ಕುರಿತು ಪರಣ್ಣ ಮುನವಳ್ಳಿ ಭರವಸೆ ನೀಡಿದ್ದಾರೆ. ಆದರೆ, ಅದನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ

–ಶರಣಪ್ಪ ಸಜ್ಜಿಹೊಲ, ಮುಖಂಡ, ಎಎಪಿ

ಹೊಸಳ್ಳಿ ಗ್ರಾಮದಿಂದ ಗಂಗಾವತಿ ನಗರಕ್ಕೆ ಬರಲು ಬಸ್ ಸೌಕರ್ಯ ಇಲ್ಲ. ನಿತ್ಯ ವಿದ್ಯಾರ್ಥಿಗಳು ಎರಡು ಕಿ.ಮೀ. ನಡೆದುಕೊಂಡೇ ಶಾಲಾ ಹಾಗೂ ಕಾಲೇಜುಗಳಿಗೆ ಹೋಗಬೇಕಾದ ಪರಿಸ್ಥಿತಿಯಿದೆ. ಸರಿಯಾದ ಕುಡಿಯುವ ನೀರಿನ ಸೌಕರ್ಯವಿಲ್ಲ. ಕಳಪೆ ಕಾಮಗಾರಿ ಆಗಿದೆ

–ಎಸ್.ಭಾವನಾ, ಹೊಸಳ್ಳಿ ಗ್ರಾಮದ ನಿವಾಸಿ

ಪರಣ್ಣ ಮುನವಳ್ಳಿ ಆಡಳಿತ ಅವಧಿಯಲ್ಲಿ ಗಂಗಾವತಿ ಶಾಂತಿಯಿಂದ ಕೂಡಿದೆ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದ್ದು, ನಗರದ ಪ್ರದೇಶ ಇನ್ನೂ ಅಭಿವೃದ್ಧಿ ಆಗಬೇಕಿದೆ. ನಿರೀಕ್ಷಿತ ಮಟ್ಟದಲ್ಲಿ ಇನ್ನಷ್ಟು ಕೆಲಸಗಳು ಆಗಬೇಕಿದೆ –ಶಂಕ್ರಪ್ಪ ಹೂಗಾರ, ಹೂವಿನ

-ವ್ಯಾಪಾರಿ, ಗಂಗಾವತಿ


ಶಾಸಕರು ತಮ್ಮ ಅಡಳಿತ ಅವಧಿಯಲ್ಲಿ ಹೇಳಿಕೊಳ್ಳುವಷ್ಟು ಅಭಿವೃದ್ದಿಗಳೇನೂ ಮಾಡಿಲ್ಲ. ಗಂಗಾವತಿ-ಹುಲಿಗಿ ಮಾರ್ಗ ರಸ್ತೆ ದುರಸ್ತಿಗೆ ಕಾದಿದೆ. ಅಂಜನಾದ್ರಿ ಅಭಿವೃದ್ಧಿ ಘೋಷಣೆಗಳಷ್ಟೇ ಸೀಮಿತವಾಗಿದೆ. ವಿದ್ಯಾವಂತ ಯುವಜನತೆಗೆ ಸ್ಥಳೀಯವಾಗಿ ಉದ್ಯೋಗದ ಅವಕಾಶಗಳು ಸಿಗುತ್ತಿಲ್ಲ

–ವಿಜಯಕುಮಾರ, ಆನೆಗೊಂದಿ ಗ್ರಾಮದ ನಿವಾಸಿ

ಕಳೆದ 5 ವರ್ಷಗಳಲ್ಲಿ ಶಾಸಕ ಪರಣ್ಣ ಮುನವಳ್ಳಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸಿಸಿರಸ್ತೆ, ದೇವಸ್ಥಾನಗಳ ಜೀರ್ಣೋದ್ಧಾರ, ಶಾಲಾ ಕೊಠಡಿ, ನಿವೇಶನ, ಗಂಗಾ ಕಲ್ಯಾಣ ಯೋಜನೆಗಳು ಜನರಿಗೆ ತಲುಪಿಸಿ, ಜನಪರ ಅಭಿವೃದ್ಧಿ ಕೆಲಸಗಳು ಮಾಡಿದ್ದಾರೆ

–ಸಾಗರ ಕುರುಗೋಡು, ಗಂಗಾವತಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT