ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟಿಸ್‌: ಜಂತುನಾಶಕ ಸೇವಿಸಿ ನಿರ್ವಾಹಕ ಅಸ್ವಸ್ಥ

ಟಿಕೆಟ್‌ ನೀಡಿಕೆಯಲ್ಲಿ ಲೋಪ, ನೋಟಿಸ್‌
Last Updated 3 ಜನವರಿ 2019, 17:33 IST
ಅಕ್ಷರ ಗಾತ್ರ

ಕುಷ್ಟಗಿ: ಬಸ್‌ ಟಿಕೆಟ್‌ ತಪಾಸಣೆ ವೇಳೆ ತಪ್ಪು ಎಸಗಿದ್ದು ಕಂಡುಬಂದ ನಂತರ ಸಂಚಾರ ನಿರೀಕ್ಷಕರು ನೋಟಿಸ್‌ ನೀಡಿದ ಕಾರಣಕ್ಕೆ ಬೇಸರಗೊಂಡು ಜಾನುವಾರು ಜಂತುನಾಶಕ ಸೇವಿಸಿದ ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ ನಿರ್ವಾಹಕ ಸಂತೋಷ ಮಾಪದಾರ ಅವರು ಅಸ್ಪಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಘಟನೆ ವಿವರ: ಹಳಿಯಾಳ ಘಟಕಕ್ಕೆ ಸೇರಿದ ಬಸ್‌ ರಾಯಚೂರಿನಿಂದ ಪಟ್ಟಣದ ಮಾರ್ಗವಾಗಿ ದಾಂಡೇಲಿಗೆ ತೆರಳುತ್ತಿತ್ತು. ಪಟ್ಟಣ ಪ್ರವೇಶಿಸಿದ ತಕ್ಷಣ ಸಂಚಾರ ನಿರೀಕ್ಷಕರು ಟಿಕೆಟ್‌ ತಪಾಸಣೆ ನಡೆಸಿದರು. ಆದರೆ, ಟಿಕೆಟ್‌ ನೀಡುವ ಎಲೆಕ್ಟ್ರಾನಿಕ್‌ ಸ್ವಯಂ ಚಾಲಿತ ಯಂತ್ರ ಇದ್ದರೂ ಅದನ್ನು ಬಳಸದೆ ಅನಿವಾರ್ಯ ಸಂದರ್ಭದಲ್ಲಿ ಬಳಸುವ ಟಿಕೆಟ್‌ (ಮ್ಯಾನುವೆಲ್‌)ಗಳನ್ನು ನೀಡಿದ್ದು ಅನುಮಾನಕ್ಕೆ ಕಾರಣವಾಯಿತು.

ಈ ಬಗ್ಗೆ ವಿಚಾರಿಸಿದಾಗ ಯಂತ್ರ ಕೆಟ್ಟಿದ್ದು, ಘಟಕ ವ್ಯವಸ್ಥಾಪಕರ ಮಾರ್ಗದರ್ಶನದಂತೆ ಮ್ಯಾನುವಲ್‌ ಆಗಿ ಟಿಕೆಟ್‌ ನೀಡಲಾಗಿದೆ ಎಂದು ನಿರ್ವಾಹಕ ಹೇಳಿದ್ದಾರೆ. ಆದರೆ, ಅಧಿಕಾರಿಗಳು ಪರಿಶೀಲಿಸಿದಾಗ ಯಂತ್ರ ಸುಸ್ಥಿತಿಯಲ್ಲಿದ್ದುದು ಗೊತ್ತಾಯಿತು. ಹಾಗಾಗಿ ಸಂಚಾರ ನಿರೀಕ್ಷಕರು ನಿರ್ವಾಹಕನಿಗೆ ಕಾರಣ ಕೇಳಿ ನೋಟಿಸ್‌ ನೀಡಿದ್ದರು.

ನಂತರ ನಿರ್ವಾಹಕ ಜಂತುನಾಶಕ ಸೇವಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ವಿಚಾರಿಸಿದಾಗ, 'ಘಟಕ ವ್ಯವಸ್ಥಾಪಕರ ಪರವಾನಗಿ ಪಡೆದು ಮ್ಯಾನುವಲ್‌ ಟಿಕೆಟ್‌ ನೀಡಿರುವುದಾಗಿ ಹೇಳಿದರೂ ತನಗೆ ನೋಟಿಸ್‌ ನೀಡಿದ್ದಾರೆ. ಇದರಿಂದ ನೋವಾಗಿ ವಿಷ ಸೇವಿಸಿದೆ' ಎಂದು ನಿರ್ವಾಹಕ ಸಂತೋಷ ಹೇಳಿಕೆ ನೀಡಿದ್ದಾರೆ ಎಂದು ಸಾರಿಗೆ ಸಂಸ್ಥೆ ಮೂಲಗಳು ತಿಳಿಸಿದ್ದು, ಈ ಕುರಿತ ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರೀಕ್ಷಕರ ಹೇಳಿಕೆ: ಈ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಸಹಾಯಕ ಸಂಚಾರ ನಿರೀಕ್ಷಕ ರಾಘವೇಂದ್ರ ಪೋತಾ, ಸಂಚಾರ ನಿಯಂತ್ರಕ ಮಹಾಲಿಂಗಯ್ಯ ಗಣಾಚಾರಿ, ಟಿಕೆಟ್‌ ಯಂತ್ರ ಕೆಟ್ಟಿದ್ದರೆ ಕಡ್ಡಾಯವಾಗಿದ್ದರೂ ಓಪನಿಂಗ್‌ ಮತ್ತು ಕ್ಲೋಸಿಂಗ್‌ ಮಾಹಿತಿ ನಮೂದಿಸಿರಲಿಲ್ಲ. ಯಂತ್ರ ಸುಸ್ಥಿತಿಯಲ್ಲಿಯೇ ಇತ್ತು. ಮ್ಯಾನುವಲ್‌ ಟಿಕೆಟ್‌ ನೀಡಿ ಪ್ರಯಾಣಿಕರಿಂದ ಪಡೆದ ಹಣವನ್ನು ದುರ್ಬಳಕೆ ಮಾಡಿಕೊಳ್ಳುವ ಉದ್ದೇಶ ನಿರ್ವಾಹಕನದ್ದಾಗಿತ್ತು. ಕರ್ತವ್ಯದಲ್ಲಿ ಲೋಪ ಕಂಡುಬಂದಿದ್ದರಿಂದಲೇ ನೋಟಿಸ್‌ ನೀಡಲಾಗಿದೆ ಎಂದು ಹೇಳಿದರು.

ಅದೇ ರೀತಿ ಈ ಹಿಂದೆ ಹಣ ದುರ್ಬಳಕೆಗೆ ಸಂಬಂಧಿಸಿದಂತೆ ಈ ನಿರ್ವಾಹಕ ವಜಾಗೊಂಡಿದ್ದ ಎಂದು ವಿವರಿಸಿದರು.

ಈ ಮಧ್ಯೆ ಬಸ್‌ ಅನ್ನು ಕುಷ್ಟಗಿ ಘಟಕಕ್ಕೆ ತೆಗೆದುಕೊಂಡು ಹೋದ ಕೆಲ ಹೊತ್ತಿನಲ್ಲಿಯೇ ನಿರ್ವಾಹಕ ಸೇವಿಸಿದ ಜಂತುನಾಶಕ ಬಾಟಲಿ ಹೇಗೆ ಬಂತು ಎಂಬುದಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ಸಾರಿಗೆ ಅಧಿಕಾರಿಗಳು, ತಪ್ಪು ಮುಚ್ಚಿಕೊಳ್ಳಲು ನಿರ್ವಾಹಕ ಈ ರೀತಿ ನಾಟಕವಾಡಿರಬಹುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT