ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಆಗರ ‘ಹಾಗಲದಾಳ’

Last Updated 8 ಜೂನ್ 2022, 3:47 IST
ಅಕ್ಷರ ಗಾತ್ರ

ತಾವರಗೇರಾ: ಹಾಗಲದಾಳ ಗ್ರಾಮ ಸೌಕರ್ಯಗಳ ಕೊರತೆಯಿಂದ ಸೊರಗಿದೆ.

ಶುದ್ಧ ಕುಡಿಯುವ ನೀರಿನ ಅಭಾವ, ನರೇಗಾ ಕೆಲಸ ಇಲ್ಲದೆ ಖಾಲಿ ಕುಳಿತ ಕೂಲಿ ಕಾರ್ಮಿಕರು, ಶಾಲಾ ಕಾಲೇಜು ತರಗತಿಗಳ ಸಮಯಕ್ಕೆ ಬಾರದ ಬಸ್‌ಗಳು, ಶಾಲೆಯಲ್ಲಿ ಶಿಕ್ಷಕರ ಕೊರತೆ, ಬಿಸಿಯೂಟಕ್ಕೆ ಕಳಪೆ ಆಹಾರ ಧಾನ್ಯಗಳ ಪೂರೈಕೆ, ಅಡುಗೆ ಕೋಣೆಯಲ್ಲಿ ಹರಿದಾಡುವ ಮಳೆ ನೀರು, ಅರ್ಧಕ್ಕೆ ನಿಂತ ಶೌಚಾಲಯ ಕಾಮಗಾರಿ.

ಗ್ರಾಮಕ್ಕೆ ಕಾಲಿಟ್ಟರೆ ಸಮಸ್ಯೆಗಳ ಸರಮಾಲೆ ಕಾಣುತ್ತದೆ. ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅವುಗಳ ಇತ್ಯರ್ಥಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪ ನಿವಾಸಿಗಳದ್ದು.

ತಾವರಗೇರಾದಿಂದ 7 ಕಿ.ಮೀ ದೂರದ ಹಾಗಲದಾಳ ಗ್ರಾಮದ ಬಹು ತೇಕರು ಮಳೆ ಆಧಾರಿತ ಕೃಷಿಯನ್ನೇ ಅವಲಂಬಿಸಿದ್ದಾರೆ. ಸರ್ಕಾರದ ಹಲವು ಯೋಜನೆಗಳು ಅವರಿಗೆ ತಲುಪುತ್ತಿಲ್ಲ. ಗ್ರಾಮ ಪಂಚಾಯಿತಿ ಗ್ರಾಮದ ಸ್ವಚ್ಛತೆಗೆ ಗಮನ ಹರಿಸುತ್ತಿಲ್ಲ. ಸಮರ್ಪಕವಾದ ಚರಂಡಿ ಇಲ್ಲದೆ ಮಳೆಗಾಲದಲ್ಲಿ ನೀರು ರಸ್ತೆಗಳ ಮೇಲೆ ಹರಿದಾಡುತ್ತದೆ. ತಗ್ಗು ಪ್ರದೇಶಗಳಲ್ಲಿ ಕೊಳಚೆ ನೀರು ನಿಂತು, ಅವು ಸೊಳ್ಳೆ ಉತ್ಪತ್ತಿಯ ತಾಣ ವಾಗಿವೆ. ಇದರಿಂದ ಸ್ಥಳೀಯರು ಆಗಾಗಾ ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂದು ನಿವಾಸಿ ಶೇಖರಗೌಡ ಪಾಟೀಲ ಹೇಳಿಕೆ ನೀಡಿದ್ದಾರೆ.

ಗ್ರಾಮದಿಂದ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಕುಷ್ಟಗಿ–ತಾವರಗೇರಾ ಮಾರ್ಗದ ಬಸ್‌ ಗ್ರಾಮದ ಹೊರಗೆ 3 ಕಿ.ಮೀ ದೂರದ ಮುಖ್ಯ ರಸ್ತೆಯಲ್ಲಿ ನಿಲ್ಲುತ್ತದೆ. ಅಲ್ಲೇ ಪ್ರಯಾಣಿಕರನ್ನು ಇಳಿಸಿ ಹೋಗುತ್ತಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ವಾರಕ್ಕೊಮ್ಮೆಯೂ ಬರುತ್ತಿಲ್ಲ. ಪಿಡಿಒ ಸಹ ಸ್ವಚ್ಛತೆಗೆ ಕಾಳಜಿ ವಹಿಸುತ್ತಿಲ್ಲ. 4 ತಿಂಗಳಿಂದ ಉದ್ಯೋಗ ಖಾತರಿ ಯೋಜನೆಯ ಕೆಲಸವು ಕೂಲಿಕಾರರಿಗೆ ಲಭಿಸಿಲ್ಲ ಎಂದು ಆರೋಪಿಸಿದರು.

ಬಿಸಿಯೂಟದ ಆಹಾರ ಸಾಮಗ್ರಿಗಳು ಕಳಪೆಯಾಗಿವೆ. ಗೋಧಿ ಕಾಳು ಹುಳು ತಿಂದಿವೆ. ಶುದ್ಧ ಆಹಾರ ತಯಾರಿಸಲು ಅಕ್ಷರ ದಾಸೋಹ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ವಚ್ಛತಾ ಯೋಜನೆಗಳಿಗೆ ಆದ್ಯತೆ ನೀಡ ಬೇಕು ಎಂಬುದು ಗ್ರಾಮಸ್ಥರ ಬೇಡಿಕೆ.

*ಹಾಗಲದಾಳ ಶಾಲೆಗೆ ಕಳಪೆ ಗೋಧಿ ವಿತರಣೆ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಈ ಬಗ್ಗೆ ಮುಖ್ಯ ಶಿಕ್ಷಕರೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು

ಕೆ. ಶರಣಪ್ಪ, ಕುಷ್ಟಗಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT