ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ನೀಡದ ವೈದ್ಯಕೀಯ ಕಾಲೇಜು

ಜಿಲ್ಲಾಸ್ಪತ್ರೆಗೆ ವೈದ್ಯಕೀಯ ಸಚಿವರ ಭೇಟಿ, ಪರಿಶೀಲನೆ
Last Updated 1 ಫೆಬ್ರುವರಿ 2019, 16:10 IST
ಅಕ್ಷರ ಗಾತ್ರ

ಕೊಪ್ಪಳ: ನಗರದ ಜಿಲ್ಲಾಸ್ಪತ್ರೆಗೆ ಶುಕ್ರವಾರ ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಂ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ತೆರಳಿದ ಸಚಿವರು ರೋಗಿಗಳ ಆರೋಗ್ಯ ವಿಚಾರಿಸಿದರು. ಅಲ್ಲದೆ, ಆಸ್ಪತ್ರೆ ನೀಡುತ್ತಿರುವ ವೈದ್ಯಕೀಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.

ಸ್ವಚ್ಛತೆ, ಸುರಕ್ಷೆ, ರೋಗಿಗಳ ಕಾಳಜಿ ವಹಿಸಬೇಕು ಎಂದು ಆಸ್ಪತ್ರೆಯ ವೈದ್ಯರಿಗೆ ಸೂಚಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದಾನರಡ್ಡಿ ಆಸ್ಪತ್ರೆಯಲ್ಲಿರುವ ಸೌಲಭ್ಯ ಮತ್ತು ಸಿಬ್ಬಂದಿ ಮಾಹಿತಿ ನೀಡಿದರು. ನೂತನವಾಗಿ ನಿರ್ಮಾಣವಾಗುತ್ತಿರುವ 350 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಟ್ಟಡ ನಿರ್ಮಾಣದ ಕಾಮಗಾರಿಯ ಸಂಪೂರ್ಣ ವಿವರವನ್ನು ಸಚಿವರಿಗೆ ನೀಡಿದರು.

ಯಾವುದೇ ಮಾಹಿತಿ ನೀಡಿದ ಕೆಎಂಸಿ: ಈ ಭಾಗದ ಬಹುದಿನಗಳ ಬೇಡಿಕೆಯಂತೆ ಕಳೆದ ಮೂರು ವರ್ಷಗಳ ಹಿಂದೆ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭವಾಗಿದೆ. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದೆ. ವೈದ್ಯಕೀಯ ಕಾಲೇಜು ಆಡಳಿತ ಮಂಡಳಿ ಈ ಕುರಿತು ಸಾರ್ವಜನಿಕರು, ವಿದ್ಯಾರ್ಥಿಗಳ ಪಾಲಕರಿಗಾಗಲಿ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಈ ಹಿಂದೆ ಕಾಲೇಜಿನ ನಿರ್ದೇಶಕರಾಗಿದ್ದ ಡಾ.ಶಂಕರ್ ಮಾಲಪುರೆವರ್ಗಾವಣೆಗೊಂಡ ಬಳಿಕ ಹುಬ್ಬಳ್ಳಿ ಕಿಮ್ಸ್‌ ನಿರ್ದೇಶಕ ಡಾ.ಬಂಟ್‌ ಉಸ್ತುವಾರಿ ವಹಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ವಿದ್ಯುತ್‌, ಅವ್ಯವಸ್ಥೆಯ ವಸತಿ ಗೃಹಗಳ ಕುರಿತು ಅನೇಕ ದೂರುಗಳು ಬಂದಿದ್ದಲ್ಲದೇ ಪಾಲಕರು ಪ್ರತಿಭಟನೆ ಕೂಡಾ ಮಾಡಿದ್ದು, ಇದಕ್ಕೆ ಸಾಕ್ಷಿಯಾಗಿತ್ತು.

ಸೌಲಭ್ಯಗಳ ಕೊರತೆಯಿಂದ ಎಂಸಿಐ ಅನುಮತಿ ನೀಡಲು ಮೂರು ವರ್ಷಗಳಿಂದ ನಿರಾಕರಿಸಿತ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸತತ ಪ್ರಯತ್ನದಿಂದ ಅನುಮತಿ ದೊರೆಯುತ್ತಿದೆ. ಪ್ರಸ್ತುತ ವರ್ಷವೂ ಈ ತೊಂದರೆ ಎದುರಾಗಲಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಸಚಿವ ಇ.ತುಕಾರಾಂ ಅವಶ್ಯವಿರುವ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಎಂಸಿಐ ತಂಡ ಶೀಘ್ರದಲ್ಲಿ ಕಾಲೇಜಿಗೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಆಂತರಿಕ ಸಭೆ ಎಂಬ ಹೆಸರಿನಲ್ಲಿ ಮಾಧ್ಯಮದವರನ್ನು ಹೊರಗಿಟ್ಟು, ನಾಲ್ಕು ತಾಸು ಸಭೆ ನಡೆಸಿದ್ದು, ಚರ್ಚೆಗೆ ಗ್ರಾಸವಾಗಿದೆ. ಕಾಲೇಜಿನ ಎಲ್ಲ ಸಭೆಗಳು ಆಂತರಿಕವಾಗಿ ಇಲ್ಲಿಯವರೆಗೆ ನಡೆದುಕೊಂಡು ಬಂದಿದೆ.

ಕಾಲೇಜಿನ ಸಾಧನೆಯಾಗಲಿ, ಸೌಲಭ್ಯವಾಗಲಿ, ರಾಷ್ಟ್ರೀಯ ಉಪನ್ಯಾಸ, ವೈದ್ಯಕೀಯ ಸಾಧನೆ, ಕನಿಷ್ಠ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಮಾಹಿತಿ ಕೂಡಾ ಕಾಲೇಜಿಗೆ ಸಂಬಂಧಿಸಿದವರು ಮಾಧ್ಯಮಗಳಿಗೆ ನೀಡುತ್ತಿಲ್ಲ. ಇನ್ನೂ ಸಾರ್ವಜನಿಕರಿಗೆ ಮಾಹಿತಿ ನೀಡದೇ ಇರುವುದು ದೂರದ ಮಾತು. ಸಾರ್ವಜನಿಕರು ಮತ್ತು ಮಾಧ್ಯಮಗಳಿಂದ ದೂರ ಕಾಯ್ದುಕೊಳ್ಳುತ್ತಿರುವ ಕಾಲೇಜು ಆಡಳಿತ ಮಂಡಳಿಯ ಈ ನಡೆ ಪ್ರಶ್ನಾರ್ಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT