ಶನಿವಾರ, ನವೆಂಬರ್ 28, 2020
25 °C
ಗಂಗಾವತಿ: ನಗರಸಭೆ ಅನುದಾನ ಬಳಕೆಗೆ ಸಂಬಂಧಿಸಿದಂತೆ ಚರ್ಚೆ

ಸಾಮಾನ್ಯ ಸಭೆಯಲ್ಲಿ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: 13 ಮತ್ತು 14ನೇ ಹಣಕಾಸು ಯೋಜನೆಯ ಉಳಿಕೆ ಹಣವನ್ನು ಇಷ್ಟು ವರ್ಷ ಯಾಕೆ ಬಳಕೆ ಮಾಡಿಲ್ಲ ಎಂದು ಸಾಮಾನ್ಯ ಸಭೆಯಲ್ಲಿ ನಗರಸಭೆಯ ಬಿಜೆಪಿ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಗರದ ಮಂಥನ ಸಭಾಂಗಣದಲ್ಲಿ ಗುರುವಾರ ಸಭೆ ನಡೆಯಿತು.

13 ಮತ್ತು 14 ನೇ ಹಣಕಾಸು ಸಾಮಾನ್ಯ ಮೂಲ ಯೋಜನೆ ಅಡಿ 2011 ರಿಂದ 2014 ರವರೆಗೆ ಮಂಜೂರಾದ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಿ ಉಳಿದ ಅನುದಾನವನ್ನು ಬಳಸಿಕೊಳ್ಳಲು ಸಭೆಯಲ್ಲಿ ಅನುಮೋದನೆಗೆ ಇಟ್ಟಾಗ ಉಭಯ ಪಕ್ಷಗಳ ಸದಸ್ಯರ ನಡುವೆ ಜಟಾಪಟಿ ನಡೆಯಿತು.

ಈ ವೇಳೆ ಬಿಜೆಪಿ ಸದಸ್ಯ ಪರಶುರಾಮ ಮಡ್ಡೇರ್‌ ಮಾತನಾಡಿ,‘2011 ರಿಂದ 2014 ರವರೆಗಿನ ಉಳಿಕೆ ಹಣವನ್ನು ಸುಮಾರು ಏಳು ವರ್ಷಗಳಾದರೂ ಯಾಕೆ ಬಳಕೆ ಮಾಡಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿ’ ಎಂದು ಪೌರಾಯುಕ್ತ ಅರವಿಂದ ಜಮಖಂಡಿ ಅವರಿಗೆ ಸೂಚಿಸಿದರು.

ಇನ್ನು, 13 ಮತ್ತು 14ನೇ ಹಣಕಾಸು ಯೋಜನೆಯ ಉಳಿಕೆ ಹಣ ಸುಮಾರು ಒಂದು ಕೋಟಿ 11 ಲಕ್ಷ ಇದ್ದು, ಈಗಾಗಲೇ ಅನುದಾನ ಹಂಚಿಕೆಯಾದ ವಾರ್ಡ್‌ಗಳನ್ನು ಬಿಟ್ಟು, ಉಳಿದ ವಾರ್ಡ್‌ಗಳನ್ನು ಈ ಅನುದಾನವನ್ನು ಹಂಚಿಕೆ ಮಾಡಬೇಕು ಎಂದು ಕಾಂಗ್ರೆಸ್‌ ಸದಸ್ಯ ಶಾಮೀದ್‌ ಮನಿಯಾರ್ ಸೂಚಿಸಿದರು.‌

ಈ ವೇಳೆ ಬಿಜೆಪಿ ಸದಸ್ಯರು ಅನುದಾನವನ್ನು ಎಲ್ಲಾ 35 ವಾರ್ಡ್‌ಗಳಿಗೂ ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಉಭಯ ಪಕ್ಷಗಳ ನಡುವೆ ಕೆಲ ನಿಮಿಷಗಳ ಕಾಲ ಜಟಾಪಟಿ ನಡೆಯಿತು. ಅಧ್ಯಕ್ಷೆ ಮಾಲಾಶ್ರೀ ಸಂದೀಪ್‌ ಅನುದಾನ ಹಂಚಿಕೆಯಾದ ವಾರ್ಡ್‌ ಬಿಟ್ಟು ಉಳಿದ ವಾರ್ಡ್‌ ಗಳಿಗೆ ಅನುದಾನ ನೀಡಲಾಗುವುದು ಎಂದರು.

ನಂತರ ಬಿಜೆಪಿ ಸದಸ್ಯರು ನಗರದಲ್ಲಿ ವಾಣಿಜ್ಯ ಮಳಿಗೆಗಳು, ನಗರಸಭೆ ಮಳಿಗೆಗಳು ಸೇರಿದಂತೆ ನಗರಸಭೆಯ ತೆರಿಗೆ ಸಂಗ್ರಹದ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು. ಇದೇ ವೇಳೆ ಉಭಯ ಪಕ್ಷಗಳ ಸದಸ್ಯರು ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ನಾಮಪತ್ರ ಸಲ್ಲಿಸಿದರು.

ಉಪಾಧ್ಯಕ್ಷೆ ಸುಧಾ ಸೋಮನಾಥ, ನಗರಸಭೆ ಎಇಇ ಆರ್‌.ಆರ್‌.ಪಾಟೀಲ, ನಗರಸಭೆ ಅಧಿಕಾರಿಗಳಾದ ನೇತ್ರಾವತಿ, ಸ್ವಾತಿ, ನಾಗರಾಜ್‌, ನಗರಸಭೆ ಸದಸ್ಯರಾದ ಮನೋಹರಸ್ವಾಮಿ, ಖಾಸೀಂಸಾಬ್‌ ಗದ್ವಾಲ್‌, ನವೀನ್‌ ಪಾಟೀಲ, ಉಮೇಶ್‌ ಸಿಂಗನಾಳ್‌, ಪರಶುರಾಮ ಮಡ್ಡೇರ್‌ ಹಾಗೂ ಉಸ್ಮಾನ್‌ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.