ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಡಾಡಿ ದನ ಇರಿತಕ್ಕೆ ಮಹಿಳೆ ಬಲಿ: ಮೃತದೇಹವಿಟ್ಟು ಪ್ರತಿಭಟನೆ

Last Updated 21 ನವೆಂಬರ್ 2022, 12:14 IST
ಅಕ್ಷರ ಗಾತ್ರ

ಕೊಪ್ಪಳ: ಹೋಟೆಲ್‌ನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಬೀಡಾಡಿ ದನ ಇರಿದುರಮೀಜಾ ಬೇಗಂ (42) ಎಂಬ ಮಹಿಳೆ ಧಾರುಣವಾಗಿ ಮೃತಪಟ್ಟಿದ್ದು, ಇದರಿಂದ ಆಕ್ರೋಶಗೊಂಡ ಸ್ಥಳೀಯರು ಸೋಮವಾರ ನಗರಸಭೆ ಮುಂದೆ ಮೃತದೇಹವಿಟ್ಟು ಪರಿಹಾರ ನೀಡಬೇಕು ಎಂದು ಪ್ರತಿಭಟನೆ ನಡೆಸಿದರು.

ಇಲ್ಲಿನ 30ನೇ ವಾರ್ಡ್‌ ವ್ಯಾಪ್ತಿಯ ದೇವರಾಜ ಅರಸ ಕಾಲೊನಿಯಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಎರಡು ದನಗಳು ಗುದ್ದಾಡುತ್ತಿರುವಾಗ ಸಮೀಪದಲ್ಲಿ ಹೋಗುತ್ತಿದ್ದ ರಮೀಜಾ ಅವರಿಗೆ ಒಂದು ದನ ಬಲವಾಗಿ ಹೊಟ್ಟೆಗೆ ಇರಿದ ಕಾರಣ ದೇಹದ ಮಾಂಸ ಹೊರಗಡೆ ಬಂದಿತ್ತು, ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಬದುಕುಳಿಯಲಿಲ್ಲ ಎಂದು ಸ್ಥಳೀಯರು ತಿಳಿಸಿದರು.

ಹೋಟೆಲ್‌ನಲ್ಲಿ ಕೆಲಸ ಮಾಡಿ ಬರುತ್ತಿದ್ದ ಆದಾಯದ ಮೇಲೆಯೇ ರಮೀಜಾ ಕುಟುಂಬ ಅವಲಂಬಿತವಾಗಿತ್ತು. ಅವರಿಗೆ ಪತಿ ಹಾಗೂ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.

ಪ್ರತಿಭಟನೆ: ಬೀಡಾಡಿ ದನಗಳನ್ನು ಹಿಡಿಯುವಂತೆ ಹಲವಾರು ಬಾರಿ ಮನವಿ ಮಾಡಿದರೂ ನಗರಸಭೆ ನಿರ್ಲಕ್ಷ್ಯ ತೋರಿದ್ದರಿಂದ ಈಗ ಜೀವವೇ ಬಲಿಯಾಯಿತು. ನಗರಸಭೆ ಸಿಬ್ಬಂದಿ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎಂದು ಮುಸ್ಲಿಂ ಸಮಾಜದ ಹಲವು ಮುಖಂಡರು ಹಾಗೂ ಬಡಾವಣೆಗೆ ನಿವಾಸಿಗಳು ಆರೋಪಿಸಿದರು. ಜಿಲ್ಲಾಸ್ಪತ್ರೆಯಿಂದ ನೇರವಾಗಿ ಮೃತ ದೇಹ ನಗರಸಭೆ ಮುಂದೆ ತಂದು ಆಕ್ರೋಶ ವ್ಯಕ್ತಪಡಿಸಿದರು.

ರಮೀಜಾ ಸಾವಿಗೆ ಸರ್ಕಾರ ಪರಿಹಾರ ಕೊಡಬೇಕು, ಕುಟುಂಬಕ್ಕೆ ನಿವೇಶನ ನೀಡಿ ಮನೆ ಕಟ್ಟಿ ಕೊಡಬೇಕು ಎಂದು ಆಗ್ರಹಿಸಿದರು. ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದು ಸುಮಾರು ಒಂದು ತಾಸು ಪ್ರತಿಭಟಿಸಿದರು. ಶಾಸಕರು ಬಾರದ ಕಾರಣ ಆಕ್ರೋಶ ಇನ್ನಷ್ಟು ಹೆಚ್ಚಾಯಿತು.

ಬಳಿಕ ಕೊಪ್ಪಳ ತಹಶೀಲ್ದಾರ್‌ ಅಮರೇಶ ಬಿರಾದಾರ ಮತ್ತು ನಗರಸಭೆ ಆಯುಕ್ತ ಎಚ್‌.ಎನ್‌. ಭಜಕ್ಕನವರ ಪ್ರತಿಭಟನಾಕಾರರ ಮನವೊಲಿಸಿ ಸರ್ಕಾರದಿಂದ ಸೌಲಭ್ಯಗಳನ್ನು ದೊರಕಿಸಿಕೊಡುವುದಾಗಿ ಹೇಳಿಕ ಲಿಖಿತವಾಗಿ ಕೊಟ್ಟ ಬಳಿಕವೇ ಮೃತದೇಹ ತೆಗೆದುಕೊಂಡು ಹೋಗಲಾಯಿತು.


‘ದುಡಿಯಲು ಹೋಗಿ ಹೆಣವಾಗಿ ಬಂದರು’

ಕುಟುಂಬಕ್ಕೆ ಆಸರೆಯಾಗಿದ್ದ ರಮೀಜಾ ಬೇಗಂ ದುಡಿಯಲು ಹೋಗಿದ್ದವಳು ಜೀವಂತವಾಗಿ ವಾಪಸ್‌ ಬರಲಿಲ್ಲ. ಆಕೆಯ ಪತಿ ಹೃದಯಸಂಬಂಧಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಕುಟುಂಬಕ್ಕೆ ಈಗ ದಿಕ್ಕೇ ಇಲ್ಲದಂತಾಗಿದೆ ಎಂದು ರಮೀಜಾ ಅವರ ಚಿಕ್ಕಮ್ಮ ಅಪ್ಸಾನಾ ಕಣ್ಣೀರು ಸುರಿಸಿದರು.

‘ಇಬ್ಬರು ಹೆಣ್ಣುಮಕ್ಕಳಿದ್ದು ಮುಂದೆ ಜೀವನ ನಡೆಸುವುದೇ ಅವರಿಗೆ ಕಷ್ಟವಾಗಿದೆ. ಸ್ವಂತ ಸೂರು ಇಲ್ಲ. ಹೊಟ್ಟೆಪಾಡಿಗೆ ಬೇರೆ ಆಸರೆಯಿಲ್ಲ. ಮಾನವೀಯತೆ ದೃಷ್ಟಿಯಿಂದ ಸರ್ಕಾರ ಪರಿಹಾರ ಒದಗಿಸಬೇಕು’ ಎಂದು ಮನವಿ ಮಾಡಿದರು.

ಗರಿಷ್ಠ ನೆರವು ಕೊಡಲು ತೀರ್ಮಾನ’

ಮೃತ ಮಹಿಳೆಯ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಬೇಕು, ಮನೆ ಹಾಗೂ ನಿವೇಶನ ನೀಡಬೇಕು ಎನ್ನುವುದು ಜನರ ಬೇಡಿಕೆಯಾಗಿತ್ತು. ಮನೆ ಹಾಗೂ ನಿವೇಶನ ಕೊಡಲು ಆಶ್ರಯ ಸಮಿತಿ ಅಧ್ಯಕ್ಷರಾದ ಶಾಸಕ ರಾಘವೇಂದ್ರ ಹಿಟ್ನಾಳ ಒಪ್ಪಿದ್ದಾರೆ ಎಂದು ನಗರಸಭೆ ಆಯುಕ್ತ ಎಚ್‌.ಎನ್‌. ಭಜಕ್ಕನವರ ಮಾಧ್ಯಮದವರಿಗೆ ತಿಳಿಸಿದರು.

‘ನಗರಸಭೆಯ ತುರ್ತು ಸಭೆ ಕರೆದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಕಾನೂನಿನ ಚೌಕಟ್ಟಿನಲ್ಲಿ ಗರಿಷ್ಠ ಆರ್ಥಿಕ ನೆರವು ಕೊಡಲು ತೀರ್ಮಾನಿಸಲಾಗಿದೆ. ಕುಟುಂಬ ಸದಸ್ಯರಿಗೆ ನೌಕರಿಗೆ ಕೊಡಬೇಕು ಎನ್ನುವ ಬೇಡಿಕೆಯನ್ನು ಕುಟುಂಬದವರು ಇಟ್ಟಿದ್ದು ಪರಿಶೀಲಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT