ಬುಧವಾರ, ಏಪ್ರಿಲ್ 8, 2020
19 °C
ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಎಚ್ಚರಿಕೆ

ಸಮಸ್ಯೆ ಪರಿಹರಿಸದಿದ್ದರೇ ಸಭೆ ಬಹಿಷ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಮುಂದಿನ ಸಭೆ ಎನ್ನುವಷ್ಟರಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರ ಆಗದಿದ್ದರೇ ಸಭೆಯನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ರಾಮಪ್ಪ ಪಮ್ಮಾರ ಆಕ್ರೋಶ ವ್ಯಕ್ತಡಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಪಂಚಾಯಿತಿ ವತಿಯಿಂದ ನಡೆದ ಸಾಮಾನ್ಯ ಸಭೆಯಲ್ಲಿ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗ ಮತ್ತು ನೈರ್ಮಲ್ಯ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗೆ ಅವರು ಎಚ್ಚರಿಕೆ ನೀಡಿದರು.

ನಾಲ್ಕು ವರ್ಷಗಳಿಂದ ಕೇವಲ ನಾವು ಹೇಳುವುದು, ನೀವು ಕೇಳುವುದು ಮತ್ತು ಹೋಗುವುದಾಗಿದೆ. ಆದರೆ ಯಾವುದೇ ಕೆಲಸಗಳು ಆಗಿಲ್ಲ. ಸರ್ಕಾರದ ಅನುದಾನ ಬಳಕೆಯಾಗಿದೆ ಎಂದು ಹೇಳುತ್ತೀರಿ, ಅದು ಜನರಿಗೆ ಉಪಯೋಗ ಆಗಿಲ್ಲ. ಶೇ 1ರಷ್ಟು ಜನರನ್ನು ತಲುಪಿಲ್ಲ ಎಂದು ರಾಮಪ್ಪ ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಲಾಖೆಯ ಅಧಿಕಾರಿ ಭರತ್‌ಕುಮಾರ, ಈ ವರೆಗೆ ಆರೋಪ್ಲಾಂಟ್‌ ದುರಸ್ತಿಗೆ ಅನುದಾನ ಇರಲಿಲ್ಲ. ಆದರೆ ಪ್ರಸ್ತುತ ಸರ್ಕಾರ ದುರಸ್ತಿ ಮಾಡಿಕೊಳ್ಳಬಹುದು ಎಂದು ಆದೇಶಿಸಿದೆ. ಹಾಗಾಗಿ ಸಮೀಕ್ಷೆ ಮಾಡಿಸಿದ್ದೇವೆ. ಎಲ್ಲವೂ ಸಣ್ಣ ಸಣ್ಣ ದುರಸ್ತಿ ಇವೆ. ಎಲ್ಲವನ್ನೂ ದುರಸ್ತಿ ಮಾಡಿಸಿ, ಗ್ರಾಮ ಪಂಚಾಯಿತಿಗೆ ನೀಡುತ್ತೇವೆ. ಇದರ ನಿರ್ವಹಣೆಯನ್ನು ಟೆಂಡರ್‌ ಕರೆದು, ಏಜೆನ್ಸಿಗೆ ನೀಡುತ್ತೇವೆ ಎಂದರು. ಬೇಸಿಗೆ ಆರಂಭ ಆಗುತ್ತಿದೆ. ಇದರಿಂದ ಇನ್ಮುಂದೆ ಸಮಸ್ಯೆಗಳು ಉದ್ಭವಿಸುತ್ತವೆ. ಈ ಸಮಸ್ಯೆಗಳನ್ನು ಶೀಘ್ರವಾಗಿ ಕೊನೆಗಾಣಿಸಬೇಕು ಎಂದು ಅಧ್ಯಕ್ಷರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ಕುಡಿಯುವ ನೀರಿನ ಮಾಹಿತಿ ಇಂಗ್ಲಿಷ್‌ನಲ್ಲಿದೆ. ಸದಸ್ಯರ ಪೈಕಿ ಕಲಿತವರು, ಕಲಿಯದವರು ಎಲ್ಲರೂ ಇದ್ದಾರೆ. ಸದಸ್ಯರಿಗೆ ತಿಳಿಯಬಾರದು ಎನ್ನುವ ಉದ್ದೇಶಕ್ಕಾಗಿ ಇಂಗ್ಲಿಷ್‌ನಲ್ಲಿ ನಮೂದಿಸಲಾಗಿಯೇ? ಎಂದು ಸದಸ್ಯ ಶರಣಬಸವರಾಜಗೌಡ ಪಾಟೀಲ ಅಧಿಕಾರಿಯನ್ನು ಪ್ರಶ್ನಿಸಿದರು.

ಮುದ್ದಾಬಳ್ಳಿ ಸರ್ಕಾರ ಶಾಲೆ ಮುಂದೆ ಟಿಸಿ ಅಳವಡಿಸಲಾಗಿದೆ. ಇದರಿಂದ ಮಕ್ಕಳಿಗೆ ಅಪಘಾತ ಸಂಭವಿಸುವ ಆತಂಕ ಎದುರಾಗಿದೆ. ಹಾಗಾಗಿ ಇದನ್ನು ವರ್ಗಾವಣೆ ಮಾಡಿ ಎಂದು ಕಳೆದ 3 ಸಭೆಗಳಲ್ಲೂ ಹೇಳುತ್ತಿದ್ದೇನೆ. ಅಲ್ಲದೇ 3 ವರ್ಷಗಳ ಹಿಂದೆಯೇ ಮುದ್ದಾಬಳ್ಳಿಗೆ ಉಪವಿಭಾಗ ಕಚೇರಿ ಮಂಜೂರಾಗಿದೆ. ಆದರೆ ಈ ಕುರಿತು ಗಮನ ಹರಿಸುತ್ತಿಲ್ಲ. ಇದರಿಂದ ನಾಲ್ಕೈದು ಹಳ್ಳಿಗಳಿಗೆ ಅನುಕೂಲ ಆಗಲಿದೆ ಎಂದು ಸದಸ್ಯೆ ರಾಜೀವ್‌ ಮಾದಿನೂರ ತಿಳಿಸಿದರು.

ಇದಕ್ಕೆ ಜೆಸ್ಕಾಂ ಎಂಜಿನಿಯರ್‌ ಮೋಟ್ಲಾ ನಾಯಕ್‌ ಪ್ರತಿಕ್ರಿಯಿಸಿ, ಎಲ್ಲ ಸಮಸ್ಯೆಗಳನ್ನು ಮುಂದಿನ ಸಭೆ ಎನ್ನುವಷ್ಟರಲ್ಲಿಯೇ ಬಗೆಹರಿಸುತ್ತೇನೆ ಎಂದರು.

ಪ್ರತಿ ಗ್ರಾಮ ಪಂಚಾಯಿತಿಯಿಂದ ಶುಲ್ಕ ಕಟ್ಟಿಸಿಕೊಳ್ಳುತ್ತೀರಾ. ಆದರೆ ಯಾವ ಆರ್‌ಆರ್‌ ನಂಬರ್‌ನಿಂದ ಎಷ್ಟು ಬಿಲ್‌ ಬಂದಿದೆ ಎನ್ನುವ ಮಾಹಿತಿ ನೀಡುವುದಿಲ್ಲ ಎಂದು ಪಿಡಿಓಗಳು ದೂರಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್‌ ಪ್ರಶ್ನಿಸಿದರು. ಇದಕ್ಕೆ ಜೆಸ್ಕಾಂ ಅಧಿಕಾರಿ, ಯಾವ, ಯಾವ ಆರ್‌ಆರ್‌ ನಂಬರ್‌ಗಳು ಆರಂಭವಾಗಿವೆ ಮತ್ತು ಸ್ಥಗಿತವಾಗಿವೆ ಎಂಬ ಮಾಹಿತಿ ನೀಡಲಿ. ಸ್ಥಗಿತವಾದ ಆರ್‌ಆರ್‌ ನಂಬರ್‌ಗಳನ್ನು ಕಡಿತಗೊಳಿಸುತ್ತೇವೆ. ಇದರಿಂದ ಶುಲ್ಕ ಕಡಿಮೆ ಬರುತ್ತದೆ ಎಂದು ಪ್ರತಿಕ್ರಿಯಿಸಿದರು.

ಜ. 30ರಂದು ಮಹಾತ್ಮ ಗಾಂಧಿ ಪುಣ್ಯತಿಥಿ ನಿಮಿತ್ತ ವಿಶ್ವ ಕುಷ್ಠರೋಗ ನಿವಾರಣಾ ದಿನ ಆಚರಣೆ ಮಾಡುತ್ತಿದ್ದು, ಎಲ್ಲರೂ ಪ್ರತಿಜ್ಞಾವಿಧಿ ಸ್ವೀಕರಿಸಬೇಕು ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ರಾಮಾಂಜನೇಯ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಶಂಕ್ರಮ್ಮ ಉಪಲಾಪುರ, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಪ್ಪ ಹೊಸಳ್ಳಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)