ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಮಳೆ: ಬಾಡುತ್ತಿದೆ ಬೆಳೆ

27 ಸಾವಿರ ಹೆಕ್ಟೇರ್‌ ಪೈಕಿ 12786 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬೀಜ ಬಿತ್ತನೆ
Last Updated 15 ಜೂನ್ 2021, 4:51 IST
ಅಕ್ಷರ ಗಾತ್ರ

ಕುಕನೂರು: ಮುಂಗಾರಿನ ಆರಂಭದಲ್ಲಿ ಆರ್ಭಟಿಸಿದ್ದ ಮಳೆ ಇದೀಗ ಮರೆಯಾಗಿದೆ. ರೈತರಲ್ಲಿ ಆತಂಕದ ಛಾಯೆ ಕವಿಯುವಂತೆ ಮಾಡಿದೆ.

ಆರಂಭದಲ್ಲಿ ತಾಲ್ಲೂಕಿನ ಕೆಲ ಭಾಗಗಳಲ್ಲಿ ಬಿತ್ತನೆಗೆ ಅನುಕೂಲವಾಗುವಂತೆ ಮಳೆ ಸುರಿದಿತ್ತು. ಹಲವು ಭಾಗಗಳಲ್ಲಿ ಮಳೆ ಕ್ಷೀಣಿಸಿದ್ದರಿಂದ ಬಿತ್ತನೆ ಕುಂಠಿತಗೊಂಡಿತ್ತು. ಇದರಿಂದ ಬಿತ್ತನೆ ಮಾಡಿದ, ಬಿತ್ತಬೇಕಾದ ರೈತರು ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 27 ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಅದರಲ್ಲಿ 3 ಸಾವಿರ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯವಿದೆ. ಉಳಿದ 24 ಹೆಕ್ಟೇರ್ ಭೂಮಿ ಮಳೆ ಆಧಾರಿತ ಪ್ರದೇಶವಾಗಿದೆ. ಇದರಲ್ಲಿ 12,786 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಈ ಬಾರಿ ಬೀಜ ಬಿತ್ತನೆ ಮಾಡಲಾಗಿದೆ. ಈ ಪೈಕಿ 2,469 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಹಾಕಲಾಗಿದೆ. 5,506 ಹೆಕ್ಟೇರ್‌ನಲ್ಲಿ ಹೆಸರು, 4,867 ಹೆಕ್ಟೇರ್‌ನಲ್ಲಿ ತೊಗರಿ, 828 ಹೆಕ್ಟೇರ್‌ನಲ್ಲಿ ಸಜ್ಜೆ ಬಿತ್ತನೆ ಮಾಡಲಾಗಿದೆ.

ತಾಲ್ಲೂಕಿನಲ್ಲಿ ಕೇವಲ ಶೇ 40.16 ಮಾತ್ರ ರಷ್ಟು ಬಿತ್ತನೆಯಾಗಿದೆ. ಮಳೆ ಅಭಾವದಿಂದಾಗಿ ಉಳಿದ ಶೇ 60 ರಷ್ಟು ಪ್ರದೇಶದಲ್ಲಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ತಾಲ್ಲೂಕಿನ 3 ಹೋಬಳಿಗಳ ಪೈಕಿ ಕುಕನೂರು ಭಾಗದಲ್ಲಿ ಶೇ 63 ರಷ್ಟು ಬಿತ್ತನೆಯಾಗಿದ್ದರೆ, ಯರೇಹಂಚಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿನ್ನಾಳ, ಯರೇಹಂಚಿನಾಳ, ಸಿದ್ನೇಕೊಪ್ಪ ಗ್ರಾಮಗಳಲ್ಲಿ ಮಳೆಯ ಅಭಾವ ಕಂಡು ಬಂದಿದೆ.

ಮಂಗಳೂರು ವ್ಯಾಪ್ತಿಯಲ್ಲಿ ಶೇ 44ರಷ್ಟು ಬಿತ್ತನೆಯಾಗಿದ್ದು, ಕುದುರಿಮೋತಿ, ನೆಲಜೇರಿ, ಶಿರೂರು ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಆದರೂ ರೈತರು ಮಳೆ ಬರಬಹುದು ಎನ್ನುವ ಆಶಾಭಾವನೆಯಿಂದ ಭೂಮಿ ತೇವಾಂಶವಿದ್ದ ಕಡೆಗಳಲ್ಲಿ ಕೃಷಿ ಚಟುವಟಿಕೆ ನಡೆಸಿದ್ದಾರೆ.

ಮಳೆ ಕೈಕೊಟ್ಟಿದ್ದು, ಶುಷ್ಕ ವಾತಾವರಣ ಸೃಷ್ಟಿಯಾಗಿದೆ. ಬಿತ್ತಿದ ಬೆಳೆ ಅಲ್ಲಲ್ಲಿ ಒಣಗಿ ಹೋಗುತ್ತಿರುವುದು ಕಂಡುಬಂದಿದೆ. ಇದೇ ರೀತಿಯ ಶುಷ್ಕ ವಾತಾವರಣ ಕಂಡುಬಂದರೆ ಬಿತ್ತಿದ ಬೆಳೆ ಮಣ್ಣುಪಾಲಾಗುವುದು ನಿಶ್ಚಿತ. ಹೀಗಾದರೆ ಈ ವರ್ಷವೂ ಬರಗಾಲ ಅನುಭವಿಸಬೇಕಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ಮಳೆಯ ಪ್ರಮಾಣ ಕಡಿಮೆಯಾಗಿ
ರುವುದರಿಂದ ಈಗಾಗಲೇ ಬಿತ್ತಿದ ಬೆಳೆಗೆ ಯೂರಿಯಾ ಗೊಬ್ಬರದ ಬಳಕೆ ಕಡಿಮೆ ಮಾಡಬೇಕು. ಅವಶ್ಯಕತೆ ಇದ್ದರೆ ನೀರಿನಲ್ಲಿ ಕರಗುವ ಗೊಬ್ಬರಗಳನ್ನು ಹಾಕಬೇಕು. ಪರ್ಯಾಯ ನೀರಾವರಿ ವ್ಯವಸ್ಥೆ ಇದ್ದರೆ ನೀರು ಹಾಯಿಸಬೇಕು’ ಎಂದು ಸಲಹೆ ನೀಡುತ್ತಾರೆ ಸಹಾಯಕ ಕೃಷಿ ಅಧಿಕಾರಿ ಬಸವರಾಜ ತೇರಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT