ಶನಿವಾರ, ಅಕ್ಟೋಬರ್ 1, 2022
20 °C

ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ಒದಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ಕೋವಿಡ್ ಪರಿಹಾರ, ರೇಷನ್ ಕಿಟ್, ವೈದ್ಯಕೀಯ ಸಹಾಯ, ಕೋವಿಡ್ ಜೀವ ವಿಮೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ತಾಲ್ಲೂಕು ಸಮಿತಿ ಮುಖಂಡರು ಮಂಗಳವಾರ ಕಾರ್ಮಿಕ ಇಲಾಖೆ ಮುಂದೆ ಪ್ರತಿಭಟನೆ ಮಾಡಿದರು.

ಕೊರೊನಾ ಲಾಕ್‌ಡೌನ್‌ನಿಂದ ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಕಾರ್ಮಿಕರಿಗೆ ರಾಜ್ಯ ಸರ್ಕಾರ ಘೋಷಿಸಿದ ₹3 ಸಾವಿರ ಪರಿಹಾರ ಧನ ಆಧಾರ್ ನಂಬರ್ ಆಧರಿಸಿದ ಖಾತೆಗೆ ಜಮಾ ಮಾಡುತ್ತಿದ್ದು, ಕೆಲ ತಾಂತ್ರಿಕ ಸಮಸ್ಯೆ ದೋಷದಿಂದ ಕೆಲ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

’ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮಾತ್ರ ಸರ್ಕಾರ ಕಿಟ್ ನೀಡುವಂತೆ ಸೂಚಿಸಿರುವುದು ಖಂಡ ನೀಯ. ಅದರಲ್ಲಿ ಕೆಲ ಕಟ್ಟಡ ಕಾರ್ಮಿಕರ ಕಾರ್ಡ್‌ಗಳು ನವೀಕರಣವಾಗಿಲ್ಲ. ಕಾರ್ಮಿಕರಲ್ಲಿ ಕಾರ್ಮಿಕ ಕಾರ್ಡ್ ನೋಂದಣಿ ಮಾಡಿಸುವ ಕುರಿತು ಮಾಹಿತಿಯೇ ಇಲ್ಲ. ಸರ್ಕಾರ ನೀಡಿರುವ ಕಿಟ್‌ಗಳು ಕಳಪೆ ಗುಣಮಟ್ಟದಿಂದ ಕೂಡಿವೆ‘ ಎಂದು ಅವರು ತಿಳಿಸಿದರು.

ಕೋವಿಡ್‌ನಿಂದ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ₹5 ಲಕ್ಷ ನೀಡಲು ಮನವಿ ಮಾಡಲಾಗಿತ್ತು. ಆದರೆ  ಸರ್ಕಾರ ₹2 ಲಕ್ಷ ಮಾತ್ರ‌ ನೀಡು ವುದಾಗಿ ಘೋಷಣೆ ಮಾಡಿದೆ ಎಂದರು.

ವೈದ್ಯಕೀಯ ಸಹಾಯಧನ, ಮದುವೆ ಸಹಾಯಧನ ವಿಳಂಬ, ಸಹಜ ಮರಣದ ಮೊತ್ತ ಹೆಚ್ಚಳ, ಹೆರಿಗೆ ಭತ್ಯೆ, ಮನೆ ನಿರ್ಮಾಣಕ್ಕೆ ₹5 ಲಕ್ಷ ಸಹಾಯ ಧನ, ಪಿಂಚಣಿ, ಮಕ್ಕಳಿಗೆ ಶೈಕ್ಷಣಿಕ ಸಹಾಯ, ಸ್ಲಂ ಬೋರ್ಡ್ ವತಿಯಿಂದ ಕಾರ್ಮಿಕರಿಗೆ ಮನೆ ನಿರ್ಮಾಣ, ಬೋಗಸ್ ಕಾರ್ಡ್‌ಗಳ ನಿಯಂತ್ರಣ, ಕಾರ್ಮಿಕ ಇಲಾಖೆಗೆ ಪ್ರತ್ಯೇಕ ಸಾಫ್ಟ್‌ವೇರ್, ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ನೋಂದಣಿ ಪ್ರತ್ಯೇಕ ಸೇರಿದಂತೆ ಇತರೆ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ನಿರುಪಾದಿ ಬೆಣಕಲ್, ಲಕ್ಷ್ಮಿದೇವಿ, ಮಂಜುನಾಥ ಡಗ್ಗಿ, ಮುತ್ತಣ್ಣ, ಮಹಾದೇವಿ, ಕೃಷ್ಣಪ್ಪ, ಬಸವರಾಜ, ಹನುಮಂತ, ಸೋಮು, ಜಮೀರ್, ಹೀರಾ, ಜಾವೀದ್ ಅಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು