ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆ

Last Updated 14 ಜೂನ್ 2022, 4:22 IST
ಅಕ್ಷರ ಗಾತ್ರ

ಯಲಬುರ್ಗಾ: ಬಿಸಿಯೂಟ ನೌಕರರಿಗೆ ವೇತನ ಹೆಚ್ಚಳ, ಉದ್ಯೋಗ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿ, ತಾಲ್ಲೂಕು ಪಂಚಾಯಿತಿ ಇಒ ಸಂತೋಷ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಅಕ್ಷರ ದಾಸೋಹ ಯೋಜನೆಯನ್ನು ಖಾಸಗಿ ಸಂಸ್ಥೆಗೆ ವಹಿಸಿಕೊಡಬಾರದು. 60 ವರ್ಷ ವಯೋಮಾನದವರನ್ನು ಕೆಲಸದಿಂದ ತೆಗೆದುಹಾಕಬಾರದು. ಬಜೆಟ್‍ನಲ್ಲಿ ನೀಡಿದ ಭರವಸೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಶಾಲೆಯ ಆವರಣದಲ್ಲಿನ ಕೈ ತೋಟಗಳಲ್ಲಿ ಕೆಲಸ ಮಾಡುವ ಬಿಸಿಯೂಟ ನೌಕರರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿ ವೇತನ ನೀಡುವಂತೆ ಸರ್ಕಾರ ಆದೇಶಿಸಿಬೇಕು. ಬೇಸಿಗೆ ಮತ್ತು ದಸರಾ ರಜೆಗಳಲ್ಲಿ ವೇತನ ಒದಗಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಕೆ. ಪದ್ಮಾವತಿ, ದೇವಮ್ಮ, ಶಾಂತಮ್ಮ ಕಮಲಮ್ಮ, ದೀಪಾ, ದ್ರಾಕ್ಷಾಯಣಮ್ಮ, ಪೀರಮ್ಮ ತಳಕಲ್ಲ, ಶಿವಮ್ಮ ಮದ್ಲೂರ, ಪಾರ್ವತೆಮ್ಮ ಚೌಡಾಪೂರ ಇದ್ದರು.

‘ಬೇಡಿಕೆಗೂ ಹೆಚ್ಚು ರಸಗೊಬ್ಬರ ಪೂರೈಕೆ’

ಕಲಬುರಗಿ: ‘ರಾಜ್ಯಕ್ಕೆ ಕಳೆದ ಏಪ್ರಿಲ್‌ನಿಂದ ಜೂನ್‌ವರೆಗೆ ಬೇಡಿಕೆಗಿಂತ ಶೇ 15ರಷ್ಟು ಹೆಚ್ಚುವರಿ ರಸಗೊಬ್ಬರವನ್ನು ಕೇಂದ್ರ ಸರ್ಕಾರ ಪೂರೈಸಿದೆ’ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಹಾಗೂ ಹೊಸ ನವೀಕರಿಸಬಹುದಾದ ಇಂಧನ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ನಗರದಲ್ಲಿ ಸೋಮವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೆಲುಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಅಂತರರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರ ಸಮಸ್ಯೆ ಹೆಚ್ಚಿದ್ದರೂ ದೇಶದಲ್ಲಿ ಈ ಸಮಸ್ಯೆ ಆಗದಂತೆ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಕೆಳ ಹಂತದಲ್ಲಿ ಬೇಡಿಕೆಗೆ ತಕ್ಕಂತೆ ಸರಿಯಾಗಿ ವಿತರಣೆ ಮಾಡುವ ಜವಾಬ್ದಾರಿ ಸ್ಥಳೀಯ ಆಡಳಿತದ್ದು ಆಗಿದೆ’ ಎಂದರು.

‘ಕಲಬುರಗಿ ಜಿಲ್ಲೆಗೆ ಅಗತ್ಯವಿರುವಷ್ಟು ಗೊಬ್ಬರ ಬಂದಿರದಿದ್ದರೆ, ಅದನ್ನು ಸರಿಪಡಿಸಲಾಗುವುದು. ಡಿಎಪಿ ಗೊಬ್ಬರಕ್ಕೆ ಹೆಚ್ಚು ಬೇಡಿಕೆ ಇದೆ. ಕಾಂಪ್ಲೆಕ್ಸ್ ಗೊಬ್ಬರವೂ ಉತ್ತಮ ಇಳುವರಿಗೆ ಕಾರಣವಾಗಲಿದ್ದು, ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಿ’ ಎಂದರು.

ವಿಸ್ತಾರಕರ ಸಭೆ

ಕನಕಗಿರಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಎಂಟು ವರ್ಷದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಬೇಕೆಂದು ಶಾಸಕ ಬಸವರಾಜ ದಢೇಸೂಗೂರು ತಿಳಿಸಿದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ವಿಸ್ತಾರಕರ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಗುಳಗಣ್ಣನವರ್ , ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್ ಮಾತನಾಡಿದರು.

ಜಿಪಂ ಮಾಜಿ ಸದಸ್ಯ ವೀರೇಶ ಸಾಲೋಣಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಅಶ್ವಿನಿ ದೇಸಾಯಿ.ಮಂಡಲ ಪ್ರಧಾನ ಕಾರ್ಯದರ್ಶಿ ವಾಗೀಶ ಹಿರೇಮಠ ಹಾಗೂ ಪದಾಧಿಕಾರಿಗಳು ಇದ್ದರು.

ಸಸಿ ವಿತರಣೆ

ಕುಷ್ಟಗಿ: ಪರಿಸರ ಸಂರಕ್ಷಣೆಯಲ್ಲಿ ರೈತರಿಗೆ ಹೆಚ್ಚಿನ ಕಾಳಜಿ ಇದ್ದು, ಅವರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಬೇಕು ಎಂದು ದ್ವಾರಕಾಮಾಯಿ ಸಾಯಿ ಸೇವಾ ಟ್ರಸ್ಟ್‌ನ ಕೃಷ್ಣ ಕಂದಕೂರು ಹೇಳಿದರು.

ತಾಲ್ಲೂಕಿನ ನೆರೆಬೆಂಚಿ ಗ್ರಾಮದ ರೈತರಿಗೆ ವಿವಿಧ ಸಸಿ ವಿತರಿಸಿ ಅವರು ಮಾತನಾಡಿದರು.

ಟ್ರಸ್ಟ್‌ನ ಪ್ರವೀಣ ಕಲಾಲ ಮಾತ ನಾಡಿ, ತಮಗೆ ನೀಡಲಾದ ಸಸಿಗಳನ್ನು ಹೊಲ, ಗದ್ದೆಗಳ ಬದುಗಳಲ್ಲಿ ನಾಟಿ ಅವುಗಳ ರಕ್ಷಣೆ ಮಾಡಬೇಕು ಎಂದರು.

ಟ್ರಸ್ಟ್ ಪ್ರಮುಖರಾದ ಬಸವರಾಜ ರಡ್ಡಿ, ರಾಜು ಕತ್ರಿ, ರವಿಕುಮಾರ್, ರಾಮು ಬನ್ನಿಗೋಳ,ಗ್ರಾಮಸ್ಥರಾದ ಕರಿಯಪ್ಪ, ವೀರನಗೌಡ, ಹನುಮಂತಪ್ಪ ಇದ್ದರು.

ವಿದ್ಯುತ್ ವ್ಯತ್ಯಯ

ಗಂಗಾವತಿ: ತಾಲ್ಲೂಕಿನ ವೆಂಕಟಗಿರಿ ಹಾಗೂ ಮಲ್ಲಾಪುರ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ಮಂಗಳವಾರ (ಜೂ.14) ಬೆಳಿಗ್ಗೆ 10ರಿಂದ ಸಂಜೆ 4ರವರಗೆ ವಿದ್ಯುತ್ ವ್ಯತ್ಯಯವಾಗಲಿದೆ.

ವೆಂಕಟಗಿರಿ, ಮಲ್ಲಾಪುರ, ದಾಸನಾಳ, ದಾಸ ನಾಳ ಬ್ರಿಡ್ಜ್, ಬಸಪಟ್ಟಣ, ವಡ್ಡರಹಟ್ಟಿ, ವಡ್ಡರಹಟ್ಟಿ ಕ್ಯಾಂಪ್, ಸಿದ್ದಿಕೇರಿ, ಉಡಮಕಲ್,ಗಡ್ಡಿ, ಬಂಡ್ರಾಳ, ಹಿರೆಬೆಣಕಲ್, ಚಿಕ್ಕಬೆಣಕಲ್, ವಿಠಲಾಪುರ, ಆಗೋಲಿ, ಹಂಪಸದುರ್ಗ, ಬೊಮ್ಮಸಾಗರ ತಾಂಡ, ಸೂರ್ಯನಾಯಕ ತಾಂಡ, ಮಲ್ಲಾಪುರ, ಸಂಗಾಪುರ, ಆನೆಗೊಂದಿ, ಸಾಣಾಪುರ ಗ್ರಾಮಗಳಲ್ಲಿ ವಿದ್ಯುತ್ ಅಭಾವ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸ್ವಯಂ ಉದ್ಯೋಗ ಅರಿವು

ಅಳವಂಡಿ: ಸಮೀಪದ ಗುಳದಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಮತ್ತು ಗರ್ವಸೆ ಕೇಂದ್ರ ಸಾಮರ್ಥ್ಯ ಸಂಸ್ಥೆ, ಆರ್ ಪಿಡಿ ಟಾಸ್ಕ್ ಫೋರ್ಸ್ ದಿಶಾ ದಿವ್ಯಾ ಸೇವಾ ಸಂಸ್ಥೆ ಅಳವಂಡಿ ಸಹಯೋಗದಲ್ಲಿ ಅಂಗವಿಕಲರ ಸ್ವಯಂ ಉದ್ಯೋಗ ಅರಿವಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಸಿದ್ದಲಿಂಗಮ್ಮ ಅಂಗವಿಕಲರ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಸ್ವಯಂ ಉದ್ಯೋಗ ತರಬೇತಿ ಬಗ್ಗೆ ಪ್ರವೀಣ್ ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ವೀರೇಶ ಹಾಲಗುಂಡಿ, ಗ್ರಾ.ಪಂ ಅಧ್ಯಕ್ಷ ದುರುಗಪ್ಪ, ಉಪಾಧ್ಯಕ್ಷ ಮೈಲಾರಪ್ಪ, ಸದಸ್ಯರಾದ ಧರ್ಮಣ್ಣ, ಸಿಬ್ಬಂದಿ ರಮೇಶ, ಅಂಗವಿಕಲರಾದ ಸಂಜೀವಪ್ಪ, ನೀಲಪ್ಪ, ಹನುಮಂತ ಹಾಗೂ ವಿಕಲಚೇತನರು ಇದ್ದರು.

‘ಶಾಲೆ ಗ್ರಾಮದ ದೇವಸ್ಥಾನ’

ಹನುಮಸಾಗರ: ಶಾಲೆಗಳನ್ನು ದೇವಸ್ಥಾನಗಳಂತೆ ಕಂಡರೆ ಮಕ್ಕಳ ಸರ್ವಾಂಗಿಣ ಬೆಳವಣಿಗೆಗೆ ಕಾರಣವಾಗುತ್ತವೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅಭಿಪ್ರಾಯಪಟ್ಟರು.

ಸಮೀಪದ ಗುಡದೂರಕಲ್ಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಮಾತನಾಡಿ, ಪಾಲಕರು ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ಸರ್ಕಾರ ನೀಡಿರುವ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬೀರಪ್ಪ ಮಾಗಿ ಅಧ್ಯಕ್ಷತೆವಹಿಸಿದ್ದರು. ಪ್ರಮುಖರಾದ ಇರ್ಫಾನ್ ನಾಡಗೌಡ್ರ, ಶಿವಾನಂದ ಪಂಪಣ್ಣವರ, ಜೀವನಸಾಬ್ ಬಿನ್ನಾಳ, ಹನುಮಂತಪ್ಪ ಗೋಡೆಕಾರ ಇದ್ದರು.

ಮಲ್ಲಮ್ಮ ರುದ್ರಸ್ವಾಮಿಮಠ ಸ್ವಾಗತಿಸಿದರು, ಶಂಕರಪ್ಪ ಉಪ್ಪಾರ ನಿರೂಪಿಸಿದರು, ನಾರಾಯಣ ಹಲಿವಾಣದ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT