ಕುಷ್ಟಗಿ: ತಾಲ್ಲೂಕು ಘಟಕದ ಕಸಾಪ ಕಾರ್ಯಚಟುವಟಿಕೆ ಕುರಿತು ಹಾಲಿ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ ಮತ್ತು ಕೇಂದ್ರ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯ ನಬಿಸಾಬ್ ಕುಷ್ಟಗಿ ನಡುವಿನ ‘ಅಕ್ಷರ ಸಮರ’ ತಾರಕಕ್ಕೇರಿದೆ. ಪರಿಷತ್ತಿನ ಆಜೀವ ಸದಸ್ಯರ ವಾಟ್ಸ್‌ಆಪ್ ಗ್ರೂಪ್‌ನಲ್ಲಿ ಇಬ್ಬರ ಮಧ್ಯೆ ಅಕ್ಷರ ಸಮರ ನಡೆದಿದೆ.
ನಬಿಸಾಬ್ ಕುಷ್ಟಗಿ ಅವರು ಅಧ್ಯಕ್ಷ ಬಂಗಾರಶೆಟ್ಟರ ಕಾರ್ಯವೈಖರಿ ವಿರುದ್ಧ ಹರಿಹಾಯ್ದಿದ್ದಾರೆ. ‘ನಿರಾಸಕ್ತಿ ಹೊಂದಿರುವ ಅಧ್ಯಕ್ಷರು ಅಧಿಕಾರ ವಹಿಸಿಕೊಂಡು ಎರಡೂವರೆ ವರ್ಷ ಕಳೆದಿವೆ. ಈವರೆಗೂ ಹೇಳಿಕೊಳ್ಳುವಂತಹ ಕಾರ್ಯಕ್ರಮ ಆಯೋಜಿಸಿಲ್ಲ. ಮುಂದೆಯೂ ನಿರೀಕ್ಷಿಸುವಂತಿಲ್ಲ. ಈ ಕಾರಣಕ್ಕೆ ಕಸಾಪಕ್ಕೆ ಹಿಡಿದಿರುವ ಗ್ರಹಣ ವಿಮೋಚನೆಗೊಳಿಸಿ, ಪರಿಷತ್ತಿನ ಗತ ವೈಭವ ಮರುಕಳಿಸುವಂತೆ ಮಾಡೋಣ ಮತ್ತು ಪರಿಷತ್ತನ್ನು ಸದೃಢಗೊಳಿಸಿ ಮಾದರಿಯಾಗಿಸಬೇಕಿದೆ. ಹೀಗಾಗಿ ಸಮರ್ಥ ವ್ಯಕ್ತಿಯನ್ನು ಮರು ಆಯ್ಕೆ ಮಾಡೋಣ’ ಎಂದು ಗ್ರೂಪ್‌ನಲ್ಲಿ ಬರೆದುಕೊಂಡಿದ್ದರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಅಧ್ಯಕ್ಷ ಶೆಟ್ಟರ್, ‘ಒಬ್ಬ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ತಾವೇನು ಕೆಲಸ ಮಾಡಿ, ಗತವೈಭವವನ್ನು ಮರಳಿ ತಂದಿದ್ದೀರಿ. ಜಿಲ್ಲೆ, ತಾಲ್ಲೂಕಿಗೆ ನಿಮ್ಮ ಕೊಡುಗೆ ಏನು? ಕೇಂದ್ರ ಸಮಿತಿಯಿಂದ ಜಿಲ್ಲೆಗೆ ತಂದ ಕಾರ್ಯಕ್ರಮಗಳು ಯಾವುವು? ‘ಅವರನ್ನು (ನಬಿಸಾಬ್) ಹಾಡಿ ಹೊಗಳುವ ಅಧ್ಯಕ್ಷ ಬೇಕಾಗಿದ್ದಾರೆ' ಎಂದೆ ತಿರುಗೇಟು ನೀಡಿದ್ದರು.
‘ಕನ್ನಡ ರಥಯಾತ್ರೆ ಬಂದದ್ದು. ತಮ್ಮ ಪ್ರಯತ್ನದಿಂದ‘ ಎಂದು ಸಮರ್ಥಿಸಿಕೊಂಡಿದ್ದಾರೆ. ಕೇಂದ್ರ ಸಮಿತಿ ಸದಸ್ಯನಾಗಿದ್ದರೂ ತಾಲ್ಲೂಕು ಅಧ್ಯಕ್ಷರು ಯಾವ ವಿಷಯದ ಬಗ್ಗೆಯೂ ತಮ್ಮೊಂದಿಗೆ ಚರ್ಚಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ಅವರೇ ನಿಷ್ಕ್ರೀಯರಾಗಿದ್ದಾರೆ. ಆ ಬಗ್ಗೆ ಪ್ರಶ್ನಿಸಿ? ಎಂದು ಕೆಲವರು ನಬಿಸಾಬ್ ಅವರಿಗೆ ಪ್ರತಿಕ್ರಿಯಿಸಿದ್ದಾರೆ.
ಬೆರಳೆಣಿಕೆ ಜನರ ಸಭೆ: ಈ ಮಧ್ಯೆ ಅಧ್ಯಕ್ಷರ ಕಾರ್ಯವೈಖರಿ ಚರ್ಚಿಸುವ ಸಲುವಾಗಿ ಶನಿವಾರ ಇಲ್ಲಿ ಸಮಾನ ಮನಸ್ಕರ ಹೆಸರಿನಲ್ಲಿ ನಡೆದ ಸಭೆಯಲ್ಲಿ ಬೆರಳೆಣಿಕೆ ಸದಸ್ಯರು ಮಾತ್ರ ಇದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ನಬಿಸಾಬ ಕುಷ್ಟಗಿ, ಕೇದಾರನಾಥ ತುರಕಾಣಿ, ಮೋಹನಲಾಲ್ ಜೈನ್, ಅಡಿವೆಪ್ಪ ನೆರೆಬೆಂಚಿ, ದೊಡ್ಡಪ್ಪ ಕೈಲವಾಡಗಿ ಅವರು, ಅಧ್ಯಕ್ಷರ ವೈಫಲ್ಯಗಳನ್ನು ಪ್ರಸ್ತಾಪಿಸಿ ಬದಲಾವಣೆಯ ಇಂಗಿತ ವ್ಯಕ್ತಪಡಿಸಿದರು.
ಕರವೇ ಮುಖಂಡ ಬಸನಗೌಡ ಪೊಲೀಸಪಾಟೀಲ ಅವರು, ಕನ್ನಡತನದ ಬಗ್ಗೆ ಧ್ವನಿ ಎತ್ತದ ಅಧ್ಯಕ್ಷ ಬಂಗಾರ ಶೆಟ್ಟರ ನಿಷ್ಕ್ರಿಯರಾಗಿದ್ದಾರೆ. ಅವರು ಮೂಲತಃ ಕೊಪ್ಪಳ ಜಿಲ್ಲೆಯವರೇ ಅಲ್ಲ’ ಎಂದರು.
ಕನ್ನಡ ಬಾರದವರೊಂದಿಗೆ ಕೆಲಸ ಮಾಡಲ್ಲ’ ಈ ಮಧ್ಯೆ ತಮ್ಮ ವಿರುದ್ಧ ಎದ್ದಿರುವ ಅಪಸ್ವರ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಸಾಪ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ ಆರೋಪಗಳನ್ನು ನಿರಾಕರಿಸಿದರು. ನಬಿಸಾಬ್ ಅವರನ್ನು ಹೊರತುಪಡಿಸಿ ಬೇರೆ ಯಾರಿಂದಲೂ ಅಪಸ್ವರ ಬಂದಿಲ್ಲ. ಸ್ಪಷ್ಟವಾಗಿ ಕನ್ನಡ ಓದಲು ಬರೆಯಲು ಬಾರದ ಕೆಲವರು ಪರಿಷತ್ತಿನಲ್ಲಿದ್ದು ಅಂಥವರೊಂದಿಗೆ ಚರ್ಚಿಸುವುದು ಅನಗತ್ಯ. ಮಾನ್ಯತೆ ಇಲ್ಲದ ಸಭೆಗೆ ಹೋಗಲಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.