ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಆಹಾರ ಕಿರಾಣಿ ಅಂಗಡಿಗೆ

ಕಾರ್ಯಕರ್ತೆಯರ ಕಾರ್ಯವೈಖರಿಗೆ ಸದಸ್ಯರ ಆಕ್ರೋಶ
Last Updated 18 ಫೆಬ್ರುವರಿ 2020, 10:11 IST
ಅಕ್ಷರ ಗಾತ್ರ

ಕುಷ್ಟಗಿ: ‘ತಾಲ್ಲೂಕಿನಲ್ಲಿಯ ಬಹುತೇಕ ಅಂಗನವಾಡಿಗಳಿಗೆ ಪ್ರತಿ ವರ್ಷ ಕೋಟ್ಯಂತರ ಹಣ ಖರ್ಚಾಗುತ್ತಿದೆ. ಆದರೆ ಪೂರೈಕೆಯಾಗುವ ಸಾಮಗ್ರಿಗಳನ್ನು ಮಕ್ಕಳು, ಮಹಿಳೆಯರ ಹೆಸರಿನಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷಬೇಧ ಮರೆತು ಆರೋಪಿಸಿದರು.

ಹನುಮನಾಳ ಭಾಗದ ಯಾವ ಅಂಗನವಾಡಿ ಕೇಂದ್ರದಲ್ಲೂ ಶನಿವಾರ ಅಡುಗೆ ಮಾಡುವುದಿಲ್ಲ. ಕೇವಲ ಹಾಲು ಕೊಟ್ಟು ಕಳಿಸುತ್ತಾರೆ ಎಂದು ಸದಸ್ಯೆ ಮಂಜುಳಾ ಪಾಟೀಲ ಪ್ರಸ್ತಾಪಿಸಿದರು.

ತಾಲ್ಲೂಕಿನ ಎಲ್ಲ ಕೇಂದ್ರಗಳಲ್ಲೂ ಇದೇ ಸ್ಥಿತಿ ಇದೆ ಎಂದು ಇತರೆ ಸದಸ್ಯರು ದನಿಗೂಡಿಸಿದರು. ಅಪೌಷ್ಟಿಕತೆಯಿಂದ ಬಳಲುವ ಬಡ ಕುಟುಂಬಗಳಿಗೆ ಸೇರಿದ ಮಕ್ಕಳು, ಗರ್ಭಿಣಿ, ಬಾಣಂತಿಯರಿಗಾಗಿ ಸರ್ಕಾರ ಅನೇಕ ಸೌಲಭ್ಯಗಳನ್ನು ತಂದಿದೆ. ಆದರೆ ಕಾರ್ಯಕರ್ತೆಯರು ಅವುಗಳನ್ನು ತಲುಪಿಸುವುದಿಲ್ಲ ಎಂದು ಮಲ್ಲಪ್ಪ ಗುಳಗೌಡ್ರ, ಯಂಕಪ್ಪ ಚವ್ಹಾಣ ಹೇಳಿದರು.

ಕಿರಾಣಿ ಅಂಗಡಿಗೆ: ಕೇಂದ್ರಗಳಲ್ಲಿ ಹೆಚ್ಚೆಂದರೆ ಮೂರು ನಾಲ್ಕು ಮಕ್ಕಳು ಇದ್ದರೂ ದಾಖಲೆಯಲ್ಲಿ ಎಲ್ಲ ಮಕ್ಕಳ ಹಾಜರಾತಿ ಹಾಕಿರುತ್ತಾರೆ. ಅಂಗನವಾಡಿಗಳಿಗೆ ಪೂರೈಕೆಯಾಗುವ ಆಹಾರ ಸಾಮಗ್ರಿಗಳೆಲ್ಲ ಕಿರಾಣಿ ಅಂಗಡಿಗಳ ಪಾಲಾಗುತ್ತಿವೆ. ಯಾರೂ ಕೇಳೋರಿಲ್ಲ ಹೇಳೋರಿಲ್ಲ, ಒಬ್ಬರ ಮೇಲೆಯೂ ಕ್ರಮ ಇಲ್ಲ ಎಂದು ದೋಟಿಹಾಳ ಗ್ರಾಪಂ ಸದಸ್ಯ ಗೌಸಸಾಬ್ ಕೊಣ್ಣೂರು ಸಭೆಗೆ ತಿಳಿಸಿದರು.

ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಡಿಪಿಒ ಶರಣಮ್ಮ ಈಗನೂರು ಉತ್ತರಿಸಿದರು. ಯಾರೇ ಕಾರ್ಯಕರ್ತೆಯರು ಆಹಾರ ಸಾಮಗ್ರಿಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಕ್ರಮ ಜರುಗಿಸುವುದಾಗಿ ತಿಳಿಸಿದರು.

ಶಿಕ್ಷಣ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ಬಿಇಒ ಚನ್ನಬಸಪ್ಪ ಸಭೆಗೆ ತಿಳಿಸಿದರು. ಈಗಾಗಲೇ ಮೂರು ಬಾರಿ ಪರೀಕ್ಷೆಗಳನ್ನು ನಡೆಸಲಾಗಿದೆ. ಶಿಕ್ಷಣದಲ್ಲಿ ಹಿನ್ನಡೆ ಹೊಂದಿರುವ ಮಕ್ಕಳನ್ನು ವರ್ಗೀಕರಿಸಿ ಅವರಿಗಾಗಿ ವಿಶೇಷ ತರಗತಿ ನಡೆಸಲಾಗುತ್ತಿದೆ. ಪರೀಕ್ಷೆಯ ಭಯ ನಿವಾರಣೆ ಮತ್ತು ಮಕ್ಕಳು ಪರೀಕ್ಷೆಯನ್ನು ಲವಲವಿಕೆಯಿಂದ ಬರೆಯಲಿ ಎಂಬುದಕ್ಕೆ ಎರಡು ಬಾರಿ ಆಪ್ತ ಸಮಾಲೋಚನೆ ಶಿಬಿರ ನಡೆಸಲಾಗಿದೆ ಎಂದರು.

ದೋಟಿಹಾಳ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರು ಸಭೆಗೆ ಬರುತ್ತಿಲ್ಲ. ಕೋರಂ ಇಲ್ಲದ ಕಾರಣ ಯಾವ ನಿರ್ಧಾರ ತೆಗೆದುಕೊಳ್ಳಲಾಗುತ್ತಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅನುದಾನ ಬಿಡುಗಡೆಗೂ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಅಧ್ಯಕ್ಷ ಗೌಸಸಾಬ್‌ ಅತೃಪ್ತಿ ಹೊರಹಾಕಿದರು. ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವುದಾಗಿ ಕಾರ್ಯನಿರ್ವಹಣಾಧಿಕಾರಿ ಕೆ.ತಿಮ್ಮಪ್ಪ ವಿವರಿಸಿದರು.

ಆರೋಗ್ಯ: ತಾಲ್ಲೂಕಿನಲ್ಲಿ ಒಂದು ಮಲೇರಿಯಾ ಪ್ರಕರಣ ವರದಿಯಾಗಿದ್ದರೆ ವಿವಿಧ ಗ್ರಾಮಗಳಲ್ಲಿ 17 ಡೆಂಗಿ ಪ್ರಕರಣಗಳು, ಕೆಲ ಚಿಕೂನ್‌ ಗುನ್ಯ ಪ್ರಕರಣಗಳು ವರದಿಯಾಗಿವೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆನಂದ ಗೋಟೂರು ಹೇಳಿದರು.

ಮಕ್ಕಳ ಮೈಮೇಲೆ ಗುಳ್ಳೆ: ಪಟ್ಟಣದ ಎಲ್‌ಐಡಿ ಖಾಸಿ ಪ್ರಾಥಮಿಕ ಶಾಲೆಯ ಬಾಲಕಿ ಮೈಮೇಲೆ ಸಾಕಷ್ಟು ಗುಳ್ಳೆಗಳು ಕಾಣಿಸಿಕೊಂಡಿರುವುದನ್ನು ವಿವರಿಸಲು ಸ್ವತಃ ಬಾಲಕಿ ಮತ್ತು ಪಾಲಕರನ್ನು ಸಭೆಗೆ ಕರೆತರಲಾಗಿತ್ತು. ಮಾಂಸ ಸೇವೆನೆಯಿಂದ ಹೀಗಾಗಿದೆ, ಮಾಂಸ ಮಾರಾಟ ನಿಷೇಧಿಸುವಂತೆ ಪಾಲಕ ಅಬ್ದುಲ್‌ ನಯೀಂ ಮನವಿ ಮಾಡಿದರು. ಈ ವಿಷಯವನ್ನು ಪುರಸಭೆ ಗಮನಕ್ಕೆ ತರುವುದಾಗಿ ತಿಳಿಸಲಾಯಿತು. ಮತ್ತು ಮಕ್ಕಳ ಮೈಮೇಲೆ ಗುಳ್ಳೆಗಳು ಕಾಣಿಸಿಕೊಂಡಿರುವ ಬಗ್ಗೆ ತಪಾಸಣೆ ನಡೆಸುವಂತೆ ಆರೋಗ್ಯಾಧಿಕಾರಿಗೆ ಸೂಚಿಸಲಾಯಿತು.

ಅಂಟರಠಾಣಾ ಪಂಚಾಯಿತಿ ಡಾಟಾ ಎಂಟ್ರಿ ಆಪರೇಟರ್‌ ಆತ್ಮಹತ್ಯೆ ನಂತರ ಅವರ ಬಡ ಕುಟುಂಬ ತೊಂದರೆಯಲ್ಲಿದ್ದು ಸೂಕ್ತ ಪರಿಹಾರ, ಉದ್ಯೋಗ ಭದ್ರತೆ ಒದಗಿಸುವಂತೆ ಸದಸ್ಯ ಶೈಲಜಾ ಕರಪಡಿ ಕಾರ್ಯನಿರ್ವಹಣಾಧಿಕಾರಿಯನ್ನು ಒತ್ತಾಯಿಸಿದರು. ಮಹಾಂತಮ್ಮ ಪೂಜಾರ ಅಧ್ಯಕ್ಷತೆ ವಹಿಸಿದ್ದು ಉಪಾಧ್ಯಕ್ಷೆ ವಿಶಾಲಾಕ್ಷಿ ಮದ್ಲೂರು, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ಬದಾಮಿ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT