ಕೊಪ್ಪಳ: ಹವಾಮಾನದಲ್ಲಿನ ವ್ಯತ್ಯಾಸದಿಂದಾಗಿ ಜಿಲ್ಲೆಯ ಬಹಳಷ್ಟು ಜನರಲ್ಲಿ ಕಣ್ಣು ನೋವು ಕಾಣಿಸಿಕೊಂಡಿದೆ. ಇದನ್ನು ಮದ್ರಾಸ್ ಐ ಅಥವಾ ’ಪಿಂಕ್ ಐ’ ಎಂತಲೂ ಕರೆಯಲಾಗುತ್ತಿದ್ದು, ಇದು ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತಿದೆ.
ಕಣ್ಣುಗಳು ಕೆಂಪಾಗುವುದು, ಕಣ್ಣುಗಳಿಂದ ನೀರು ಸೋರುವುದು, ಕಣ್ಣಿನ ರೆಪ್ಪೆಗಳು ಅಂಟಿಕೊಳ್ಳುವುದು, ನೋವು, ತುರಿಕೆ ಮತ್ತು ಕಣ್ಣಿನ ರೆಪ್ಪೆಗಳ ಬಾವು ಬರುವುದು ಈ ಸೋಂಕಿನ ಪ್ರಮುಖ ಲಕ್ಷಣಗಳಾಗಿವೆ. ಬಹಳಷ್ಟು ಜನ ಸೋಂಕಿಗೆ ಒಳಗಾದವರನ್ನು ನೋಡಿದರೆ ತಮಗೂ ಕಣ್ಣು ನೋವು ಬರುತ್ತದೆ ಎಂದು ಭಾವಿಸಿದ್ದಾರೆ. ಆದರೆ, ವೈದ್ಯರ ಪ್ರಕಾರ ಸೋಂಕಿಗೆ ಒಳಗಾದ ವ್ಯಕ್ತಿ ಬಳಸಿದ ಸಾಮಗ್ರಿಗಳನ್ನು ಬೇರೆಯವರು ಬಳಸಿದರೆ ಸೋಂಕು ತಗಲುತ್ತದೆ. ಎಚ್ಚರ ವಹಿಸಿದರೆ ಸೋಂಕು ಹರಡುವುದನ್ನು ತಪ್ಪಿಸಬಹುದು.
ಸಾಮಾನ್ಯವಾಗಿ ಕುಟುಂಬದ ಸದಸ್ಯರಲ್ಲಿ ಒಬ್ಬರಿಗೆ ಬಂದರೆ ಅದು ಬೇರೆಯವರಿಗೂ ಹರಡಿಕೊಳ್ಳುತ್ತದೆ. ಜಿಲ್ಲೆಯಲ್ಲಿ ದೊಡ್ಡವರು ಹಾಗೂ ಮಕ್ಕಳಲ್ಲಿ ವ್ಯಾಪಕವಾಗಿ ಮದ್ರಾಸ್ ಐ ಹರಡಿಕೊಳ್ಳುತ್ತಿದೆ. ಜಿಲ್ಲಾ ಕೇಂದ್ರವಾದ ಕೊಪ್ಪಳ ಮತ್ತು ಗಂಗಾವತಿಯ ಬಹುತೇಕ ಕಣ್ಣಿನ ಆಸ್ಪತ್ರೆಗಳಲ್ಲಿ ಇದೇ ಕಾರಣದಿಂದಾಗಿ ಚಿಕಿತ್ಸೆ ಪಡೆಯಲು ಬರುತ್ತಿರುವ ಜನರ ಸಂಖ್ಯೆಯೇ ಹೆಚ್ಚಾಗುತ್ತಿದೆ.
ಆಸ್ಪತ್ರೆಗೆ ನಿತ್ಯ ಬರುವ ರೋಗಿಗಳಲ್ಲಿ ಶೇ. 70ಕ್ಕಿಂತಲೂ ಹೆಚ್ಚು ಜನ ಕಣ್ಣು ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುತ್ತಾರೆ ವೈದ್ಯರು. ಈ ಸೋಂಕು ಅಪಾಯಕಾರಿಯೇನಲ್ಲ. ಮೂರರಿಂದ ಐದು ದಿನಗಳ ಅವಧಿಯಲ್ಲಿ ಕಡಿಮೆಯಾಗುತ್ತದೆ. ಐದು ದಿನಗಳಾದರೂ ಕಡಿಮೆಯಾಗದಿದ್ದರೆ ಅಥವಾ ಕಣ್ಣು ಮೊಬ್ಬಾಗುತ್ತಿದ್ದರೆ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಅಷಾಢ ಮಾಸದ ಗಾಳಿಯ ತೀವ್ರತೆಯಲ್ಲಿ ಒಬ್ಬರಿಗೆ ಸೋಂಕು ತಗುಲಿದರೆ ವೇಗವಾಗಿ ಹರಡಿಕೊಳ್ಳುತ್ತದೆ. ವಿಶೇಷವಾಗಿ ಶಾಲಾ ಕಾಲೇಜುಗಳಲ್ಲಿ, ಹಾಸ್ಟೆಲ್‌ಗಳಲ್ಲಿ ಈ ರೀತಿಯ ಪ್ರಕರಣಗಳು ಕಂಡು ಬರುತ್ತಿವೆ. ಆದ್ದರಿಂದ ಮಕ್ಕಳ ಜೊತೆಗೆ ಪೋಷಕರೂ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.
‘ಜಿಲ್ಲೆಯಲ್ಲಿ 2,300 ಪ್ರಕರಣಗಳು ದಾಖಲಾಗಿವೆ. ಈ ಕುರಿತು ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳಲ್ಲಿ ಆರೋಗ್ಯ ಜಾಗೃತಿ ಮೂಡಿಸಲಾಗುತ್ತಿದೆ. ಕಣ್ಣು ನೋವು ಕಾಣಿಸಿಕೊಂಡರೆ ಶಾಲೆಗೆ ಹೋಗುವುದನ್ನು ಬಿಡಿ ಎಂದು ಹೇಳಲಾಗುತ್ತಿದೆ. ಸ್ವಚ್ಛವಾಗಿ ಕೈ ತೊಳೆದುಕೊಳ್ಳಬೇಕು. ಈ ಕುರಿತು ಜಾಗೃತಿ ಮೂಡಿಸುವಂತೆ ಎಲ್ಲ ಆರೋಗ್ಯ ಅಧಿಕಾರಿಗಳಿಗೆ ಹೇಳಿದ್ದೇನೆ. ಈ ಸೋಂಕಿನಿಂದ ಭಯ ಪಡುವ ಅಗತ್ಯವಿಲ್ಲ. ಅಗತ್ಯ ಮುಂಜಾಗೃತೆ ವಹಿಸದರೆ ಸಾಕು’ ಎಂದು ಡಿಎಚ್‌ಒ ಡಾ. ಲಿಂಗರಾಜು ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
ಕಣ್ಣು ಬೇನೆ ಸಾಮಾನ್ಯವಾಗಿ 7 ದಿನಗಳ ಒಳಗೆ ಕಡಿಮೆಯಾಗುತ್ತದೆ. ಒಂದು ವೇಳೆ ಕಡಿಮೆ ಆಗದಿದ್ದರೆ ಅಥವಾ ನೋವು ತೀವ್ರವಾದರೆ ತಕ್ಷಣವೇ ನೇತ್ರತಜ್ಞರನ್ನು ಸಂಪರ್ಕಿಸುವುದು ಸೂಕ್ತ.ಎ. ಹನುಮಂತಪ್ಪ ಕಣ್ಣಿನ ತಜ್ಞರು ಗಂಗಾವತಿ
ಕಣ್ಣಿನ ಸೋಂಕಿಗೆ ಒಳಗಾದವರು ಆದಷ್ಟು ಒಬ್ಬರೇ ಇರಬೇಕು. ಪ್ರತಿ ಎರಡು ತಾಸಿಗೊಮ್ಮೆ ಬಿಸಿನೀರಿನಿಂತ ಕಣ್ಣು ಸ್ವಚ್ಛವಾಗಿ ಒರೆಯಿಸಿಕೊಳ್ಳಬೇಕು. ಡಾ. ವಿಕಾಸ್ ಐಲಿ ನೇತ್ರ ತಜ್ಞ ಕೊಪ್ಪಳ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.