ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕವಲೂರು ಪ್ರತಿಭಟನೆ ವೇಳೆ ಹಲ್ಲೆ: ತಹಶೀಲ್ದಾರ್ ದೂರು, 14 ಜನರ ವಿರುದ್ಧ FIR

Published : 2 ಅಕ್ಟೋಬರ್ 2024, 16:08 IST
Last Updated : 2 ಅಕ್ಟೋಬರ್ 2024, 16:08 IST
ಫಾಲೋ ಮಾಡಿ
Comments

ಕೊಪ್ಪಳ: ತಾಲ್ಲೂಕಿನ ಅಳವಂಡಿ ಸಮೀಪದ ಕವಲೂರು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಮಂಗಳವಾರ ನಡೆದ ಪ್ರತಿಭಟನೆ ವೇಳೆ ಕೊಪ್ಪಳ ತಾಲ್ಲೂಕು ಪಂಚಾಯಿತಿ ಇಒ ದುಂಡಪ್ಪ ತುರಾದಿ ಹಾಗೂ ನನ್ನ ಮೇಲೆ ಹಲ್ಲೆ ನಡೆಸಲು ಯತ್ನಿಸಲಾಗಿದೆ ಎಂದು ತಹಶೀಲ್ದಾರ್‌ ವಿಠ್ಠಲ ಚೌಗುಲಾ ಆರೋಪಿಸಿ ದೂರು ನೀಡಿದ್ದು, ಅಳವಂಡಿ ಪೊಲೀಸ್‌ ಠಾಣೆಯಲ್ಲಿ 14 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

‘ಮಂಗಳವಾರ ಅಳವಂಡಿ, ಗುಡಗೇರಿ, ಹಂದ್ರಾಳ, ಬನ್ನಿಕೊಪ್ಪ ಹಾಗೂ ಇತರ ಗ್ರಾಮಗಳ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು, ಕಲ್ಪವೃಕ್ಷ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಒಕ್ಕೂಟ ಕವಲೂರಿನಲ್ಲಿ ಬಂದ್ ಹಮ್ಮಿಕೊಂಡಿತ್ತು. ಸರ್ಕಾರಿ ಕರ್ತವ್ಯದ ಮೇಲೆ ಮನವಿ ಸ್ವೀಕರಿಸಲು ಬಂದು ವಾಪಸ್‌ ಹೋಗುವಾಗ ಈ ಘಟನೆ ನಡೆದಿದೆ’ ಎಂದು ಚೌಗುಲಾ ದೂರಿನಲ್ಲಿ ತಿಳಿಸಿದ್ದಾರೆ.

‘ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ಸಂಬಂಧಪಟ್ಟವರಿಂದ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟು ನಾನು ಹಾಗೂ ಇಒ ಸರ್ಕಾರಿ ವಾಹನ ಹತ್ತುವಾಗ ಪ್ರತಿಭಟನೆಗೆ ಸಂಬಂಧ ಪಡದವರು ದುರುದ್ದೇಶದಿಂದ ನಮ್ಮ ವಾಹನ ಮುಂದೆ ಹೋಗದಂತೆ ತಡೆದು ನಿಲ್ಲಿಸಿದ್ದಾರೆ. ಏರು ಧ್ವನಿಯಲ್ಲಿ ನೀವೇನು ಕೆಲಸ ಮಾಡುತ್ತೀರಿ ಎಂದು ಪ್ರಶ್ನಿಸಿ ಟ್ರ್ಯಾಕ್ಟರ್‌ ಟ್ರಾಲಿ ಅಡ್ಡ ಹಾಕಿದ್ದಾರೆ. ನನ್ನ ವಾಹನದ ಚಾಲಕನಿಗೆ ವಾಹನ ಓಡಿಸಿದರೆ ನಿಮ್ಮ ಜೀವ ತೆಗೆಯುತ್ತೇನೆ ಎಂದು ಬೆದರಿಕೆಯೊಡ್ಡಿ ಗಾಡಿಯ ಕೀಲಿ ತೆಗೆದುಕೊಂಡು ನಮ್ಮ ಮೇಲೆ ಹಲ್ಲೆ ಮಾಡಲು ಬಂದಿದ್ದರು’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸಾವು: ತಾಲ್ಲೂಕಿನ ಬಸಾಪುರ ಸೀಮೆಯ ದಿಬ್ಬದ ಯೂ ಟರ್ನ್‌ ಬಳಿ ಮಂಗಳವಾರ ನಡೆದ ಅಪಘಾತದಲ್ಲಿ ಮುನಿರಾಬಾದ್‌ನ ಮಹಮ್ಮದ್ ರಫಿ ಅಳವಂಡಿ (55) ಎಂಬುವರು ಮೃತಪಟ್ಟಿದ್ದಾರೆ. ರಾತ್ರಿ ವೇಳೆ ದ್ವಿಚಕ್ರವಾಹನ ಚಲಾಯಿಸಿಕೊಂಡು ಹೋಗುತ್ತಿದ್ದ ಮಹಮ್ಮದ್‌ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಹೋಗಿದ್ದರಿಂದ ಈ ಘಟನೆ ನಡೆದಿದೆ. ಕೊಪ್ಪಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.     

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT