ನೆಲ, ಜಲದ ಸಂರಕ್ಷಣೆಯ ಕೆಲಸವಾಗಲಿ: ಡಾ. ಬಸವರಾಜ್ ಪೂಜಾರ ಸಲಹೆ

ಕೊಪ್ಪಳ: ‘ಪಂಪನ ಮನುಷ್ಯ ಜಾತಿ ತಾನೊಂದೇ ವಲಂನಿಂದ ಹಿಡಿದು ಕುವೆಂಪು ಅವರ ಮನುಜ ಮತ ವಿಶ್ವ ಪಥದವರೆಗೂ ವಿಜೃಂಭಣೆಯಿಂದ ಮತ್ತು ಅರ್ಥವಂತಿಕೆಯಿಂದ ಕನ್ನಡ ಸಾಹಿತ್ಯ ಬೆಳೆದು ಬಂದಿದೆ. ಕನ್ನಡಿಗರನ್ನು ಒಗ್ಗೂಡಿಸುವ, ಕನ್ನಡದ ನೆಲ, ಜಲದ ಸಂರಕ್ಷಣೆಯ ಕೆಲಸ ಹೆಚ್ಚಾಗಬೇಕು‘ ಎಂದು ವಿಜಯನಗರ ವಿವಿ ಸಿಂಡಿಕೇಟ್ ಸದಸ್ಯ, ಕನ್ನಡ ಪ್ರಾಧ್ಯಾಪಕ ಡಾ. ಬಸವರಾಜ್ ಪೂಜಾರ ಅಭಿಪ್ರಾಯಪಟ್ಟರು.
ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ, ತಳಮಳ ಪ್ರಕಾಶನ, ಸೃಜನ-ಸಮತ ಪ್ರಕಾಶನ ಹಲಗೇರಿ, ಜೇನುಗೂಡು ಸಾಂಸ್ಕೃತಿಕ ಕಲಾ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಬಹದ್ದೂರಬಂಡಿ ಸಹಯೋಗದಲ್ಲಿ ದೀಪಾವಳಿ ಮತ್ತು ರಾಜ್ಯೋತ್ಸವ ಪ್ರಯುಕ್ತ 'ಬೆಳಕಿನ ರಾಜ್ಯೋತ್ಸವ' ಶೀರ್ಷಿಕೆಯಡಿಯಲ್ಲಿ ವಿಶಿಷ್ಟ 'ಸಾಹಿತ್ಯ ಸಮಾಗಮ ಗೋಷ್ಠಿ'ಯು ನಗರದ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಿಳಾ ಕಾಲೇಜಿನಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೈಭವದ ಸಾಂಸ್ಕೃತಿಕ ಇತಿಹಾಸ ವನ್ನು ಹೊಂದಿರುವ ಕೊಪ್ಪಳದಲ್ಲಿ ಈ ರೀತಿಯ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿರುವ ಪ್ರಯತ್ನ ಶ್ಲಾಘನೀಯ. ತಿರುಳ್ಗನ್ನಡ ನಾಡು, ಜೈನ ಕಾಶಿ, ಬೌದ್ಧರ ನೆಲೆವೀಡು, ಶೈವ ಕವಿಗಳ ತಪೋಭೂಮಿಯಾದ ಕೊಪ್ಪಳ ಕನ್ನಡ, ಕರ್ನಾಟಕಕ್ಕೆ ತನ್ನದೇ ಆದ ಕೊಡುಗೆ ನೀಡಿದೆ ಎಂದರು.
ಆಶಯ ಭಾಷಣ ಮಾಡಿದ ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಈ ನೆಲದ
ಹೋರಾಟ ಮತ್ತು ಸಾಹಿತ್ಯದ ಐತಿಹ್ಯ ತಿಳಿಸಿದರು.
ಈಶ್ವರ್ ಹತ್ತಿ ಮಾತನಾಡಿ, ಸಾಹಿತಿ ಗಳಿಗೆ ನೆಲ ಜಲದ ಸಂರಕ್ಷಣೆಯಲ್ಲಿ ಸಂಸ್ಕೃತಿಯ ಸಂರಕ್ಷಣೆಯಲ್ಲಿ ಬಹು ದೊಡ್ಡ ಜವಾಬ್ದಾರಿ ಇದೆ. ಬಹಳ ದೊಡ್ಡ ಶ್ರೀಮಂತಿಕೆಯ ಹಿನ್ನೆಲೆ ಹೊಂದಿರುವ ನಮ್ಮ ಸಾಹಿತ್ಯದ ಬೇರುಗಳ ರಸವನ್ನು ಅರಿತರೆ ಮಾತ್ರ ಸಾಹಿತ್ಯ ಗಟ್ಟಿಯಾಗುತ್ತದೆ. ಕನ್ನಡದ ನೆಲಕ್ಕೆ, ಭಾಷೆಗೆ ಕುತ್ತು ಬಂದಾಗ ನಡೆದ ಚಳವಳಿಗಳನ್ನು ನೆನಪಿಸಿದರು.
ಶಕ್ತಿ ಶಾರದೆಯ ಮೇಳದ ಸಂಚಾಲಕ ಡಿ.ಎಂ. ಬಡಿಗೇರ್ ಮಾತನಾಡಿದರು. ಸಾಹಿತಿ ಎ.ಎಂ.ಮದರಿ ಅಧ್ಯಕ್ಷತೆ ವಹಿಸಿದ್ದರು.
ಶಿ.ಕಾ. ಬಡಿಗೇರ, ಅಶೋಕ ಓಜಿನಹಳ್ಳಿ, ಸಿದ್ಧಲಿಂಗಪ್ಪ ಕೊಟ್ನೇಕಲ್, ವೀರೇಶ ಜಿ. ಮೇಟಿ, ಸೋಮಲಿಂಗಪ್ಪ ಬೆಣ್ಣಿ ಕಥೆ ವಾಚಿಸಿದರೆ, ಅರುಣಾ ನರೇಂದ್ರ, ವಿಜಯಲಕ್ಷ್ಮೀ ಕೊಟಗಿ, ಶಂಕರ ಹರಟಿ, ಈರಪ್ಪ ಬಿಜಲಿ, ಮಹೆಬೂಬ್ ಮಕಾನ್ ದಾರ್, ಪುಷ್ಪಲತಾ ಏಳುಭಾವಿ ಗಜಲ್ ವಾಚನ ಮಾಡಿದರು. ನಾಗರಾಜ ಡೊಳ್ಳಿನ, ಅಕ್ಬರ್ ಸಿ. ಕಾಲಿಮಿರ್ಚಿ ರಾಜೇಸಾಬ, ರಮೇಶ ಎಸ್. ಬುಡ್ಡನಗೌಡರ, ಸಂಗಮೇಶ ಪಾಟೀಲ, ಬಸವರಾಜ ಉಪ್ಪಿನ, ಮಂಜುನಾಥ ಚಿತ್ರಗಾರ, ಮೌನೇಶ ನವಲಹಳ್ಳಿ, ದೇವು ವಿಶ್ವಕರ್ಮ, ಶರಣ ಬಸವ ಅಂಕಸಮುದ್ರ ಕವನಗಳನ್ನು ವಾಚಿಸಿದರೆ, ವೀರಪ್ಪ ನಿಂಗೋಜಿ, ಶಿವಪ್ರಸಾದ ಹಾದಿಮನಿ ಹೈಕುಗಳನ್ನು, ಶ್ರೀನಿವಾಸ ದೇಸಾಯಿ, ಕುರುವತ್ತಿಗೌಡ, ಹನುಮಂತಪ್ಪ ಅಂಡಗಿ, ಮಾಲಾ ಬಡಿಗೇರ, ಎ.ಪಿ. ಅಂಗಡಿ ಹನಿಗವಿತೆಗಳನ್ನು ಬಸವರಾಜ ಗೋನಾಳ, ಗವಿಸಿದ್ಧಪ್ಪ ಬಾರಕೇರ ಮಕ್ಕಳ ಕವಿತೆಗಳನ್ನು ವಾಚಿಸಿದರು.
ಮಹೇಶ ಬಳ್ಳಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿ ರಮೇಶ ಸಿ. ಬನ್ನಿಕೊಪ್ಪ ನಿರ್ವಹಿಸಿದರು. ಜನಪದ ಕಲಾವಿದ ಮೆಹೆಬೂಬ ಕಿಲ್ಲೇದಾರ ಕನ್ನಡದ ಗೀತೆ ಹಾಡಿದರು. ಡಾ.ಪ್ರದೀಪ ಕುಮಾರ ಯು.ಮುಂತಾದವರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.