ಮಂಗಳವಾರ, ಆಗಸ್ಟ್ 3, 2021
21 °C

ಕೊಪ್ಪಳ | ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆ: ಸ್ಥಳೀಯರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ಅಂಗನವಾಡಿ ಕೇಂದ್ರಕ್ಕೆ ಕೊಳೆತ ಮೊಟ್ಟೆಗಳು ಪೂರೈಕೆಯಾಗಿರುವುದಕ್ಕೆ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆ ಪಟ್ಟಣದ 23ನೇ ವಾರ್ಡಿನ ಬಳಿ ಇರುವ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ನಡೆಯಿತು.

ಮೊಟ್ಟೆಗಳು ಕೊಳೆತಿರುವುದನ್ನು ಒಡೆದು ಅಧಿಕಾರಿಗಳಿಗೆ ತೋರಿಸಿದ ಅಲ್ಲಿಯ ನಿವಾಸಿಗಳು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರಿ ಮತ್ತು ಅಂಗನವಾಡಿ ಕಾರ್ಯಕರ್ತೆ ಜುಬೇದಾ ಬೇಗಂ ಅವರನ್ನು ತರಾಟೆಗೆ ತೆಗೆದುಕೊಂಡರು.

ಮಕ್ಕಳು, ಗರ್ಭಿಣಿ, ಬಾಣಂತಿಯರಲ್ಲಿನ ಅಪೌಷ್ಟಿಕತೆ ಹೋಗಲಾಡಿಸುವ ಸಲುವಾಗಿ ಸರ್ಕಾರ ಮೊಟ್ಟೆಗಳನ್ನು ವಿತರಿಸಲು ಕ್ರಮ ಕೈಗೊಂಡಿದೆ. ಆದರೆ ವಾಸ್ತವದಲ್ಲಿ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆಗಳು ಪೂರೈಕೆಯಾಗುತ್ತಿವೆ. ಕಳೆದ ಎರಡು ತಿಂಗಳಿನಿಂದಲೂ ಇದೇ ರೀತಿಯ ಮೊಟ್ಟೆಗಳನ್ನು ನೀಡಲಾಗುತ್ತಿದೆ. ಇಂಥ ಮೊಟ್ಟೆಗಳನ್ನು ಸೇವಿಸಿದ ಮಹಿಳೆಯೊಬ್ಬರು ಆಸ್ಪತ್ರೆ ಸೇರಿದ್ದರೆ. ಇತರೆ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ ಎಂದು ಪುರಸಭೆ ಸದಸ್ಯರಾದ ಮಹಾಂತೇಶ ಕಲಭಾವಿ, ಮೆಹಬೂಬಸಾಬ ಕಮ್ಮಾರ, ವಕೀಲ ರಾಜು ಗಂಗನಾಳ, ಕಳಕೇಶ ನಾಯಕ, ಹಸನಸಾಬ ನದಾಫ್, ರಸೂಲಸಾಬ್ ರೌಡಕುಂದ ಇತರರು ದೂರಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಶ ಕುಂಟಗೌಡ್ರ ಅವರು ತಾಲ್ಲೂಕಿನ ಎಲ್ಲ ಅಂಗನವಾಡಿಗಳಿಗೆ ಇದೇ ಮೊಟ್ಟೆಗಳನ್ನು ಸರಬರಾಜು ಮಾಡುತ್ತಿದ್ದಾರೆ. ನಿಯಮಗಳಲ್ಲಿ ಇಲ್ಲದಿದ್ದರೂ ಅನಧಿಕೃತವಾಗಿ ಎಲ್ಲ ಅಂಗನವಾಡಿಗಳಿಗೆ ಮೊಟ್ಟೆ ಸರಬರಾಜು ಮಾಡುವ ವ್ಯವಸ್ಥೆ ತಾಲ್ಲೂಕಿನಲ್ಲಿ ಜಾರಿಯಲ್ಲಿದೆ. ಕೋಳಿಫಾರ್ಮ್‌‌ಗಳಲ್ಲಿ ದೊರೆಯುವ ಗುಣಮಟ್ಟವಲ್ಲದ ಮೊಟ್ಟೆಗಳು ನೇರವಾಗಿ ಅಂಗನವಾಡಿ ಕೇಂದ್ರಗಳಿಗೆ ಬರುತ್ತಿವೆ. ಇಂಥ ಅವ್ಯವಹಾರ ಗೊತ್ತಿದ್ದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಸಿಡಿಪಿಒ ಜಯಶ್ರಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ವ್ಯಕ್ತಿಯಿಂದ ಮೊಟ್ಟೆ ಸರಬರಾಜು ಮಾಡುವ ವ್ಯವಸ್ಥೆ ಇಲ್ಲ, ಆಯಾ ಅಂಗನವಾಡಿಗಳಲ್ಲಿ ಮೇಲ್ವಿಚಾರಣಾ ಸಮಿತಿ ಇರುತ್ತದೆ. ದೀರ್ಘ ಕಾಲದಿಂದಲೂ ಫಲಾನುಭವಿಯಾಗಿರುವ ಮಹಿಳೆಯನ್ನೇ ಅಧ್ಯಕ್ಷರನ್ನಾಗಿಸಿ ಸಮಿತಿಯ ಬ್ಯಾಂಕ್ ಜಂಟಿ ಖಾತೆಗೆ ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ಹಣ ಜಮೆ ಮಾಡಲಾಗುತ್ತದೆ. ಲಭ್ಯ ಇರುವ ಕಡೆ ಸಮಿತಿಯವರೇ ಮೊಟ್ಟೆಗಳನ್ನು ಖರೀದಿಸಬೇಕಾಗುತ್ತದೆ. ಆದರೆ ಸುರೇಶಗೌಡ ಎಂಬುವವರು ಮೊಟ್ಟೆ ಸರಬರಾಜು ಮಾಡುತ್ತಿರುವ ವಿಷಯ ತಮಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ಈ ಬಗ್ಗೆ ಪರಿಶೀಲನೆ ನಡೆಸಿ ಅಂಗನವಾಡಿ ಕಾರ್ಯಕರ್ತೆಗೆ ನೋಟಿಸ್‌ ನೀಡಿ ನಂತರ ಉಪ ನಿರ್ದೇಶಕರಿಗೆ ಇಲ್ಲಿ ವಸ್ತುಸ್ಥಿತಿಯ ವರದಿ ಸಲ್ಲಿಸಲ್ಲಾಗುವುದು ಎಂದು ತಿಳಿಸಿದರು.

ಶಾಸಕ ಬಯ್ಯಾಪುರ  ಭೇಟಿ:

ಈ ಮಧ್ಯೆ ಸಾರ್ವಜನಿಕರ ದೂರಿನ ಅನ್ವಯ ಶಾಸಕ ಅಮರೇಗೌಡ ಬಯ್ಯಾಪುರ ಅವರು, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಮಾತನಾಡಿದ ಅವರು, ಇತರೆ ಅಂಗನವಾಡಿಗಳಲ್ಲಿ ಕಳಪೆ ಮೊಟ್ಟೆಗಳು ಪೂರೈಕೆಯಾಗಿರುವ ಬಗ್ಗೆ ದೂರುಗಳು ಬಂದಿಲ್ಲ. ಕಳಪೆ ಮೊಟ್ಟೆ ಪೂರೈಕೆಯಾಗಿರುವ ಬಗ್ಗೆ ಪರಿಶೀಲಿಸುವಂತೆ ಸಿಡಿಪಿಒಗೆ ಸೂಚಿಸಿರುವುದಾಗಿ ಹೇಳಿದರು.

ಸಗಟು ರೂಪದಲ್ಲಿ ಕಾಲಕಾಲಕ್ಕೆ ಅಂಗನವಾಡಿಯವರಿಗೆ ಮೊಟ್ಟೆ ಖರೀದಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಬೇರೆಯವರಿಂದ ಮೊಟ್ಟೆಗಳು ಸರಬರಾಜು ಆಗುವಂತೆ ಆಂತರಿಕ ವ್ಯವಸ್ಥೆ ಮಾಡಿಕೊಳ್ಳಲಾಗಿರುತ್ತದೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು