ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಇಎಸ್‌ಐ ಆಸ್ಪತ್ರೆ ಸಿಬ್ಬಂದಿ ಕಿತ್ತಾಟ; ರೋಗಿಗಳಿಗೆ ಪ್ರಾಣಸಂಕಟ

ಇಎಸ್‌ಐ ಆಸ್ಪತ್ರೆ ಅವ್ಯವಸ್ಥೆ, ಅಸಹಕಾರದ ನಡೆಗೆ ರೋಗಿಗಳು ಹೈರಾಣು
Last Updated 18 ಆಗಸ್ಟ್ 2022, 2:59 IST
ಅಕ್ಷರ ಗಾತ್ರ

ಕೊಪ್ಪಳ: ಸಿಬ್ಬಂದಿ ಕೊರತೆ ಹಾಗೂ ‍ಪರಸ್ಪರ ಕಿತ್ತಾಟದಿಂದ ನಲುಗಿ ಹೋಗಿರುವ ಇಲ್ಲಿನರಾಜ್ಯ ಕಾರ್ಮಿಕ ವಿಮಾ ಚಿಕಿತ್ಸಾಲಯಕ್ಕೆ (ಇಎಸ್‌ಐ) ಬರುವ ರೋಗಿಗಳು ಚಿಕಿತ್ಸೆಗಾಗಿ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಕೆಲ ರೋಗಿಗಳು ಅನಿವಾರ್ಯವಾಗಿ ಬೇರೆ ಕಡೆ ಹೋಗುತ್ತಿದ್ದಾರೆ. ಆಸ್ಪತ್ರೆಯ ವಿಮಾ ವೈದ್ಯಾಧಿಕಾರಿ ಮಧುಮತಿ ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಶುಶ್ರೂಷಕಿ ಶಾರವ್ವ ಗದ್ದಿ ನಡುವಿನ ಜಟಾಪಟಿ ರೋಗಿಗಳ ಚಿಕಿತ್ಸೆಯ ಮೇಲೆ ಪರಿಣಾಮ ಬೀರುತ್ತಿದೆ.

ಆಸ್ಪತ್ರೆಗೆ ಮಂಜೂರಾದ ಒಟ್ಟು ಎರಡು ವಿಮಾ ವೈದ್ಯಾಧಿಕಾರಿ ಹುದ್ದೆಯಲ್ಲಿ ಒಬ್ಬರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಸ್ಟಾಫ್‌ ನರ್ಸ್‌ ಎರಡು ಹುದ್ದೆ ಮುಂಜೂರಾಗಿದ್ದು ಒಬ್ಬರು ಮಾತ್ರ ಇದ್ದಾರೆ. ನಿತ್ಯ 60ರಿಂದ 70 ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ.

ಶುಶ್ರೂಷಕ ಹುದ್ದೆಯಲ್ಲಿ ಎರಡು ವರ್ಷಗಳಿಂದ ಒಬ್ಬರೇ ಕೆಲಸ ಮಾಡುತ್ತಿದ್ದಾರೆ. ಮೊದಲು ಇಬ್ಬರಿದ್ದ ಫಾರ್ಮಾಸಿಸ್ಟ್‌ ಈಗ ಒಬ್ಬರು ಮಾತ್ರ ಇದ್ದಾರೆ. ಮಾತ್ರೆ ಹಾಗೂ ಇನ್ನಿತರ ಸೌಲಭ್ಯಗಳು ಬೇಕಾದಲ್ಲಿ ಇಲ್ಲಿನ ಸಿಬ್ಬಂದಿ ವಿಭಾಗೀಯ ಕಚೇರಿ ಹುಬ್ಬಳ್ಳಿಗೆ ಹೋಗಬೇಕಾಗುತ್ತದೆ.

ಆಸ್ಪತ್ರೆ ಸಿಬ್ಬಂದಿ ಯಾರಿಗೂ ಹೇಳದೆ ಕರ್ತವ್ಯದ ಸಮಯದಲ್ಲಿ ಹೊರಗೆ ಹೋಗುತ್ತಾರೆ. ಇದರಿಂದಾಗಿ ದೂರದ ಊರುಗಳಿಂದ ಬರುವ ರೋಗಿಗಳು ತೊಂದರೆ ಅನುಭವಿಸುತ್ತಾರೆ. ಗರ್ಭಿಣಿ, ವಯಸ್ಸಾದವರು ಮತ್ತು ಮಕ್ಕಳನ್ನು ಇಎಎಸ್‌ಐ ಆಸ್ಪತ್ರೆಗೆ ಬಂದರೆ ದಿನಗಟ್ಟಲೆ ಕಾಯುವುದದು ತಪ್ಪುವುದಿಲ್ಲ ಎಂದು ರೋಗಿಗಳು ದೂರುತ್ತಾರೆ.

ಆಸ್ಪತ್ರೆ ಸಿಬ್ಬಂದಿ ನಡೆಯಿಂದ ಬೇಸತ್ತ ಹಲವು ರೋಗಿಗಳ ಕಡೆಯವರು ಮಂಗಳವಾರ ಆಸ್ಪತ್ರೆಯ ಬಾಗಿಲು ಹಾಕುವ ಯತ್ನ ಸಹ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ದಿನನಿತ್ಯದ ಕೆಲಸ ಬಿಟ್ಟು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ ನನ್ನ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇನೆ. ಬೆಳಿಗ್ಗೆಯಿಂದ ಕಾದರೂ ವೈದ್ಯರು ಬಂದಿಲ್ಲ. ಹಿಂದೆಯೂ ಇದೇ ರೀತಿಯ ಸಮಸ್ಯೆಯಾಗಿತ್ತು’ಎಂದು ಕಾರ್ಮಿಕ ಮೆಹಬೂಬ್ ಪಾಷಾ ಬೇಸರ ವ್ಯಕ್ತಪಡಿಸಿದರು.

'ನಮ್ಮ ಕುಟುಂಬಕ್ಕೆ ಆರೋಗ್ಯ ರಕ್ಷಣೆ ಒದಗಿಸಲೆಂದೇ ಇಎಸ್‌ಐಗೆ ಹಣ ಕಟ್ಟುತ್ತೇವೆ. ಇಲ್ಲಿ ನೋಡಿದರೆ ಚಿಕಿತ್ಸೆಯೇ ಸರಿಯಾಗಿ ಸಿಗುತ್ತಿಲ್ಲ. ಚಿಕಿತ್ಸೆ ಸಿಕ್ಕರೂ ಅಗತ್ಯ ಔಷಧಿಯಿಲ್ಲ. ಸಿಬ್ಬಂದಿಯ ಆಂತರಿಕ ಕಿತ್ತಾಟದಿಂದ ರೋಗಿಗಳು ಪರದಾಡುವಂತಾಗಿದೆ’ ಎಂದು ಫಾರೂಕ್‌ ಎಂಬುವರು ಆಕ್ರೋಶ ವ್ಯಕ್ತಪಡಿಸಿದರು.

‘ಸಿಬ್ಬಂದಿ ನೇಮಕಕ್ಕೆ ನಿರ್ದೇಶಕರಿಗೆ ಪತ್ರ’

ಕೊಪ್ಪಳ: ಅಗತ್ಯವಿರುವ ಸಿಬ್ಬಂದಿ ನೇಮಕ ಮಾಡಬೇಕು ಎಂದು ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದೇನೆ ಎಂದು ಇಎಸ್‌ಇ ಆಸ್ಪತ್ರೆಯ ಹುಬ್ಬಳ್ಳಿ ವಿಭಾಗದ ಸೂಪರಿಂಟೆಂಡೆಂಟ್ಯೂನಿಸ್‌ ನಜ್ಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕೊಪ್ಪಳದ ಸಿಬ್ಬಂದಿಗೆ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು ಎಂದು ಹಿಂದೆಯೇ ಸೂಚಿಸಿದ್ದೇನೆ.ಆದರೂ ಅವರು ಅರ್ಥ ಮಾಡಿಕೊಂಡಿಲ್ಲ. ಅಲ್ಲಿ ಮಂಗಳವಾರ ನಡೆದ ಘಟನೆ ಬಗ್ಗೆ ದೂರು ಬಂದಿದೆ. ಅದನ್ನು ನಿರ್ದೇಶಕರಿಗೆ ಕಳುಹಿಸಿ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸಲಾಗುವುದು‘ ಎಂದರು.

ಪೂರ್ಣ ಪ್ರಮಾಣದಲ್ಲಿ ಕಾಯಂ ಸಿಬ್ಬಂದಿ ಇಲ್ಲದ ಕಾರಣ ಸಮಸ್ಯೆಯಾಗುತ್ತಿದೆ. ರೋಗಿಗಳಿಗೆ ತೊಂದರೆಯಾಗದಂತೆ ಕೆಲಸ ಮಾಡುತ್ತಿದ್ದೇವೆ.
ಡಾ. ಮಧುಮತಿ,ವಿಮಾ ವೈದ್ಯಾಧಿಕಾರಿ, ಕೊಪ್ಪಳ

ಫಾರ್ಮಾಸಿಸ್ಟ್‌ ಕೆಲಸಕ್ಕೆ ನಿಯೋಜಿಸಿದಾಗಲೆಲ್ಲ ಲಿಖಿತವಾಗಿ ಪತ್ರ ಕೊಡು ಎಂದರೂ ಕೊಡುತ್ತಿಲ್ಲ. ಮಾತ್ರೆಯಿಂದ ರೋಗಿಗಳಿಗೆ ತೊಂದರೆಯಾದರೆ ಯಾರು ಹೊಣೆ.
ಶಾರವ್ವ ಗದ್ದಿ.ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಶುಶ್ರೂಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT