ಸೋಮವಾರ, ಮಾರ್ಚ್ 20, 2023
30 °C

ಕಾರಟಗಿ: ಇದ್ದೂ ಇಲ್ಲದಂತಾದ ಗುರುಭವನ!

ಕೆ.ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

Prajavani

ಕಾರಟಗಿ: ಪಟ್ಟಣದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆವರಣ ದಲ್ಲಿರುವ ಗುರುಭವನ ನಿರ್ಮಾಣವಾಗಿ 10 ವರ್ಷಗಳಾಗಿವೆ. ನೂರಾರು ಸಮಸ್ಯೆಗಳ ಮಧ್ಯೆ ಶೈಕ್ಷಣಿಕ ಚಟುವಟಿಕೆ ನಡೆಸಲು ಹರಸಾಹಸ ಪಡಬೇಕಿದೆ.

ಕೊಪ್ಪಳದ ಗವಿಮಠದ ಗವಿಶ್ರೀ ಪ್ರವಚನದ ವೇಳೆ ಶಾಸಕ ಬಸವರಾಜ ದಢೇಸೂಗೂರು ಮತ್ತು ಗುತ್ತಿಗೆದಾರವೊಬ್ಬರು ಗುರು ಭವನದ ಅಭಿವೃದ್ದಿಗೆ ಮುಂದಾಗಿ, ಮುರಂ ಹಾಕಿಸಿ, ತಗ್ಗಿನಲ್ಲಿರುವಂತೆ ಮಾಡಿದ್ದಾರೆ ಎಂಬ ಆಕ್ಷೇಪ ವ್ಯಕ್ತವಾಗಿತ್ತು.

‘ನೆಲ ಸಮತಟ್ಟು ಮಾಡಿ, ಆವರಣ ಗೋಡೆ ನಿರ್ಮಿಸಲಾ ಗುವುದು ಎಂಬ ಭರವಸೆ ಸಿಕ್ಕಿತ್ತು. ಆದರೆ, ಅಭಿವೃದ್ಧಿಗೆ ಪೂರಕವಾದ ಯಾವ ಕಾರ್ಯಗಳೂ ನಡೆಯಲಿಲ್ಲ’ ಎಂದು ಶಿಕ್ಷಕರ ಸಂಘದ ಸದಸ್ಯರು ಆರೋಪಿಸುತ್ತಾರೆ. ‘ಗುರುಭವನದಲ್ಲೇ ವಸತಿಗೃಹಗಳಿದ್ದು, ಇದರಲ್ಲಿ 8 ಶಿಕ್ಷಕರ ಕುಟುಂಬಗಳು ವಾಸಿಸುತ್ತಿವೆ. ಅವರ ವೇತನದಲ್ಲಿ ಕಡಿತವಾಗುವ ಹಣ ಪುರಸಭೆಗೆ ಜಮೆ ಆಗುತ್ತದೆ. ಆದರೂ 10 ವರ್ಷಗಳಿಂದ ಸುಣ್ಣ, ಬಣ್ಣ ಕಂಡಿಲ್ಲ. ಮೂಲಸೌಕರ್ಯ ಕೊರತೆ ಸೇರಿದಂತೆ ಇತರೆ ಸಮಸ್ಯೆ ಪರಿಹಾರವಾಗಿಲ್ಲ’ ಎಂದು ಅವರು ಹೇಳುತ್ತಾರೆ.

ಮಳೆಯಾದರೆ ಮನೆಯೊಳಗೆ ನೀರು ಬರುತ್ತದೆ. ಚರಂಡಿ ತುಂಬಿ ಮಲಿನ ನೀರು ಹರಿದು ದುರ್ವಾಸನೆ ಬರುತ್ತದೆ. ಹೈಮಾಸ್ಟ್‌ ಕಂಬಗಳನ್ನು ಅಳವಡಿಸಿದ್ದರೂ ಬಲ್ಬ್‌ಗಳು ಬೆಳಗುವುದಿಲ್ಲ. ಕಿಟಕಿ ತೆರೆದರೆ ಸೊಳ್ಳೆಗಳ ಹಾವಳಿ ಜೊತೆಗೆ ಅಪಾಯಕಾರಿ ಹುಳುಗಳ, ಕ್ರಿಮಿಗಳ ಭಯ ಕಾಡುತ್ತದೆ’ ಎಂದು ಶಿಕ್ಷಕರು ಸಮಸ್ಯೆ ತೋಡಿಕೊಳ್ಳುತ್ತಾರೆ.

‘ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ನಮ್ಮ ಮನವಿಗೆ ಸ್ಥಳೀಯ ಸಂಸ್ಥೆ, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ’ ಎಂದು ಶಿಕ್ಷಕರಾದ ಶ್ಯಾಂಸುಂದರ್‌, ಜಂಭುನಾಥ, ರಾಜು ರಂಗೇರಿ ಮತ್ತು ಶಾರದಮ್ಮ ಬೇಸರ ವ್ಯಕ್ತಪಡಿಸುತ್ತಾರೆ. 

‘ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ನಮ್ಮದೇ ವೇತನದಲ್ಲಿ ಹಣ ಕಡಿತ ಮಾಡಿದರೂ ಗುರು ಭವನದ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಗುರುಭವನದ ಅಭಿವೃದ್ದಿ, ನಿರ್ವಹಣೆ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಅವಿಭಜಿತ ಗಂಗಾವತಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಮರೇಶ ಮೈಲಾಪುರ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.