ಕುಷ್ಟಗಿ: ಮೊಹರಂನ ಖತಲ್ ರಾತ್ ದಿನದಂದು ಅಲಾಯಿ ದೇವರು ಸವಾರಿ ಹೊರಟ ವೇಳೆ ಮಕ್ಕಳ ಫಲ ಕೇಳಲು ಹೋಗಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ಅಟ್ಟಾಡಿಸಿ ಹೊಡೆದ ಘಟನೆ ತಾಲ್ಲೂಕಿನ ಹೂಲಗೇರಿ ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ನಾಗರತ್ನ ಯಮನೂರಪ್ಪ ನಾಯಕ ಎಂಬುವವರು ಭಾನುವಾರ ಸಂಜೆ ನೀಡಿದ ದೂರಿನ ಅನ್ವಯ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಮಂಜುನಾಥ ಹಾಬಲಕಟ್ಟಿ, ಮಲ್ಲಿಕಾರ್ಜುನ ಬೂದಿಹಾಳ ಎಂಬುವವರ ವಿರುದ್ಧ ಜಾತಿ ನಿಂದನೆ, ಮಾನಭಂಗ, ಕೊಲೆ ಬೆದರಿಕೆ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಘಟನೆ ವಿವರ: ಗ್ರಾಮದಲ್ಲಿ ಮೊಹರಂ ನಿಮಿತ್ತ ಅಲಾಯಿ ದೇವರಗಳನ್ನು ಕೂರಿಸಲಾಗಿದ್ದು ಶನಿವಾರ ಬೆಳಗಿನ ಜಾವ ಗ್ರಾಮದ ಓಣಿಗಳಲ್ಲಿ ದೇವರುಗಳ ಸವಾರಿ ಹೊರಟಿತ್ತು. ಆ ಸಂದರ್ಭದಲ್ಲಿ ದೇವರಿಗೆ ಹರಕೆ ಹೊತ್ತಿದ್ದ ನಾಗರತ್ಮ ಮಕ್ಕಳ ಫಲಕ್ಕೆ ಸಂಬಂಧಿಸಿದಂತೆ ಮನದ ಇಂಗಿತ ವ್ಯಕ್ತಪಡಿಸಲು ಅಲಾಯಿ ದೇವರ ಬಳಿ ಬಂದಿದ್ದಾರೆ.
ಈ ಸಂದರ್ಭದಲ್ಲಿ ಅಲಾಯಿ ದೇವರ ಪಕ್ಕದಲ್ಲಿದ್ದ ನಿಂತಿದ್ದ ಮಂಜುನಾಥ, ಅಲಾಯಿ ದೇವರನ್ನು ಹಿಡಿದಿದ್ದ ವ್ಯಕ್ತಿಯ ಕೈಯಲ್ಲಿದ್ದ ನವಿಲುಗರಿ ಗುಚ್ಛ ಕಸಿದುಕೊಂಡು ಏಕಾಏಕಿ ಹೊಡೆದು ಎಳೆದಾಡಿದ್ದಾನೆ. ಪಕ್ಕದಲ್ಲಿದ್ದ ಇನ್ನೊಬ್ಬ ಮಲ್ಲಿಕಾರ್ಜುನ ಹಲ್ಲೆ ನಡೆಸಲು ಕುಮ್ಮಕ್ಕು ನೀಡಿದ್ದಾನೆ. ಮಹಿಳೆ ಓಡಿ ಹೋದರೂ ಬೆನ್ನುಹತ್ತಿ ಮನಬಂದಂತೆ ನವಿಲುಗರಿಯಿಂದ ಹೊಡೆಯುತ್ತಿದ್ದುದನ್ನು ಗಮನಿಸಿದ ಸುತ್ತಲಿನ ಜನ ತಡೆದಿದ್ದಾರೆ.
ಹಲ್ಲೆಯಿಂದ ಗಾಯಗೊಂಡಿದ್ದ ಮಹಿಳೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ತನಗೆ ಒಂದು ಹೆಣ್ಣು ಮಗು ಇದ್ದು ಮಕ್ಕಳ ಫಲ ಕೇಳಲು ಅಲಾಯಿ ದೇವರ ಬಳಿ ಹೋದಾಗ ಈ ಘಟನೆ ನಡೆದಿದೆ ಎಂಬುದನ್ನು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.