ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ ಆಸ್ಪತ್ರೆಗೆ ಸ್ವಚ್ಛ ಭಾರತ ಅಭಿಯಾನದಡಿ ‘ಕಾಯಕಲ್ಪ ಪ್ರಶಸ್ತಿ’

ಸ್ವಚ್ಛ ಭಾರತ ಅಭಿಯಾನದಡಿ ಕೇಂದ್ರ ಸರ್ಕಾರ ನೀಡುವ ಪ್ರಶಸ್ತಿಗೆ ಆಯ್ಕೆ
Last Updated 25 ಏಪ್ರಿಲ್ 2022, 3:49 IST
ಅಕ್ಷರ ಗಾತ್ರ

ಗಂಗಾವತಿ: ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ಕೊಡುವುದರ ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡಿದ ಗಂಗಾವತಿ ಸರ್ಕಾರಿ ಉಪವಿಭಾಗ ಆಸ್ಪತ್ರೆಯು ಪ್ರಸಕ್ತ ಸಾಲಿನ ‘ಕಾಯಕಲ್ಪ ಪ್ರಶಸ್ತಿ’ಗೆ ಪಾತ್ರವಾಗಿದೆ.

ರೋಗಿಗಳಿಗೆ ಉತ್ತಮ ಚಿಕಿತ್ಸೆ, ವಾತಾವರಣ ಕಲ್ಪಿಸಿಕೊಡುವ ಆಸ್ಪತ್ರೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸ್ವಚ್ಛ ಭಾರತ ಅಭಿಯಾನದಡಿ 2015ರಿಂದ ‘ಕಾಯಕಲ್ಪ ಪ್ರಶಸ್ತಿ’ ನೀಡುತ್ತಿದೆ. ಈ ಪ್ರಶಸ್ತಿಗೆ ಗಂಗಾವತಿ ಸರ್ಕಾರಿ ಉಪವಿಭಾಗ ಆಸ್ಪತ್ರೆ ಮೂರನೇ ಬಾರಿ ಆಯ್ಕೆಯಾಗಿರುವುದು ವಿಶೇಷ.

ಈ ಸರ್ಕಾರಿ ಆಸ್ಪತ್ರೆಯಲ್ಲಿ 180ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ದಿನದ 24 ಗಂಟೆಗಳ ಕಾಲವೂ ಚಿಕಿತ್ಸೆ ಲಭ್ಯವಿದೆ. ಇಲ್ಲಿ ಒಟ್ಟು 4 ಆಂಬುಲೆನ್ಸ್‌ ಇವೆ. ಅದರಲ್ಲಿ 1 ನಗು-ಮಗು, 1 ತುರ್ತು ಸೇವೆಗೆ ಮತ್ತು 2 ಸಾಮಾನ್ಯ ಅಪಘಾತಗಳಿಗೆ ಮೀಸಲಿಡಲಾಗಿದೆ.

ನಿತ್ಯ ಈ ಆಸ್ಪತ್ರೆಗೆ 1500ಕ್ಕೂ ಹೆಚ್ಚು ಹೊರ ಮತ್ತು ಒಳ ರೋಗಿಗಳು ಬಂದು ಚಿಕಿತ್ಸೆ ಪಡೆದು, ಉಚಿತವಾಗಿ ಸರ್ಕಾರ ನೀಡುವ ಔಷಧಿಗಳನ್ನು ಪಡೆಯುತ್ತಾರೆ. ಕ್ಷಯರೋಗ ಮುಕ್ತ ಮಾಡಲು ಸಹ ತಾಲ್ಲೂಕು ಆಸ್ಪತ್ರೆ ಸಕಲ ರೀತಿಯಲ್ಲಿ ಚಿಕಿತ್ಸೆ ನೀಡಿ ಜಾಗೃತಿ ಮೂಡಿಸುತ್ತಿದೆ.

ಮಾನದಂಡಗಳು: ಕಾಯಕಲ್ಪ ಪ್ರಶಸ್ತಿಗೆ ಆಸ್ಪತ್ರೆಯ ಗುಣಮಟ್ಟದ ಚಿಕಿತ್ಸೆ, ಸ್ವಚ್ಛತೆ, ತ್ಯಾಜ್ಯ ವಿಲೇವಾರಿ, ರೋಗಿಗಳ ಆರೈಕೆ, ತಜ್ಞರ ಲಭ್ಯತೆ, ಸಂಪನ್ಮೂಲಗಳ ಬಳಕೆ, ಶೌಚಾಲಯ ಸೇರಿದಂತೆ ಒಟ್ಟು 16 ಮಾನದಂಡಗಳನ್ನು ಪರಿಗಣಿಸಲಾಗುತ್ತದೆ. ಈ ಮಾನದಂಡಗಳಲ್ಲಿ 98.58 ಅಂಕ ಪಡೆದು, ವಿಜಯಪುರ ಜಿಲ್ಲೆಯ ಬಾಗೇವಾಡಿ ಆಸ್ಪತ್ರೆಯನ್ನು ಹಿಂದಿಕ್ಕಿ ಗಂಗಾವತಿ ಸರ್ಕಾರಿ ಉಪವಿಭಾಗ ಆಸ್ಪತ್ರೆ ಕಾಯಕಲ್ಪ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಮೂರನೇ ಬಾರಿ ಕಾಯಕಲ್ಪ: ಗಂಗಾವತಿ ಉಪವಿಭಾಗ ಆಸ್ಪತ್ರೆ 2017-18, 2018-19 ರಲ್ಲೂ ಈ ಪ್ರಶಸ್ತಿಯನ್ನು ಪಡೆದಿತ್ತು. 2022-23ನೇ ಸಾಲಿನಲ್ಲಿ ರಾಜ್ಯದ 210 ಆಸ್ಪತ್ರೆಗಳನ್ನು ಹಿಂದಿಕ್ಕುವ ಮೂಲಕ 3ನೇ ಬಾರಿ ಕಾಯಕಲ್ಪ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಅಡ್ವಾನ್ಸ್ ಚಿಕಿತ್ಸೆ ಲಭ್ಯ: ತಾಲ್ಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಸಿಗದ ಮುಂದುವರಿದ ಚಿಕಿತ್ಸೆ ಈ ಉಪವಿಭಾಗ ಆಸ್ಪತ್ರೆಯಲ್ಲಿ ಲಭ್ಯವಿದೆ. ಸಿಟಿಬ್ರೈನ್, ಡಿಜಿಟಲ್ ಎಕ್ಸ್‌ರೇ, ಎಚ್.ಎಸ್.ಜಿ, ಯುಎಸ್ ಬಿ ಸ್ಕ್ಯಾನಿಂಗ್, ಎಂಡೊಸ್ಕೋಪಿ, ಎಚ್‌ಬಿಎಸಿ1 (ಡಯಾಬಿಟೀಸ್), ಪಂಚಕರ್ಮ ಸೇರಿದಂತೆ ಇತರೆ ಹಲವು ಚಿಕಿತ್ಸೆಗಳು ಇಲ್ಲಿ ದೊರೆಯಲಿವೆ.

ತಜ್ಞರು: ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ 24*7 ಚಿಕಿತ್ಸೆ ದೊರೆಯಲಿದ್ದು, ಇಲ್ಲಿ ಚರ್ಮಶಾಸ್ತ್ರ, ಸಾಮಾನ್ಯ ಶಸ್ತ್ರಚಿಕಿತ್ಸಕ, ಔಷಧಿ ತಜ್ಞರು, ಸೈಕಾಲಜಿಸ್ಟ್, ಸ್ತ್ರೀರೋಗ ತಜ್ಞರು, 2 ಅನಸ್ತೇಸಿಯಾ ವೈದ್ಯರು ಇರುವುದು ವಿಶೇಷವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT