ಸೂರ್ಯೋದಯಕ್ಕೂ ಮೊದಲು ಕೊಪ್ಪಳದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದತ್ತ ಕಣ್ಣು ಹಾಯಿಸಿದರೆ ಸಾಕು; ಅಲ್ಲಿ ಸೇರುವ ನೂರಾರು ಜನ ಕೂಲಿಕಾರ್ಮಿಕರು, ಅವರು ಉಟ್ಟ ಲುಂಗಿ, ಮಾಸಿದ ಅಂಗಿ, ಕೈಯಲ್ಲಿ ಚೀಲ, ಪಿಕಾಸಿ, ಕೆಲಸಕ್ಕಾಗಿ ಹಂಬಲಿಸುವ ನಿರೀಕ್ಷೆಯ ಕಣ್ಣುಗಳು, ಅವುಗಳ ಹಿಂದಿನ ವೇದನೆಗಳು, ಕಬ್ಬಿಣದ ಸುತ್ತಿಗೆ, ತಲೆಯ ಮೇಲೊಂದು ಟವಲ್ ಸುತ್ತಿಕೊಂಡು ದುಡಿಮೆಗಾಗಿ ಹಾಗೂ ಅಂದಿನ ಅನ್ನಕ್ಕಾಗಿ ಆಸೆಗಣ್ಣಿನಿಂದ ಕಾಯುವ ಚಿತ್ರಣ ಕಣ್ಣೆದುರು ಬರುತ್ತದೆ. ಗಡಿಯಾರ ಕಂಬ ಹಾಗೂ ಭಾಗ್ಯನಗರದ ಪಟ್ಟಣ ಪಂಚಾಯಿತಿಯ ಮುಂಭಾಗದಲ್ಲಿಯೂ ಇಂಥದ್ದೇ ಚಿತ್ರಣ...

ಆ ಕಾರ್ಮಿಕರಲ್ಲಿ ಬಹುತೇಕರು ಶಾಲೆಯ ಮುಖವನ್ನೇ ನೋಡಿಲ್ಲ. ಚೆಂದದ ನಾಳೆಗಾಗಿಯೊ, ಭವಿಷ್ಯದಲ್ಲಿ ಆಸ್ತಿ ಮಾಡಬೇಕು ಎನ್ನುವ ಆಸೆ ಅವರಲ್ಲಿಲ್ಲ. ಹೊಟ್ಟೆ ಹೊರೆಯಲು ಅಂದು ಕೂಲಿ ಕೆಲಸ ಸಿಕ್ಕರೆ ಸಾಕು ಎನ್ನುವ ಸಣ್ಣ ನಿರೀಕ್ಷೆಯಷ್ಟೇ.

ಕೊಪ್ಪಳದ ಈ ಮೂರು ಸ್ಥಳಗಳಲ್ಲಿ ಕಾರ್ಮಿಕರು ಸೇರುವುದು ಆರಂಭವಾಗುತ್ತದೆ. ರಭಸದಿಂದ ಸಾಗುವ ವಾಹನಗಳ ನಡುವೆ ರಸ್ತೆ ಮೇಲೆ ನಿಂತು ಉದ್ಯೋಗದಾತರ ನಿರೀಕ್ಷೆಯಲ್ಲಿ ಇರುತ್ತಾರೆ. ಕೂಲಿ ಕೆಲಸವನ್ನೂ ಅತ್ಯಂತ ಗೌರವಯುತವಾಗಿ ಮಾಡಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಹಂಬಲ ಅವರದ್ದು.

ಅನಿಶ್ಚಿತತೆಯ ಬದುಕಿನ ನಡುವೆಯೂ ಅವರದ್ದು ಇಂದಿಗೆ ಕೆಲಸ ಸಿಕ್ಕರೆ ತಮ್ಮನ್ನು ನಂಬಿಕೊಂಡವರ ಹೊಟ್ಟೆ ತುಂಬಿಸಬಹುದು ಎನ್ನುವ ಆಸೆ. ಕುಟುಂಬದವರನ್ನು ಸಾಕಲು, ಅವರನ್ನು ಖುಷಿ ಪಡಿಸಲು ಮಳೆ, ಬಿಸಿಲು, ಹಗಲಿರುಳು ಎನ್ನದೇ ಕೆಲಸ ಮಾಡುತ್ತಾರೆ. ಅವರ ನಿರೀಕ್ಷೆ, ಕನಸುಗಳೆಲ್ಲವೂ ಉತ್ತಮ ಜೀವನಮಟ್ಟ, ಘನತೆಯ ಬದುಕು, ಮಕ್ಕಳ ಶಿಕ್ಷಣ, ಸಾಮಾಜಿಕ ಭದ್ರತೆಯ ಸುತ್ತಲೇ ಗಿರಕಿಹೊಡೆಯುತ್ತವೆ. ಕಠಿಣ ದುಡಿಮೆಯ ನಡುವೆಯೂ ಸ್ವಂತ ಸೂರು, ಉತ್ತಮ ಆರೋಗ್ಯ, ಮತ್ತು ಗೌರವಯುತ ಬದುಕಿಗಾಗಿ ಅವರದ್ದು ನಿತ್ಯ ಹೋರಾಟ. ಇದಕ್ಕಾಗಿ ಎಲ್ಲ ನೋವುಗಳನ್ನು ಸಹಿಸಿಕೊಳ್ಳುತ್ತಾರೆ.

ತಮ್ಮೂರಿನಲ್ಲಿ ನಿತ್ಯ ಕೆಲಸ ಸಿಗದ ಕಾರಣಕ್ಕೆ ಇವರು ತಮಗೆ ಸಿಗುವ ಯಾವ ಕೆಲಸವನ್ನಾದರೂ, ಎಲ್ಲಿಯಾದರೂ ಮಾಡುವುದನ್ನು ಕಲಿತುಕೊಂಡಿದ್ದಾರೆ. ಅನ್ನದ ಅನಿವಾರ್ಯತೆ ಅವರನ್ನು ಸಿಮೆಂಟ್ ಮಿಶ್ರಣ, ಗೋಡೆ ಕಟ್ಟುವುದು, ಕಬ್ಬಿಣದ ಕಂಬಿಗಳನ್ನು ಕಟ್ಟುವುದು, ಕಾಂಕ್ರೀಟ್ ಹಾಕುವುದು, ಪೇಂಟಿಂಗ್, ಪ್ಲಂಬಿಂಗ್, ವಿದ್ಯುತ್ ವೈರಿಂಗ್, ವಿದ್ಯುತ್ ಉಪಕರಣಗಳ ಅಳವಡಿಕೆ, ಕುಡಿಯುವ ನೀರಿನ ಟ್ಯಾಂಕರ್ ಸ್ವಚ್ಛಗೊಳಿಸುವುದು, ಮನೆಯ ಸುತ್ತಲಿನ ಸ್ಥಳದಲ್ಲಿ ಕಸ ವಿಲೇವಾರಿ, ಚರಂಡಿ ಸ್ವಚ್ಛ ಮಾಡುವುದು...ಹೀಗೆ ‘ಆಲ್ರೌಂಡರ್’ಗಳನ್ನಾಗಿ ರೂಪಿಸಿದೆ.

ಮೂರು ದಶಕಗಳಿಂದ ಕೆಲಸ ಒದಗಿಸುವ ತಾಣವಾಗಿರುವ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತವನ್ನು ಕೊಪ್ಪಳದ ಜನ ‘ಲೇಬರ್ ಸರ್ಕಲ್’ ಎಂದೇ ಕರೆಯುತ್ತಾರೆ. ಈ ಸ್ಥಳಗಳಿಗೆ ಹೋದರೆ ಸಾಕು ಗುತ್ತಿಗೆದಾರರ ಬೇಡಿಕೆಗೆ ಅನುಗುಣವಾಗಿ ಮನೆ ನಿರ್ಮಾಣ, ಸ್ವಚ್ಛತೆಯ ಕೆಲಸ ಮಾಡುವ ಕಾರ್ಮಿಕರು ಸಿಕ್ಕೇ ಸಿಗುತ್ತಾರೆ ಎನ್ನುವ ಭರವಸೆ ಜನರದ್ದು ಕೂಡ ಆಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ತಮ್ಮನ್ನೇ ನಂಬಿಕೊಂಡ ಮಕ್ಕಳ ಕಣ್ಣಿನಲ್ಲಿ ಖುಷಿ ಕಾಣುವಂತೆ ಮಾಡಲು ಕಾರ್ಮಿಕರು ಬೆವರು ಸುರಿಸುತ್ತಾರೆ. ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಬರುವಾಗ ಅಪ್ಪ–ಅವ್ವ ತಮಗಾಗಿ ತಿನ್ನಲು ತರುತ್ತಾರೆ ಎನ್ನುವ ಆಸೆಗಣ್ಣುಗಳಿಂದ ಕಾಯುತ್ತಿರುವ ಮಕ್ಕಳಿಗಾಗಿ ಕಾರ್ಮಿಕರು ದೈಹಿಕವಾಗಿ ಕಷ್ಟವಾಗುವ ಎಲ್ಲ ಕೆಲಸವನ್ನೂ ಮಾಡಲು ಸಿದ್ಧರಾಗಿಯೇ ಬಂದಿರುತ್ತಾರೆ. ಅನಕ್ಷರಸ್ಥರಾದರೂ ಬದುಕಿನ ಸಂಕಟಕ್ಕೆ ಕೆಲಸ ಕೊಡುವ ಮಾಲೀಕನನ್ನು ಒಲಿಸಿಕೊಳ್ಳುವ ಅವರ ಜಾಣ್ಮೆಯೇ ಸೋಜಿಗ.

ಬೆಳಗಿನ ಜಾವ ಬೈಕ್ ಅಥವಾ ಕಾರು ಹತ್ತಿಕೊಂಡು ಲೇಬರ್ ಸರ್ಕಲ್ ಬಳಿ ಹೋದರೆ ಸಾಕು, ‘ನಡ್ರೀ ಸರ್ರ ಹೋಗೋಣ, ಬೇಗ ನಿಮ್ಮ ಮನಿ ತೋರುಸ್ರಿ, ಏನ್ ಕೆಲಸ ಐತಿ ಬಡಬಡ ಮಾಡಿ ಮುಗಿಸ್ತೀನ್ರಿ...’ ಎಂದು ಒಂದೇ ಉಸಿರಿನಲ್ಲಿ ಹೇಳುವ ಕಾರ್ಮಿಕರು ನಮ್ಮ ಅನುಮತಿಯನ್ನೂ ಕೇಳದೆ ವಾಹನವೇರಿ ಕುಳಿತುಕೊಂಡು ವೇಗವಾಗಿ ಮುಂದಕ್ಕೆ ಹೋಗುವಂತೆ ಆಜ್ಞಾಪಿಸುತ್ತಾರೆ. ಮತ್ತೆ ಯಾರಾದರೂ ತಮ್ಮ ಕೆಲಸ ಕಸಿದುಕೊಂಡಾರು ಎನ್ನುವ ಆತಂಕ ಅವರದ್ದು. ಅಷ್ಟರಲ್ಲಿಯೇ ನೂರಾರು ಕಾರ್ಮಿಕರ ಪೈಕಿ ಹತ್ತಾರು ಜನ ಕ್ಷಣಾರ್ಧದಲ್ಲಿ ಓಡೋಡಿ ಬಂದು ಸುತ್ತುವರಿಯುತ್ತಾರೆ. ಅದರಲ್ಲೊಬ್ಬ ‘ಸಾಹೇಬ್ರು ಮೊದಲಿನಿಂದಲೂ ನಂಗೆ ಪರಿಚಯದವ್ರು, ಅವರ ಮನೀ ಕೆಲ್ಸ ಕಾಯಂ ಆಗಿ ನಾನೇ ಮಾಡೋದು, ಹೌದಲ್ಲೇನ್ರಿ’ ಎಂದು ಮಾಲೀಕನತ್ತ ನೋಡಿದವನೇ ಕಣ್ಣು ಮಿಟುಕಿಸಿ ಕೆಲಸ ಗಿಟ್ಟಿಸಿಕೊಳ್ಳುವ ಕಸರತ್ತು ಮಾಡುತ್ತಾನೆ. ಕೆಲಸಕ್ಕಾಗಿನ ಪೈಪೋಟಿ ಗಮನಿಸುವ ಹಲವರ ನಡುವೆಯೇ ನುಸಳುವ ಇನ್ನಷ್ಟು ಜನ ‘ಇವತ್ತಿನ ಕೆಲಸಕ್ಕೆ ನಾನ್ ಬರ್ತೀನ್ರೀ, ಬಹಳ ಚೊಲೊ ಕೆಲ್ಸ ಮಾಡ್ತೀನ್ರಿ...’ ಎನ್ನುತ್ತಾರೆ. ಇದೆಲ್ಲವೂ ಕಾರ್ಮಿಕರು ತಮ್ಮ ಅಂದಿನ ದುಡಿಮೆ ಗಿಟ್ಟಿಸಿಕೊಳ್ಳಲು ಮಾಡುವ ಕಸರತ್ತುಗಳು.

ಯುವಕರು, ಮಧ್ಯವಯಸ್ಕರು ಹಾಗೂ ಅನೇಕ ಮಹಿಳೆಯರು ಕೆಲಸದ ಆಸೆ ಇಟ್ಟುಕೊಂಡು ಒಂದೆಡೆ ಸೇರುತ್ತಾರೆ. ಕೆಲವರು ಒಂದೇ ಊರಿನಿಂದ ಏಳೆಂಟು ಜನರ ತಂಡ ಕಟ್ಟಿಕೊಂಡು ಬಂದರೆ, ಕೆಲವರು ಇಬ್ಬರು, ಮೂವರು ಮಾತ್ರ ಜೊತೆಯಾಗಿ ಬರುತ್ತಾರೆ.

ಎಲ್ಲ ಕೆಲಸ ಮಾಡಲು ಅವರು ಸಿದ್ಧರಿದ್ದರೂ ಬಹುತೇಕರಿಗೆ ಕಟ್ಟಡ ಕಟ್ಟುವ ಕೆಲಸಗಾರರಿಗೆ ಸಹಾಯಕರಾಗುವ ಕೆಲಸ ಸಿಗುತ್ತದೆ.

ಮೂರು ದಶಕಗಳಿಂದ ಕೊಪ್ಪಳದ ಅಪಾರ ಕಾರ್ಮಿಕರಿಗೆ ಕೆಲಸ ಒದಗಿಸಲು ವೇದಿಕೆಯಾಗಿರುವ ಮೂರು ವೃತ್ತಗಳು ತನ್ನ ಒಡಲಿಲ್ಲ ಕಾರ್ಮಿಕರ ನೋವಿನ ಕಥನಗಳನ್ನು ಇಟ್ಟುಕೊಂಡಿವೆ. ಕೊಪ್ಪಳದ ಜನರಿಗೆ ತಮ್ಮ ಮನೆ ಕೆಲಸಗಳನ್ನು ಮಾಡಿಕೊಳ್ಳಲು ಹಾಗೂ ಗುತ್ತಿಗೆದಾರರಿಗೆ ಕಾರ್ಮಿಕರನ್ನು ಸುಲಭವಾಗಿ ಕರೆದುಕೊಂಡು ಹೋಗಲು ಈ ವೃತ್ತ ಎಲ್ಲರಿಗೂ ಕೇಂದ್ರಬಿಂದು.

ಕೆಲಸಕ್ಕಾಗಿ ಹಂಬಲಿಸುವ ಕಾರ್ಮಿಕರಿಗೆ ತಮ್ಮೂರಿನಲ್ಲಿಯೇ ಕೆಲಸಗಳು ಸಿಗುವುದು ಕಡಿಮೆ. ಕೃಷಿ ಚಟುವಟಿಕೆಯ ಋತು ಆರಂಭವಾದಾಗ ಒಂದಷ್ಟು ಜನ ಹೊಲಗಳಿಗೆ ಹೋಗುತ್ತಾರೆ. ಕೆಲಸ ಹುಡುಕಿಕೊಂಡು ಬರುವ ಕಾರ್ಮಿಕರಲ್ಲಿ ಹಲವರಿಗೆ ಹೊಲಗಳಿವೆ. ಈಗ ನೀರಿನ ಕೊರತೆಯಿರುವ ಕಾರಣ ಕೃಷಿಯಿಂದ ಕೈ ಸುಟ್ಟುಕೊಳ್ಳುವುದು ಬೇಡವೆಂದು ಕೆಲಸ ಅರಿಸಿಕೊಂಡು ಜಿಲ್ಲಾಕೇಂದ್ರಕ್ಕೆ ಬರುತ್ತಾರೆ. ಮಳೆಗಾಲ ಆರಂಭವಾದರೆ ಒಂದಷ್ಟು ಕಾರ್ಮಿಕರು ಹೊಲಗಳ ಕೆಲಸದಲ್ಲಿ ತೊಡಗಿಕೊಂಡರೆ, ಬಹಳಷ್ಟು ಜನ ಅನ್ನ ಅರಿಸಿ ಕೊಪ್ಪಳಕ್ಕೆ ಬಂದು ದಿನದ ದುಡಿಮೆ ಸಿಗುವ ಆಸೆಯಿಂದ ಕಾಯುತ್ತಾರೆ.

ಬೇರೆ ಊರುಗಳಿಂದ ಬರುವ ಕಾರ್ಮಿಕರು ಸಂಜೆಯಾಗುತ್ತಿದ್ದಂತೆ ತಮ್ಮೂರಿಗೆ ವಾಪಸ್ ಹೋಗಿ ಮರುದಿನ ಮತ್ತೆ ಕೆಲಸ ಸಿಗುವ ಸ್ಥಳಗಳಿಗೆ ಬರುವವರು ಒಂದಷ್ಟು ಜನರಾದರೆ, ಇನ್ನಷ್ಟು ಜನ ನಗರದಲ್ಲಿ ಎಲ್ಲೆಂದರಲ್ಲಿ ಮಲಗಿ ಮತ್ತೆ ಕೆಲಸ ದೊರೆತ ಕೂಲಿ ಹಣದಲ್ಲಿ ತುಸು ಉಳಿಸಿಕೊಂಡು ವಾರಕ್ಕೊಂದು ಬಾರಿ ತಮ್ಮೂರಿಗೆ ಹೋಗಿ ಬರುವವರೂ ಇದ್ದಾರೆ. ಹೊಟ್ಟೆಗೆ ಹಿಟ್ಟೇ ಬೇಗ ಸಿಗುವುದಿಲ್ಲ. ಇನ್ನು ಶುಚಿಯಾದ ಬಟ್ಟೆಗಳು ಗಗನ ಕುಸುಮ.

ಕೊಪ್ಪಳ ಸಮೀಪದ ಲಕಮಾಪುರದ ಮಧ್ಯವಯಸ್ಕ ಮಲ್ಲಪ್ಪ ಎರಡೂವರೆ ದಶಕಗಳಿಂದ ಲೇಬರ್ ವೃತ್ತಕ್ಕೆ ಬಂದು ನಿತ್ಯ ಕೆಲಸ ಹುಡುಕಿಕೊಳ್ಳುತ್ತಿದ್ದಾರೆ. ಮೊದಲು ತಮ್ಮೂರಿನಲ್ಲಿ ಹೊಲದ ಕೆಲಸ ಮಾಡಿಕೊಂಡಿದ್ದ ಅವರಿಗೆ ಈಗ ಇದ್ದೂರಿನಲ್ಲಿಯೇ ಕೆಲಸ ಸಿಗುತ್ತಿಲ್ಲ. ಸಾಕಷ್ಟು ಪ್ರಮಾಣದಲ್ಲಿದ್ದ ಹೊಲಗಳು ನಿವೇಶನಗಳಾಗಿ ಬದಲಾಗಿವೆ.

‘ಕೊಪ್ಪಳಕ್ಕೆ ಬಂದರೆ ಕೆಲಸ ನಿಶ್ಚಿತ ಎನ್ನುವ ಕಾರಣಕ್ಕಾಗಿ ನಿತ್ಯ ಬರುತ್ತೇನೆ. ಕೆಲಸ ಕೊಟ್ಟವರು ಸಂಜೆಯಾದ ಬಳಿಕ ಕೂಲಿ ಹಣ ನೀಡಲು ಸತಾಯಿಸುತ್ತಾರೆ. ಮೊದಲೇ ಮಾತನಾಡಿದಷ್ಟು ಕೊಡುವುದಿಲ್ಲ, ಮೂರ್ನಾಲ್ಕು ದಿನ ಬಿಟ್ಟು ಬಂದು ಕೂಲಿ ಕೊಡುತ್ತೇವೆ ಎಂದು ಹೇಳುತ್ತಾರೆ. ನಮಗೆ ಮತ್ತೆ ಕೆಲಸ ಬೇಕು; ಹೀಗಾಗಿ ಹೆಚ್ಚು ಒತ್ತಡ ಹೇರುವಂತೆಯೂ ಇಲ್ಲ. ಹಣ ಕೊಟ್ಟಾಗ ತೆಗೆದುಕೊಂಡು ಹೋಗಬೇಕು, ಅನೇಕ ಬಾರಿ ಹಣದ ಕೊರತೆಯಿಂದಾಗಿ ಊರಿಗೆ ನಡೆದುಕೊಂಡೇ ಹೋಗಿದ್ದೇನೆ’ ಎಂದು ತಮ್ಮ ಕಷ್ಟಗಳನ್ನು ಮಲ್ಲಪ್ಪ ಹಂಚಿಕೊಂಡರು.

ನಿತ್ಯ ಕಷ್ಟಗಳನ್ನು ಎದುರಿಸುವ ಕಾರ್ಮಿಕರಿಗೆ ವಾರದಲ್ಲಿ ಎರಡು ಖುಷಿಯ ದಿನಗಳೂ ಬರುತ್ತವೆ ಎನ್ನುವುದು ವಿಶೇಷ. ಪ್ರತಿದಿನವೂ ನೂರಾರು ಸಂಖ್ಯೆಯಲ್ಲಿ ಸೇರುವ ಕಾರ್ಮಿಕರು ಮಂಗಳವಾರ ಹಾಗೂ ಶುಕ್ರವಾರದ ದಿನಗಳಂದು ತುಸು ಕಡಿಮೆ ಪ್ರಮಾಣದಲ್ಲಿರುತ್ತಾರೆ. ಈ ಎರಡೂ ದಿನಗಳಂದು ಕೊಪ್ಪಳದ ಸಮೀಪದಲ್ಲಿರುವ ಹುಲಿಗಿಯ ಹುಲಿಗೆಮ್ಮ ದೇವಿಯ ದರ್ಶನ ಪಡೆಯುವ ಸಂಬಂಧಿಕರು, ಸ್ನೇಹಿತರು, ಪರಿಚಯದವರು ಹಾಗೂ ತಮ್ಮೂರಿನವರು ಮಾಡಿಸುವ ಬ್ಯಾಟಿ (ಮಾಂಸದೂಟ) ಸವಿಯಲು ಹೋಗುತ್ತಾರೆ.

ದೇವಿಯ ವಾರದ ದಿನಗಳಂದು ಹುಲಿಗಿಯಲ್ಲಿ ಸೇರುವ ಕಾರ್ಮಿಕರು ಅಲ್ಲಿಯೇ ತುಂಗಭದ್ರಾ ನದಿಯಲ್ಲಿ ಮಿಂದು, ದೇವಿಯ ದರ್ಶನ ಪಡೆದು ಬಂಧುಗಳು, ಸ್ನೇಹಿತರ ಜೊತೆ ಹರಟೆ ಹೊಡೆಯುತ್ತಾರೆ. ಜೀವನಪೂರ್ತಿ ದುಡಿದು ದಣಿಯುವ ಅವರಿಗೆ ವಾರದ ದಿನಗಳು ಬಂದರೆ ಹಬ್ಬ. ಬೆಳಿಗ್ಗೆ ಪೂಜಾ ಕಾರ್ಯ ಮುಗಿಸುವ ಹೊತ್ತಿಗೆ ಮಧ್ಯಾಹ್ನದ ಬ್ಯಾಟಿಯ ರುಚಿಯ ಪರಿಮಳ ಬರುತ್ತದೆ. ಜೊತೆಯಲ್ಲಿದ್ದವರೊಂದಿಗೆ ಹರಟುತ್ತ ಮಾಂಸದೂಟ ಸವಿಯುತ್ತ ತಮ್ಮ ನೋವುಗಳನ್ನು ಮರೆಯುತ್ತ, ಎಲ್ಲರೊಳಗೆ ಒಂದಾಗಿ ತಮ್ಮ ಬದುಕಿನಲ್ಲಿ ಒಂದಷ್ಟಾದರೂ ಸಂತಸದ ಕ್ಷಣಗಳಿವೆ ಎಂದು ಸಂಭ್ರಮ ಪಡುತ್ತಾರೆ. ದಿನಪೂರ್ತಿ ಹುಲಿಗಿಯಲ್ಲಿ ಕಳೆದು ರಾತ್ರಿಗೆಲ್ಲ ಮನೆಗೆ ಸೇರುವ ಹೊತ್ತಿಗೆ ಮಧ್ಯರಾತ್ರಿ. ಮರುದಿನ ಮತ್ತೆ ಅನ್ನಕ್ಕಾಗಿ ಅಲೆದಾಡುವ ಎಂದಿನಂತೆ ಕಾಯಕ ಆರಂಭಿಸುತ್ತಾರೆ. ಹೀಗಾಗಿ ದೇವಿಯ ವಾರದ ದಿನಗಳು ಕಾರ್ಮಿಕರಿಗೆ ಮನಸ್ಸಿಗೆ ಮಹದಾನಂದ ಉಂಟು ಮಾಡುತ್ತವೆ.

‘ಏನೇ ಕೆಲಸ ಕೊಟ್ಟರೂ ಮಾಡುತ್ತೇನೆ. ಹಬ್ಬ, ಹರಿದಿನ ಯಾವುದನ್ನೂ ಲೆಕ್ಕಿಸದೇ ಕೆಲಸ ಮಾಡುವ ನಮಗೆ ವಾರದಲ್ಲಿ ಒಂದು ದಿನವಾದರೂ ಹುಲಿಗಿಗೆ ಹೋಗಿ ಬ್ಯಾಟಿ ತಿನ್ನಬೇಕು ಎನ್ನುವ ಆಸೆ. ಬದುಕಿರುವ ಕೊನೆಯ ದಿನದ ತನಕವೂ ಅಂದಿನ ಕೂಲಿ ಅಂದೇ ದುಡಿಯಬೇಕಾದ ಅನಿವಾರ್ಯತೆಯ ಸಂಕಷ್ಟದ ಬದುಕು ನಮ್ಮದು. ವಾರದಲ್ಲಿ ಒಂದು ದಿನವಾದರೂ ದೇವಿ ಹೆಸರಿನಲ್ಲಿ ಖುಷಿ ಅನುಭವಿಸುವುದು ಬೇಡವೇ’ ಎಂದು ಕಾರ್ಮಿಕ ಮಲ್ಲಪ್ಪ ಪ್ರಶ್ನಿಸಿದರು.

ಕೊಪ್ಪಳ ಸಮೀಪದ ಬಹದ್ದೂರ್ ಬಂಡಿ ಗ್ರಾಮದ ಮೇಘರಾಜ ಕುಮಾರನಿಗೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಲ್ಲ ಕೆಲಸಗಳು ಬರುತ್ತದೆ. ಆತನ ದುಡಿಮೆ ಮೇಲೆಯೇ ಕುಟುಂಬ ಅವಲಂಬಿತವಾಗಿದೆ. ಇಬ್ಬರು ಮಕ್ಕಳಿದ್ದು ಊರಿನಲ್ಲಿರುವ ಸ್ವಂತ ಮನೆಯೇ ದೊಡ್ಡ ಆಸರೆ. ಅವರಿವರನ್ನು ಕಾಡಿಬೇಡಿಯಾದರೂ ನಿತ್ಯ ಕೆಲಸ ಹುಡುಕಿಕೊಳ್ಳುತ್ತಾರೆ. ಮೇಘರಾಜ ತನ್ನ ಬದುಕಿನ ಕಥೆ ಹೇಳಿಕೊಳ್ಳುತ್ತ: ‘ಇಬ್ಬರು ಮಕ್ಕಳಿದ್ದಾರೆ, ಅವರನ್ನು ಸರ್ಕಾರಿ ಶಾಲೆಗಳಿಗೆ ಕಳಿಸುತ್ತಿದ್ದೇನೆ. ಎಲ್ಲರಂತೆಯೂ ನನ್ನ ಮಕ್ಕಳನ್ನು ಇಂಗ್ಲಿಷ್ ಕಾನ್ವೆಂಟ್ಗೆ ಕಳಿಸಬೇಕೆನ್ನುವ ಆಸೆಯಿದ್ದರೂ ಅಲ್ಪ ದುಡಿಮೆಯಿಂದ ಅದು ಸಾಧ್ಯವಾಗುವುದಿಲ್ಲ. ಮಕ್ಕಳ ಸಣ್ಣ ಆಸೆಯೂ ಈಡೇರಿಸಲು ಆಗುವುದಿಲ್ಲವೆನ್ನುವ ಬೇಸರವಿದ್ದರೂ ಶಾಲೆ ಮಾತ್ರ ಬಿಡಿಸಿಲ್ಲ’ ಎಂದು ಹೇಳಿದರು.

ಅವರು ಬದುಕಿನ ಬವಣೆ, ತಾವು ಎದುರಿಸಿದ ನೋವುಗಳನ್ನು ಹಂಚಿಕೊಳ್ಳುವ ಉಮೇದಿಯಲ್ಲಿದ್ದರು. ಅಷ್ಟರಲ್ಲೇ ಬೈಕ್ ಮೇಲೆ ಬಂದ ಕೆಲಸ ಕೊಡುವ ಮಾಲೀಕ ‘ಗೋಡೆ ಕಟ್ಟಲು ಬರ್ತೀಯಾ’ ಎಂದು ಕರೆದ. ಎಂದಿನಂತೆ ಹತ್ತಾರು ಜನ ಮಾಲೀಕನ ಬೈಕ್ ಸುತ್ತುವರಿದರು. ಬೈಕ್ಗೆ ಅಡ್ಡಲಾಗಿ ನಿಂತರು. ಅದನ್ನು ಲೆಕ್ಕಿಸದೆ ಮಾಲೀಕ ಮೇಘರಾಜನನ್ನು ಬೈಕ್ ಮೇಲೆ ಹತ್ತಿಸಿಕೊಂಡು ತಮ್ಮ ಮನೆಯತ್ತ ಹೊರಟ. ಮಾಲೀಕ ತನ್ನನ್ನೇ ಕೆಲಸಕ್ಕೆ ಆಯ್ಕೆ ಮಾಡಿಕೊಂಡಿದ್ದಕ್ಕೆ ಮೇಘರಾಜನ ಕಣ್ಣುಗಳಲ್ಲಿ ಅಂದಿನ ಅನ್ನ ಸಿಕ್ಕ ಖುಷಿ. ಉಳಿದ ಕಾರ್ಮಿಕರ ಕಣ್ಣುಗಳಲ್ಲಿ ನಮ್ಮನ್ನೂ ಯಾರಾದರೂ ಕೆಲಸಕ್ಕೆ ಕರೆಯುತ್ತಾರೆ ಎನ್ನುವ ನಿರೀಕ್ಷೆ...

ಗಡಿಯಾರ ಕಂಬ, ಲೇಬರ್ ವೃತ್ತ, ಪಟ್ಟಣ ಪಂಚಾಯಿತಿಯ ಮುಂಭಾಗ–ಇವು ಕೇವಲ ಸ್ಥಳಗಳಲ್ಲ; ನೂರಾರು ಕುಟುಂಬಗಳ ಹಸಿವು, ಹಂಬಲ, ಹೋರಾಟ ಒಂದೆಡೆ ಒಟ್ಟುಗೂಡುವ ತಾಣಗಳು. ಇಲ್ಲಿ ಪ್ರತಿ ಮುಂಜಾವೂ ಒಂದು ಪ್ರಶ್ನೆಯೊಂದಿಗೆ ಹುಟ್ಟುತ್ತದೆ; ಇಂದು ಕೆಲಸ ಸಿಗುತ್ತದೆಯೇ? ಆ ಪ್ರಶ್ನೆಗೆ ಉತ್ತರ ಸಿಕ್ಕರೆ ಒಂದು ಮನೆಯಲ್ಲಿ ಒಲೆ ಹೊತ್ತಿಕೊಳ್ಳುತ್ತದೆ; ಇಲ್ಲದಿದ್ದರೆ ನಿರಾಶೆ ಕವಿಯುತ್ತದೆ. ಕೆಲಸ ಸಿಕ್ಕವನ ಕಣ್ಣಲ್ಲಿ ಗೆದ್ದ ಸಂಭ್ರಮ; ಸಿಗದವನ ಕಣ್ಣಲ್ಲಿ ನಾಳೆಯ ನಿರೀಕ್ಷೆ. ಆ ನಿರೀಕ್ಷೆಯೇ ಅವರನ್ನು ಮರುದಿನ ಇದೇ ವೃತ್ತಕ್ಕೆ ಕರೆತರುತ್ತದೆ. ಹೀಗೆ, ಸೂರ್ಯ ಮುಳುಗಿ ಮತ್ತೆ ಮೂಡುವಂತೆ, ಲೇಬರ್ ವೃತ್ತ ಕಾರ್ಮಿಕರ ಬದುಕಿನಲ್ಲಿ ನಿತ್ಯ ಮರುಹುಟ್ಟು ಪಡೆಯುತ್ತಲೇ ಇರುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-51-403593441

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.