ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ಸಿಇಒಗೆ ಕಳಪೆ ಚೆಕ್‌ಡ್ಯಾಂ ತನಿಖೆ ಹೊಣೆ

ತ್ರೈಮಾಸಿಕ ಕೆಡಿಪಿ ಸಭೆ ನಿರ್ಣಯ ಅಂಗೀಕಾರ
Last Updated 19 ಅಕ್ಟೋಬರ್ 2019, 11:11 IST
ಅಕ್ಷರ ಗಾತ್ರ

ಕುಷ್ಟಗಿ: ನರೇಗಾ ಯೋಜನೆಯಲ್ಲಿ ಕಳಪೆ ಮತ್ತು ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಮಲ್ಟಿ ಆರ್ಚ್ ಚೆಕ್‌ಡ್ಯಾಂಗಳಿಗೆ ಸಂಬಂಧಿಸಿದಂತೆ ಕಠಿಣ ಕ್ರಮ ಜರುಗಿಸುವುದು ಅಗತ್ಯವಾಗಿದ್ದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯೇ ಸಮಗ್ರ ತನಿಖೆ ನಡೆಸುವ ಸಂಬಂಧ ಶುಕ್ರವಾರ ಇಲ್ಲಿ ನಡೆದ ಕೆಡಿಪಿ ಸಭೆ ನಿರ್ಣಯಿಸಿತು.

ಶಾಸಕ ಅಮರೇಗೌಡ ಬಯ್ಯಾಪುರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಷಯವನ್ನು ಸ್ವತಃ ಪ್ರಸ್ತಾಪಿಸಲಾಯಿತು.

ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಉಪ ವಿಭಾಗದ ಎಇಇ ಶಿವಾನಂದ ನಾಗೋಡ ಅವರನ್ನು ತೀವ್ರ ತರಾಟೆಗೆ ಒಳಪಡಿಸಿದ ಶಾಸಕರು, 'ನೀವು ಮಾಡುವ ಕೆಲಸದಿಂದ ನನಗೆ ಕೆಟ್ಟ ಹೆಸರು ಬರುವಂತಾಗಿದೆ. ನಮ್ಮ ಪಕ್ಷದ ಮುಖಂಡರೇ ಬಹಿರಂಗವಾಗಿ ಈ ಕುರಿತು ಹೇಳಿರುವುದರಿಂದ ಸಾರ್ವಜನಿಕವಾಗಿ ಮುಜುಗರ ಅನುಭವಿಸುವಂತಾಗಿದೆ' ಎಂದು ಯಾರ ಹೆಸರನ್ನು ಪ್ರಸ್ತಾಪಿಸದೆ ಸಭೆಯಲ್ಲಿ ಅಸಮಾಧಾನ ಹೊರಹಾಕಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಲ್ಲ ಚೆಕ್‌ಡ್ಯಾಂಗಳ ಸ್ಥಳ ಪರಿಶೀಲನೆ ನಡೆಸಬೇಕು. ನಂತರ ಅದರ ಮಾಹಿತಿಯನ್ನು ಜಿಲ್ಲಾ ಪಂಚಾಯಿತಿ ಸಿಇಒಗೆ ನೀಡಬೇಕು ಮತ್ತು ಸಿಇಒ ಚೆಕ್‌ಡ್ಯಾಂಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಸಭೆ ನಿರ್ಣಯ ಅಂಗೀಕರಿಸಿತು. ಅದೇ ರೀತಿ ನರೇಗಾ ಯೋಜನೆಯಲ್ಲಿ ಸತ್ತವರ ಹೆಸರಿನಲ್ಲಿಯೂ ಹಣ ಪಾವತಿಯಾದರೆ ಅದಕ್ಕೆ ನೀವೇ ಹೊಣೆ ಎಂದು ಕಾರ್ಯ ನಿರ್ವಹಣಾಧಿಕಾರಿ ಕೆ.ತಿಮ್ಮಪ್ಪ ಅವರಿಗೆ ತಾಕೀತು ಮಾಡಲಾಯಿತು.

ಕೆರೆಗಳ ಒತ್ತುವರಿ ತೆರವುಗೊಳಿಸುವ ಕುರಿತು ಪ್ರಸ್ತಾಪಿಸಿದ ಶಾಸಕ, ತಾಲ್ಲೂಕಿನಲ್ಲಿರುವ ನಿಡಶೇಸಿ ಮತ್ತು ರಾಯನಕೆರೆಗಳನ್ನು ಬಿಟ್ಟು ಉಳಿದೆಲ್ಲ ಕೆರೆಗಳ ಸರಹದ್ದು ನಿರ್ಮಿಸಬೇಕಿದೆ. ಕೆರೆಗಳ ಒಡ್ಡುಗಳನ್ನು ಬಲಪಡಿಸಲು ನರೇಗಾ ಯೋಜನೆಯಲ್ಲಿ ಪ್ರತ್ಯೇಕ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಪಿಡಿಒಗಳಿಗೆ ಸೂಚಿಸಿದರು.

ಇತ್ತೀಚಿನ ದಿನಗಳಲ್ಲಿ ಸುರಿದ ಮಳೆಯಿಂದ ಕೃಷಿ, ತೋಟಗಾರಿಕೆ ಕ್ಷೇತ್ರಗಳಲ್ಲಿನ ಬೆಳೆ ಹಾನಿ ಮತ್ತು ಪೂರ್ಣ ಪ್ರಮಾಣದಲ್ಲಿ ಹಾಗೂ ಭಾಗಶಃ ಹಾನಿಗೀಡಾದ ಮನೆಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸುವಂತೆ ತಹಶೀಲ್ದಾರ್‌ ಸಿದ್ದೇಶ ಅವರಿಗೆ ಶಾಸಕ ಹೇಳಿದರು.

ಪಶುಸಂಗೋಪನೆ ಇಲಾಖೆಯ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಪ್ರಸ್ತಾಪಿಸಿದ ಜಿ.ಪಂ ಸದಸ್ಯ, ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಮೊತ್ತದ ಔಷಧ ಬಳಕೆಯಾಗದೆ ಅವಧಿ ಮೀರಿಹೋಗಿದೆ. ಇಂಥ ಔಷಧವನ್ನೇ ಆಸ್ಪತ್ರೆ ವೈದ್ಯರು ರೆಫ್ರಿಜಿರೇಟರ್‌ನಲ್ಲಿ ಸಂಗ್ರಹಿಸಿಟ್ಟಿದ್ದಾರೆ. ರೈತರಿಗೆ ಯಾವುದೇ ಪ್ರಯೋಜನ ದೊರೆಯದಿರುವುದು ಎಷ್ಟರಮಟ್ಟಿಗೆ ಸರಿ ಎಂದೆ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ವಿವರಿಸಿದ ಶಾಸಕ ಬಯ್ಯಾಪುರ, ಸಹಾಯಕ ನಿರ್ದೇಶಕರ ಹುದ್ದೆಯನ್ನು ವಹಿಸಿಕೊಳ್ಳಲು ಯಾರೊಬ್ಬರೂ ಮುಂದೆಬರುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಫಸಲ್‌ ವಿಮಾ ಯೋಜನೆಯ ವ್ಯಾಪ್ತಿಗೆ ಎಲ್ಲ ರೈತರೂ ಒಳಪಡುವಂತೆ ಕೃಷಿ ಇಲಾಖೆ ಮುತುವರ್ಜಿ ವಹಿಸುವಂತೆ ಶಾಸಕ ಸೂಚಿಸಿದರು. ಆದರೆ ಬಹುತೇಕ ರೈತರಿಗೆ ವಿಮೆ ಪರಿಹಾರ ಬಂದಿಲ್ಲ ಎಂದು ಜಿ.ಪಂ ಸದಸ್ಯರು ಹೇಳಿದರು. ಅಕ್ಕಪಕ್ಕದ ರೈತರು ಒಂದೇ ರೀತಿಯ ಬೆಳೆ ಬೆಳೆದರೂ ಒಬ್ಬ ರೈತನಿಗೆ ಪರಿಹಾರ ನೀಡಿರುವುದು ಇನ್ನೊಬ್ಬರಿಗೆ ಅನ್ಯಾಯ ಮಾಡಿದಂತಾಗಿದೆ. ಇಂಥ ಲೋಪವನ್ನು ಸರಿಪಡಿಸಬೇಕು ಎಂದರು.

ಗಿಳಿಪಾಠ: ವಿವಿಧ ಇಲಾಖೆಗಳ ಮೇಲಿನ ವಿಷಯಗಳ ಚರ್ಚೆ ನಡೆಯಿತು. ಆದರೆ ಬಹುತೇಕ ಅಧಿಕಾರಿಗಳು ಪ್ರಗತಿಯಲ್ಲಿವೆ ಎಂದು ಗಿಳಿಪಾಠ ಒಪ್ಪಿಸಿ ಕಾಲಹರಣ ಮಾಡುತ್ತಿದ್ದುದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸದಸ್ಯರಿಗೆ ಯೋಜನೆಗಳ ಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಶಾಸಕ ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಹಾಂತಮ್ಮ ಪೂಜಾರ, ಉಪಾಧ್ಯಕ್ಷೆ ವಿಶಾಲಾಕ್ಷಿ ಮದ್ಲೂರು, ತಹಶೀಲ್ದಾರ್‌ ಸಿದ್ದೇಶ್‌, ಕಾರ್ಯನಿರ್ವಹಣಾಧಿಕಾರಿ ಕೆ.ತಿಮ್ಮಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT