ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪ್ಪತ್ತೆರಡಾದರೂ ತಾಕತ್ತು ಕಡಿಮೆಯಾಗಿಲ್ಲ: ಸಂಗಣ್ಣ ಕರಡಿ

Published 14 ಜೂನ್ 2023, 14:23 IST
Last Updated 14 ಜೂನ್ 2023, 14:23 IST
ಅಕ್ಷರ ಗಾತ್ರ

ಕುಷ್ಟಗಿ: ‘ನನಗಿನ್ನೂ 72 ವರ್ಷ, ಇನ್ನೂ ದೈಹಿಕವಾಗಿ ಗಟ್ಟಿಯಾಗಿದ್ದೇನೆ, ತಾಕತ್ತು ಕಡಿಮೆಯಾಗಿಲ್ಲ. ಪಕ್ಷ ಟಿಕೆಟ್‌ ನೀಡಿದರೆ ಈಗಲೂ ಸ್ಪರ್ಧಿಸುತ್ತೇನೆ’ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಧಾನಸಭೆಗೆ ಸ್ಪರ್ಧಿಸಲು ಇನ್ನೂ ನಾಲ್ಕು ವರ್ಷ ಕಾಯಬೇಕು. ಬೇರೆ ಯಾವುದೇ ಅವಕಾಶಗಳೂ ಇಲ್ಲ. ಪಕ್ಷ ಬಯಸಿದರೆ ಈ ಬಾರಿಯೂ ಕಣಕ್ಕಿಳಿಯುತ್ತೇನೆ, ಬೇರೆಯವರಿಗೆ ಕೊಟ್ಟರೆ ಗೆಲುವಿಗೆ ದುಡಿಯುತ್ತೇನೆ. ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗಿ ಪಕ್ಷದಲ್ಲಿ ಸಕ್ರಿಯನಾಗಿರುತ್ತೇನೆ’ ಎಂದು ತಿಳಿಸಿದರು.

ಎಂದಾದರೊಂದು ದಿನ ಮಾಜಿ ಆಗಲೇಬೇಕು, ಇದು ಬಿಜೆಪಿ ಬಗ್ಗೆ ಜಿಗುಪ್ಸೆ ಅಲ್ಲ. ಸಚಿವನಾಗಿಲ್ಲ ಎಂಬುದನ್ನು ಬಿಟ್ಟರೆ ತಳಮಟ್ಟದಿಂದ ಎಲ್ಲ ರೀತಿಯ ಅಧಿಕಾರ ಅನುಭವಿಸಿರುವ ಸಂತಸ ಇದೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಳೆದ ಒಂಭತ್ತು ವರ್ಷದ ಸಾಧನೆಗಳ ಪಟ್ಟಿ ನೀಡಿದ ಸಂಗಣ್ಣ, ಇಷ್ಟಾದರೂ ಪಕ್ಷ ಸೋಲುವುದಕ್ಕೆ ಪ್ರಬಲ ನಾಯಕತ್ವಗುಣ ಹೊಂದಿದ್ದ ಯಡಿಯೂರಪ್ಪ ಅವರನ್ನುಮುಖ್ಯಮಂತ್ರಿ ಪದವಿಯಿಂದ ಬದಲಾಯಿಸಿದ್ದು, ಟಿಕೆಟ್‌ ಹಂಚಿಕೆ ವಿಳಂಬ, ಈಶ್ವರಪ್ಪ, ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಅವರಂಥ ಪ್ರಮುಖ ನಾಯಕರನ್ನು ಹಿಂದೆ ಸರಿಸಿದ್ದು ಪ್ರಮುಖ ಕಾರಣವಾಯಿತು. ಕೆಲ ಸಮುದಾಯಗಳಿಗೆ ಮೀಸಲಾತಿ ಹಕ್ಕು ನೀಡಿದ್ದನ್ನು ಜನತೆಗೆ ತಿಳಿಸುವ ವಿಚಾರದಲ್ಲಿಯೂ ಎಡವಿದ್ದೇವೆ ಎಂದರು.

ಆರು ತಿಂಗಳಿಂದಲೂ ಸಂಘಟನಾತ್ಮಕ ಕೆಲಸ ಮಾಡಿದ ಕಾಂಗ್ರೆಸ್‌ ಪಕ್ಷದವರು ಗ್ಯಾರಂಟಿ ಕಾರ್ಡ್‌ಗಳನ್ನು ಮನೆ ಮನೆಗೆ ತಲುಪಿಸಿದ ಮಾದರಿಯಲ್ಲಿ ನಮ್ಮ ಪಕ್ಷದ ಮಾಡಿದ ಕೆಲಸಗಳನ್ನು ಜನರಿಗೆ ತಲುಪಿಸಿದ್ದರೆ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತಿತ್ತು. ಬಿಜೆಪಿ ನಾಯಕತ್ವ ಕೊರತೆಯಿಂದ ಬಳಲುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಧಾನಪರಿಷತ್ತಿಗೆ ಜಗದೀಶ ಶೆಟ್ಟರ್ ಸ್ಪರ್ಧಿಸುತ್ತಿರುವುದು, ಲಕ್ಷ್ಮಣ ಸವದಿ ಶಾಸಕರಾಗಿರುವುದರಿಂದ ಅವರನ್ನು ಪಕ್ಷಕ್ಕೆ ಮರಳಿ ಕರೆ ತರುವ ಪ್ರಯತ್ನ ನಡೆದಿಲ್ಲ. ಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷದ ಸೋಲಿನ ವಿಚಾರಗಳು ಗೌಣವಾಗಲಿದ್ದು ಮೋದಿಯವರ ನಾಯಕತ್ವದಲ್ಲೇ ಚುನಾವಣೆಯಲ್ಲಿ ಪಕ್ಷ ಮತ್ತೆ ಹೆಚ್ಚಿನ ಗೆಲುವು ಪಡೆಯಲಿದೆ ಎಂದು ಹೇಳಿದರು.

ಶಾಸಕ ದೊಡ್ಡನಗೌಡ ಪಾಟೀಲ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT